ಭಾನುವಾರ, ಮೇ 16, 2021
26 °C

ಸಾಹಿತ್ಯ ಚಲನಶೀಲ ಆಗಿರಬೇಕು: ಮಲ್ಲೇಪುರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯಾವುದೇ ಸಾಹಿತ್ಯ ಜಡರಾಹಿತ್ವ ಆಗಿರಬಾರದು, ಚಲನಶೀಲ ಆಗಿರಬೇಕು ಎಂದು ರಾಜ್ಯ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಪ್ರತಿಪಾದಿಸಿದರು.`ಡಾ. ಎಂ.ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನಾ ಸಮಿತಿ~ ಹಾಗೂ ನಗರದ `ಜನಶಕ್ತಿ ಸೇವಾ ಟ್ರಸ್ಟ್~ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಎಂ.ವೀರಪ್ಪ ಮೊಯಿಲಿ ಅವರ ಸಾಹಿತ್ಯದ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾಹಿತ್ಯ ಕೃತಿ ಜಡವಾದುದು ಎಂದು ಯಾರೂ ಪರಿಭಾವಿಸಬೇಕಾಗಿಲ್ಲ. ಮತ್ತೆ ಸಾಹಿತ್ಯವನ್ನು ಭಾಷೆಗೆ ಸೀಮಿತ ಮಾಡುವುದೂ ಬೇಡ. ಜತೆಗೆ ಆ ಕೃತಿ ಆ ಕಾಲಘಟ್ಟಕ್ಕೆ ಸೀಮಿತವಾದುದು ಎಂದು ತಿಳಿಯುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.21ನೇ ಶತಮಾನದಲ್ಲಿ ವಿಮರ್ಶೆ ದೃಷ್ಟಿಕೋನ ಬದಲಾಗಬೇಕಿದೆ. ಅದು ಚಲನೆಯ ದಿಕ್ಕಿನಲ್ಲಿ ಸಾಗಬೇಕು. ಅಂತರಸಂಸ್ಕೃತಿ ಧ್ಯಾನಕೋಶದಲ್ಲಿ ವಿಮರ್ಶೆಯನ್ನು ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟರು.ಸಾಹಿತ್ಯವನ್ನು 20ನೇ ಶತಮಾನದಲ್ಲಿ ಪರಿಭಾವಿಸುವ, ಪ್ರತಿಕ್ರಿಯಿಸುವ ಕ್ರಮಕ್ಕೂ 21ನೇ ಶತಮಾನದಲ್ಲಿ ನೋಡುವ ಕ್ರಮಕ್ಕೂ ಬದಲಾವಣೆ ಆಗಬೇಕಿದೆ. ಆಗಿನದಕ್ಕೂ ಹಾಗೂ ಈಗಿನ ಕಾಲಘಟ್ಟಕ್ಕೂ ಭಿನ್ನ ಚಹರೆ ಇವೆ.21ನೇ ಶತಮಾನದಲ್ಲಿ ಜಾಗತೀಕರಣ, ಉದಾರೀಕರಣದಿಂದಾಗಿ ಸಾಹಿತ್ಯ, ಸಂಸ್ಕೃತಿಯನ್ನು ಪರಿಭಾವಿಸುವ, ಪ್ರತಿಕ್ರಿಯಿಸುವ ಕ್ರಮದ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ಮೊಯಿಲಿ ಅವರ ಸಾಹಿತ್ಯ ಕೃತಿ ಹಾಗೂ ಕರ್ನಾಟಕ ಬೇರೆ ಸಾಹಿತ್ಯ ಕೃತಿಗಳನ್ನು ಪರಿಭಾವಿಸುವ ಕ್ರಮ ಬೇರೆ ಬಗೆಯದೇ ಆಗಬೇಕು ಎಂದರು.ಮೊಯಿಲಿ ಅವರ ಸಾಹಿತ್ಯ ಕೃತಿಗಳು ದೇಶಿಯ ನೆಲೆಯ ಗರ್ಭಕೋಶದಿಂದ ರೂಪುಗೊಂಡಿವೆ. ಅದನ್ನು ಪಾಶ್ಚಾತ್ಯ ಹಾಗೂ ಭಾರತದ ವಿಮರ್ಶೆ ದೃಷ್ಟಿಯಿಂದ ನೋಡಲಿಕ್ಕೆ ಆಗುವುದಿಲ್ಲ. ಅವುಗಳನ್ನು ದೇಸಿಯ ನೆಲೆಯ ಚಿಂತನಾಕ್ರಮದಿಂದ ನೋಡಬೇಕು ಎಂದ ಅವರು, ಮೊಯಿಲಿ ಕೃತಿಗಳು ತುಳು ಸಂಸ್ಕೃತಿಯನ್ನು, ದಕ್ಷಿಣ ಕನ್ನಡದ ಅಗಾಧ ಸತ್ಯವನ್ನು ತೀವ್ರವಾಗಿ ಪರಿಣಾಮಕಾರಿಯಾಗಿ ತೋರಿಸಿವೆ ಎಂದರು.ಜರ್ಮನಿ ವೂರ್ತ್ಸ್‌ಬರ್ಗ್ ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಬಿ.ಎ.ವಿವೇಕ್ ರೈ `ಅನ್ವೇಷಣೆ ಮತ್ತು ಸುಧಾರಣೆ: ಮೊಯಿಲಿ ಮಾದರಿ~ ಕುರಿತು ಉಪನ್ಯಾಸ ನೀಡಿ, ರಾಜಕಾರಣ, ಆಡಳಿತ ಪ್ರದರ್ಶನ ಹಾಗೂ ಆಡಳಿತ ಮಾಡುವುದಕ್ಕೆ ಮಾತ್ರ ಇರುವುದಲ್ಲ. ಆದರ್ಶದ ಕನಸು ಕಾಣದವನು ಸಾಹಿತ್ಯ, ಸಮಾಜ ಸುಧಾರಣೆ ಮಾಡಲಿಕ್ಕೆ ಆಗುವುದಿಲ್ಲ. ಈಗ ನಗರದ ಪೋಷಾಕು, ಸೌಲಭ್ಯಗಳನ್ನು ಸೀಮಿತವಾಗಿ ನೋಡುವುದು ಬೇಡ. ಹಳ್ಳಿ ಬದುಕಿನ ಚಿಂತನಾ ಕ್ರಮಗಳನ್ನು ಅನ್ವೇಷಣೆ ಮಾಡಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಭಯೋತ್ಪಾದನೆ ಬಗ್ಗೆ ಎಳೆಯ ಮನಸ್ಸಿನಲ್ಲಿ ಪೂರ್ವಗ್ರಹಗಳನ್ನು ಬಿತ್ತಿ ಮನಸ್ಸನ್ನು ವಿಷಮಯ ಮಾಡುತ್ತೇವೆ. ತಮಗೆ ಮತ ಹಾಕದಿದ್ದರೆ ಬೆದರಿಕೆ ಹಾಕುವಂತಹ ಭಯೋತ್ಪಾದನೆ ಹಳ್ಳಿಯಲ್ಲಿಯೂ ಇದೆ. ಜಾತಿ, ಧರ್ಮ, ಹಣದ ಕಾರಣದಿಂದ ಅಲಿಖಿತ ಭಯೋತ್ಪಾದನೆ ದೇಶದಲ್ಲಿದೆ. ಇವುಗಳ ಬಗ್ಗೆ ಚರ್ಚೆ ಮಾಡದೆ ಸುಧಾರಣೆ ಮಾಡಲಿಕ್ಕೆ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಈಗ ಭೂಮಿಯ ವಿಚಾರ ಬಂದಾಗ ಕೊಳ್ಳೆ ಹೊಡೆಯುವುದು, ಸುಧಾರಣೆ ಎಂದಾಗ ಅಭಿವೃದ್ಧಿ ಹೆಸರಿನಲ್ಲಿ ಪ್ರಗತಿ ಎಂದೇ  ವ್ಯಾಖ್ಯಾನಿಸಲಾಗುತ್ತಿದೆ. ಕಿರು ಕೈಗಾರಿಕೆಗಳಿಗೆ ಸಂಬಂಧಿಸಿ ಮೊಯಿಲಿ ಕಾನೂನು ತಂದರು. ಆದರೆ ಇಂದು ಬೃಹತ್ ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ. ಸಣ್ಣ ಕೈಗಾರಿಕಾ ಎಸ್ಟೇಟ್‌ಗಳು ಪಾಳು ಬಿದ್ದಿವೆ. ಇಲ್ಲಿನ ಜನರಿಗೆ ಈ ಮೂಲಕ ಉದ್ಯೋಗ ಆರ್ಥಿಕ ಸ್ವಾವಲಂಬನೆ ನೀಡಿದ್ದರೆ ಇಲ್ಲಿನವರು ಗಲ್ಫ್, ಮುಂಬೈಗೆ ಹೋಗುವ ಪರಿಸ್ಥಿತಿಯೇ ನಿರ್ಮಾಣ ಆಗುತ್ತಿರಲಿಲ್ಲ ಎಂದು ಅವರು ವಿಷಾದಿಸಿದರು.ಕುವೆಂಪು ಭಾಷಾ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೇಶವ ಮಳಗಿ ಬರೆದ `ಮೊಯಿಲಿಯವರ ಆಡಳಿತ ಸುಧಾರಣಾ ತತ್ವಗಳ ವಿವೇಚನೆ~ ಕೃತಿ ಬಿಡುಗಡೆ ಮಾಡಲಾಯಿತು.ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ಮಂಗಳೂರು ದಕ್ಷಿಣ ಸಭಾ ಪ್ರಾಂತ್ಯ ಬಿಷಪ್ ಜೆ.ಎಸ್.ಸದಾನಂದ, ಸ್ವಾಗತಾಧ್ಯಕ್ಷ ಬಿ.ಎಸ್.ಶೇರಿಗಾರ್, ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ದೇವದಾಸ್, ಕೋಶಾಧಿಕಾರಿ ಕೆ.ಎಂ.ಗಣೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.