ಬುಧವಾರ, ಮೇ 18, 2022
23 °C

ಸಿಂಗಟಗೆರೆ: ಮದ್ಯವರ್ಜನ ಶಿಬಿರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಟಗೆರೆ (ಕಡೂರು): ಗ್ರಾಮೀಣ ಪ್ರದೇಶದ ಜನರಿಗೆ ಮದ್ಯಪಾನ, ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಚಟಗಳಿಂದ ಮುಕ್ತಗೊಳಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರಮಿಸುತ್ತಿದ್ದು, ಮದ್ಯ ಪಾನದ ಪಿಡುಗಿನಿಂದ ನಾಶವಾಗುತ್ತಿರುವ ಕುಟುಂಬಗಳನ್ನು ರಕ್ಷಿಸಿ ಆರ್ಥಿಕವಾಗಿ ಮುಂದೆ ತರಲು ಮದ್ಯವರ್ಜಿನ ಶಿಬಿರಗಳನ್ನು ಹಮ್ಮಿಕೊಂಡಿರುವುದಾಗಿ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನೇಶ್ ತಿಳಿಸಿದರು.  ಸಿಂಗಟಗೆರೆ ಗ್ರಾಮದ ಕಲ್ಲೇಶ್ವರ ಸಮುದಾಯ ಭವನದಲ್ಲಿ ಗುರುವಾರ ಆರಂಭವಾದ ಮದ್ಯವರ್ಜನ ಶಿಬಿರದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಮೊದಮೊದಲು ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕೃಷಿ ಅಭಿವೃದ್ಧಿ,  ಸ್ವಉದ್ಯೋಗಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಫಲಾನುಭವಿ ಕುಟುಂಬಗಳು ದುಡಿಮೆಯ ಬಹುಪಾಲು ಹಣವನ್ನು ಮದ್ಯಪಾನದಂತಹ ದುಶ್ಚಟಗಳಿಗೆ ವಿನಿಯೋಗಿಸಿ ಕುಟುಂಬಗಳು ಆರ್ಥಿಕ ಹಿನ್ನೆಡೆಯತ್ತ ಸಾಗುತ್ತಿದ್ದವು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರು ಅನಧಿಕೃತ ಸಾರಾಯಿ ಅಂಗಡಿಗಳನ್ನು ಮುಚ್ಚಿಸುವ ಕೆಲಸವನ್ನು ಮಾಡಿದರು. ಈ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ತೀವ್ರ ವಿರೋಧ  ಎದುರಿಸಬೇಕಾಯಿತು. ಇದರ ನಡುವೆಯು ಸರ್ಕಾರದ ಮನ ಒಲಿಸಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪಾನ ನಿಷೇಧ ಜಾರಿಗೆ ತಂದರು ಎಂದರು. ಮೊದಲು ಮನೆಯ ಯಜಮಾನ ಕುಡಿಯುತ್ತಿದ್ದ ಕಳ್ಳಬಟ್ಟಿ ದಂಧೆ ಜಾಸ್ತಿಯಾದಂತೆ ಕುಟುಂಬದಲ್ಲಿ ಅವನ ಹೆಂಡತಿ, ಮಕ್ಕಳು ಸಹ ಮದ್ಯದ ದಾಸರಾದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಅಸ್ತಿತ್ವಕ್ಕೆ ಬಂದು ಕುಡಿತದಿಂದ ಆಗುವ ದುಷ್ಪರಿಣಾಮಗಳು, ರೋಗಗಳ ಬಗ್ಗೆ ಮಾಹಿತಿ ನೀಡುವುದು ಶಿಬಿರಗಳನ್ನು ನಡೆಸುವುದು, ಮದ್ಯದ ಅಂಗಡಿಗಳ ವಿರುದ್ಧ ಜನಾಂದೋಲನ ಮಾಡುವುದು, ಮದ್ಯದ ದಾಸರಾದ ಜನರನ್ನು ಮನ ಒಲಿಸುವ ಮೂಲಕ ಸರಾಯಿಯಿಂದ ದೂರಮಾಡುವ ವಾರದ ಕಾರ್ಯಕ್ರಮವೇ ’ಮದ್ಯವರ್ಜನ ಶಿಬಿರ’ ಎಂದವರು ತಿಳಿಸಿದರು.ಈ ಶಿಬಿರ ಒಂದು ವಾರ ನಡೆಯುತ್ತಿದ್ದು ಶಿಬಿರಾರ್ಥಿಗಳನ್ನು ಅವರ ಸ್ವಂತ ಇಚ್ಛೆಯ ಮೇಲೆ ಅಥವಾ ಅವರ ಕುಟುಂಬದವರ ಒಪ್ಪಿಗೆ ಪಡೆದು ಶಿಬಿರಕ್ಕೆ ಸೇರಿಸಿಕೊಂಡು ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆಯ ತನಕ ಯೋಗ, ಮಾರ್ಗದರ್ಶನ, ವೈದ್ಯರಿಂದ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ.ಶ್ರೀ ಕ್ಷೇತ್ರದ ವತಿಯಿಂದ ಇದುವರೆವಿಗೆ 391 ಮದ್ಯವರ್ಜನ ಶಿಬಿರಗಳನ್ನು ನಡೆಸಿದ್ದು ಸುಮಾರು 35,000 ಸಾವಿರಕ್ಕೂ ಜನರು ಮದ್ಯ ವರ್ಜಿಸಿ  ಜೀವನವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಕಡೂರು ತಾಲ್ಲೂಕಿನಲ್ಲಿ ಪ್ರಥಮವಾಗಿ ಸಿಂಗಟಗೆರೆ ಗ್ರಾಮದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಫೆ. 3ರಿಂದ ಆರಂಭವಾಗಿ ಇದೇ 10ರ ತನಕ ಶಿಬಿರ ನಡೆಯಲಿದ್ದು ತಾಲ್ಲೂಕಿನ ಶಾಸಕರಾದ ಡಾ.ವೈ.ಸಿ.ವಿಶ್ವನಾಥ್, ಗ್ರಾಮಸ್ಥರು, ಶ್ರೀಕಲ್ಲೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ನಾಗರಾಜಪ್ಪ ಮತ್ತು ಸದಸ್ಯರು ಹಾಗೂ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕರಾದ ಜಯರಾಮ ನೆಲ್ಲಿತಾಯ ಅವರ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ಶಿಬಿರದ ಯಶಸ್ವಿಗೆ ಶ್ರಮಿಸುತ್ತಿರುವುದಾಗಿ ತಾ.ಯೋಜನಾಧಿಕಾರಿ ದಿನೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.