ಬುಧವಾರ, ಮೇ 25, 2022
29 °C

ಸಿಂಗರೇಣಿ: ಕಲ್ಲಿದ್ದಲು ಉತ್ಪಾದನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಒಂದು ತಿಂಗಳಿನಿಂದ ನಡೆಸುತ್ತಿರುವ ಮುಷ್ಕರವನ್ನು ನೌಕರರು ಸೋಮವಾರ ರಾತ್ರಿ ಹಿಂಪಡೆದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಮಂಗಳವಾರ ಪುನರಾರಂಭಗೊಂಡಿದೆ.

ಈ ಮಧ್ಯೆ, ಮುಷ್ಕರದಿಂದಾಗಿ ತೆಲಂಗಾಣ ಪ್ರಾಂತ್ಯದಲ್ಲಿ ಮುಚ್ಚಲಾಗಿದ್ದ ಶಾಲಾ -ಕಾಲೇಜುಗಳೂ ಮತ್ತೆ ಆರಂಭವಾಗಿವೆ.ಒಂದು ತಿಂಗಳಿನಿಂದ ನಡೆಯುತ್ತಿರುವ ಮುಷ್ಕರವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಾರ್ಮಿಕರ ಒಕ್ಕೂಟಗಳು ನಿರ್ಧರಿಸಿದ್ದರಿಂದ ತೆಲಂಗಾಣ ಪ್ರಾಂತ್ಯದ ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ 50 ಕಲ್ಲಿದ್ದಲು ಗಣಿಗಳ ಕಾರ್ಮಿಕರು ಮಂಗಳವಾರ ಮತ್ತೆ ಕೆಲಸಕ್ಕೆ ಹಾಜರಾದರು.ಒಕ್ಕೂಟಗಳ ಪರವಾಗಿ ಕಲ್ಲಿದ್ದಲು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಎಂ.ಕೋದಂಡರಾಮ್ ಅವರು ಮುಷ್ಕರವನ್ನು ಕೈಬಿಟ್ಟಿರುವುದಾಗಿ ಘೋಷಿಸಿದರು.ಕಾರ್ಮಿಕರು ಮುಷ್ಕರ ನಡೆಸಿದ ಅವಧಿಯನ್ನು ವಿಶೇಷ ರಜೆ ಎಂದು ಪರಿಗಣಿಸಲು, ಹಬ್ಬದ ಪ್ರಯುಕ್ತ ಮುಂಚಿತವಾಗಿ ಸಂಬಳ ನೀಡಲು ಮತ್ತು ಮುಷ್ಕರ ನಿರತ ನೌಕರರ ವಿರುದ್ಧ ನೀಡಿರುವ ದೂರುಗಳನ್ನು ಹಿಂಪಡೆಯಲು ಗಣಿಗಳ ಆಡಳಿತ ಮಂಡಳಿ ಒಪ್ಪಿಕೊಂಡಿದೆ.35 ದಿನಗಳ ಬಳಿಕ ಸಿಂಗರೇಣಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಆರಂಭಗೊಂಡಿರುವುದು ವಿದ್ಯುತ್ ಕ್ಷಾಮವನ್ನು ಎದುರಿಸುತ್ತಿರುವ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೆಮ್ಮದಿ ತಂದಿದೆ.ಗಣಿ ನೌಕರರ ಮುಷ್ಕರದಿಂದಾಗಿ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳು ತೀವ್ರವಾಗಿ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದವು.ಮೊದಲ ಪಾಳಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಒಟ್ಟು 40,000 ಕಾರ್ಮಿಕರಲ್ಲಿ ಮಂಗಳವಾರ 22,000 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸಿಂಗರೇಣಿ ಅಧಿಕಾರಿಗಳು ತಿಳಿಸಿದ್ದಾರೆ.ಬುಧವಾರದಿಂದ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಹಾಜರಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

 

ಸೆಪ್ಟೆಂಬರ್ 13ರಂದು ಸಿಂಗರೇಣಿ 70,000 ಗಣಿ ಕಾರ್ಮಿಕರು ಮುಷ್ಕರ ಆರಂಭಿಸಿದ್ದರು. ಇದರಿಂದಾಗಿ ಕಲ್ಲಿದ್ದಲು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಿತ್ತು. ಆದರೆ, ಖಮ್ಮಮ್ ಜಿಲ್ಲೆಯಲ್ಲಿ ಕಾರ್ಮಿಕರ ವರ್ಗವೊಂದು ಮುಷ್ಕರವನ್ನು ಹಿಂತೆಗೆದುಕೊಂಡಿದ್ದರಿಂದ ಪ್ರತಿದಿನ 30ರಿಂದ 50 ಸಾವಿರ ಟನ್ ಕಲ್ಲಿದ್ದಲು ಉತ್ಪಾದನೆ ನಡೆಸಲಾಗುತ್ತಿತ್ತು.ಸಾಮಾನ್ಯವಾಗಿ ಇಲ್ಲಿ ಪ್ರತಿ ದಿನ 1.5 ಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಲಾಗುತ್ತದೆ.ಕಾರ್ಮಿಕರ ಮುಷ್ಕರದಿಂದಾಗಿ ಸಿಂಗರೇಣಿಗೆ 600 ಕೋಟಿ ರೂಪಾಯಿ ನಷ್ಟವಾಗಿದೆ. ಕಾರ್ಮಿಕರಿಗೆ ಮುಷ್ಕರದ ಅವಧಿಯ ಸಂಬಳ ನೀಡಬೇಕಾಗಿರುವುದರಿಂದ  ಹೆಚ್ಚುವರಿಯಾಗಿ ಇನ್ನೂ 120 ಕೋಟಿ ರೂಪಾಯಿ ನಷ್ಟವಾಗಲಿದೆ.ಶಾಲೆಗಳೂ ಪುನರಾರಂಭ: ಒಂದು ತಿಂಗಳ ಬಳಿಕ ಮಂಗಳವಾರ   ಹೈದರಾಬಾದ್ ಸೇರಿದಂತೆ ತೆಲಂಗಾಣ ಪ್ರಾಂತ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳು ಪುನರಾರಂಭಗೊಂಡವು.ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುಮಾರು 1.5 ಲಕ್ಷ ಸರ್ಕಾರಿ ಶಿಕ್ಷಕರು ಮುಷ್ಕರವನ್ನು ಹಿಂತೆಗೆದುಕೊಂಡರು.

 

ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಯೊಂದನ್ನು ಹೊರತು ಪಡಿಸಿ ಶಿಕ್ಷಕರ ಉಳಿದ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಸಮ್ಮತಿಸಿದೆ. ಪ್ರತ್ಯೇಕ ರಾಜ್ಯ ರಚನೆ ವಿಚಾರ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.ಆಂಧ್ರ ಪ್ರದೇಶ ರಾಜ್ಯ ಸಂಚಾರ ನಿಗಮದ ನೌಕರರು 28 ದಿನಗಳ ತಮ್ಮ ಮುಷ್ಕರವನ್ನು ಶನಿವಾರ ಹಿಂತೆಗೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.