ಭಾನುವಾರ, ಮೇ 16, 2021
27 °C
ಇಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಪೋತೆ ಅಭಿಪ್ರಾಯ

`ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆ ಆಗಬಾರದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿ: ಸಾಹಿತ್ಯ ಸಮ್ಮೇಳನಗಳು ಅಕ್ಷರ ಜಾತ್ರೆಗಳಾಗಬಾರದು. ಆಯಾ ಪ್ರದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣ ಆಗಬೇಕು ಎಂದು ಸಮ್ಮೇಳನಾಧ್ಯಕ್ಷ ಅಧ್ಯಕ್ಷ ಡಾ.ಎಚ್.ಟಿ.ಪೋತೆ ಪ್ರತಿಪಾದಿಸಿದರು.ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ಜರುಗಿದ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಭಾಗದ ರಾಜಕಾರಣಿಗಳು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ತಾಲ್ಲೂಕಿನಲ್ಲಿ ಭೀಮಾ ನದಿ ಹರಿದಿದೆ. ಆದರೆ, ಈ ನದಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನೀರಾವರಿ ಸೌಲಭ್ಯ ಒದಗಿಸಿಲ್ಲ ಎಂದು ವಿಷಾದಿಸಿದರು.ತರ್ದವಾಡಿ ನಾಡಿನ ಈ ತಾಲ್ಲೂಕು ಪ್ರಸ್ಥಭೂಮಿಯಾಗಿತ್ತಲ್ಲದೇ, ತಾಲ್ಲೂಕಿನ ರೈತರು ಕೃಷಿಗಾಗಿ ಮಳೆಯನ್ನೇ ಅವಲಂಬಿಸಿದ್ದರು. ಮಳೆ ಕೈಕೊಟ್ಟರೆ ಗುಳೆ ಅನಿವಾರ್ಯ. ಹೀಗಾಗಿ ಭೀಮಾ ನದಿಗೆ ಅಣೆಕಟ್ಟೆ ಕಟ್ಟಿ, ನೀರಾವರಿ ಸೌಲಭ್ಯ ಒದಗಿಸುವ ಮೂಲಕ ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು. ಚಿಕ್ಕ ಚಿಕ್ಕ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಸಬೇಕು. ಇದಕ್ಕೆ ಸಂಘಟಿತ ಪ್ರಯತ್ನ ಅಗತ್ಯ ಎಂದೂ ಹೇಳಿದರು.ಹಲಸಂಗಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನವಿಲುಗಳಿವೆ. ಆ ಗ್ರಾಮದಲ್ಲಿ ನವಿಲುಧಾಮ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕು. ಜೊತೆಗೆ ಪ್ರತಿ ವರ್ಷ ಹಲಸಂಗಿ ಉತ್ಸವ ಆಯೋಜಿಸಿ, ಹಲಸಂಗಿ ಬಳಗದವರ ಕಾರ್ಯವನ್ನು ಗೌರವಿಸಬೇಕು. ಅವರ ನೆನಪಿಗಾಗಿ ಸ್ಮಾರಕ ಭವನ ನಿರ್ಮಿಸಬೇಕು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರಾದೇಶಿಕ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ಹಲಸಂಗಿ ಗೆಳೆಯರ ಬಳಗದ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಸಹ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.ದಲಿತ ಸಾಹಿತಿಯಾಗಿರುವ ತಮ್ಮನ್ನು ಗುರುತಿಸಿ ಸಮ್ಮಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷವನ್ನೂ ವ್ಯಕ್ತಪಡಿಸಿದರು.ತಾಲ್ಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವಾರು ನೆಲೆಗಳಿವೆ. 9 ಮತ್ತು 10ನೇ ಶತಮಾನದಲ್ಲಿ  ಸಾಲೋಟಗಿಯಲ್ಲಿ ರಾಷ್ಟ್ರಕೂಟರು ಮತ್ತು ಚಾಲುಕ್ಯರು ಆಳಿದ್ದರೆ, ಅಲ್ಲಿ ವಿಶ್ವವಿದ್ಯಾಲಯವಿದ್ದ ಬಗ್ಗೆ ಕುರುಹುಗಳಿವೆ ಎಂದರು.ಕ್ರಿ.ಶ. 150ರಲ್ಲಿಯೇ ಇಂಡಿ ತಾಲ್ಲೂಕಿಗೆ ಗ್ರೀಕ್ ಪ್ರವಾಸಿ ಟಾಲೆಮಿ ಆಗಮಿಸಿದ್ದ, 5 ಮತ್ತು 6ನೇ ಶತಮಾನದಲ್ಲಿ ಚೀನಿ ಯಾತ್ರಿಕ ಹ್ಯುಯೆನ್‌ತ್ಸಾಂಗ್ ಸಹ ಬಂದಿದ್ದ, ಇವೆಲ್ಲರೂ ಇಂಡಿ ತಾಲ್ಲೂಕು ಕೋಮು ಸೌಹಾರ್ದಕ್ಕೆ  ಹೆಸರುವಾಸಿಯಾಗಿತ್ತು ಎಂಬುದನ್ನು ದಾಖಲಿಸಿದ್ದಾರೆ ಎಂದರು.

ಹಲಸಂಗಿ ಗೆಳೆಯರ ಬಳಗವನ್ನು ಪ್ರಸ್ತಾಪಿಸಿದ ಅವರು, ಹಲಸಂಗಿ ಹೊಸಗನ್ನಡ ಸಾಹಿತ್ಯದ ತವರೂರು ಎಂದು ಬಣ್ಣಿಸಿದರು. ನವೋದಯಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ ಎಂದು ಅವರು ಸಾಹಿತ್ಯಿಕ ಹಿನ್ನೆಲೆಯನ್ನು ಸ್ಮರಿಸಿಕೊಂಡರು.ಇಲ್ಲಿಯ ಮಧುರಚೆನ್ನ, ಕಾಪಸೆ ರೇವಪ್ಪ, ಪಿ.ಧೂಲಾಸಾಹೇಬ, ಚಡಚಣದ ಡಾ. ಸಿಂಪಿ ಲಿಂಗಣ್ಣ ಅವರನ್ನು ಒಳಗೊಂಡ ಗೆಳೆಯರ ಬಳಗ ನವೋದಯ ಸಾಹಿತ್ಯವನ್ನು ಸಮೃದ್ಧಗೊಳಿಸಿದೆ. ಕಾರಣ ಮೈಸೂರು, ಮಂಗಳೂರು, ಧಾರವಾಡ ನವೋದಯ ಕೆಂದ್ರಗಳೆಂದು ಗುರುತಿಸಲಾಗಿದೆ. ಇವುಗಳಂತೆ ಹಲಸಂಗಿಯನ್ನು ಸಹ ನವೋದಯ ಕೇಂದ್ರ ಎಂಬುದಾಗಿ ಗುರುತಿಸಬೇಕು ಎಂದೂ ಪ್ರತಿಪಾದಿಸಿದರು.ವೇದಿಕೆಯಲ್ಲಿ ಶಿವಾನಂದ ಸ್ವಾಮೀಜಿ, ಮಲ್ಲಿಬೊಮ್ಮ ಸ್ವಾಮೀಜಿ, ಚಂಪಾ, ಗುರನಗೌಡ ಪಾಟೀಲ, ಸೌಮ್ಯ ಪಾಟೀಲ, ಜ್ಯೋತಿ ಕೋಳಿ, ದಾನಪ್ಪ ಬಗಲಿ, ಡಾ.ಕಾಂತು ಇಂಡಿ, ಮಲ್ಲಿಕಾರ್ಜುನ ಯಂಡಿಗೇರಿ, ಈಶ್ವರಪ್ಪ ದೇವರ, ಡಾ.ಸಿದ್ದು ಹುಲ್ಲೊಳ್ಳಿ, ಜಯರಾಮ ಚವ್ಹಾಣ, ಎ.ಎಸ್.ಹತ್ತಳ್ಳಿ, ಮಹೆಬೂಬ ಅರಬ, ಡಾ.ಅಶೋಕ ಪಾಟೀಲ, ಮುತ್ತಣ್ಣ ಪೋತೆ, ಅಪ್ಪಾಸಾಹೇಬ ನಾವಿ, ಮಹಾಂತೇಶ ಸಾಲಿಮಠ, ಎಸ್.ಡಿ.ಪಾಟೀಲ, ರಂಗನಾಥ ಕರಡಿ, ಎಸ್.ಎಂ.ನುಚ್ಚಿ ಉಪಸ್ಥಿತರಿದ್ದರು.ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳು ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದರು. ಶಾಸಕ ಯಶವಂತ್ರಾಯಗೌಡ ಪಾಟೀಲ ಸ್ವಾಗತಿಸಿದರು. ಧನರಾಜ ಮುಜಗೊಂಡ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.