ಶುಕ್ರವಾರ, ಫೆಬ್ರವರಿ 26, 2021
19 °C

ಸಿಂಪಲ್ ಕೈಲಾಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಪಲ್ ಕೈಲಾಸ!

‘ಪಂಜರದಲ್ಲಿಟ್ಟ ಗಿಳಿಯನ್ನು ಹೊರಗೆ ಹಾರಿಬಿಟ್ಟರೆ ಅದು ಸ್ವಾತಂತ್ರ್ಯವನ್ನು ಹೇಗೆ ಅನುಭವಿಸುತ್ತದೆಯೋ ಹಾಗೆಯೇ ಈ ಚಿತ್ರದ ಮುಖ್ಯ ನಾಯಕನ ಪಾತ್ರ’ ಎಂದರು ನಿರ್ದೇಶಕ ಮಲ್ಲಿಕಾರ್ಜುನ. ಅವರು ವಿವರಣೆ ನೀಡುತ್ತಿದ್ದದ್ದು ತಮ್ಮ ಚೊಚ್ಚಿಲ ನಿರ್ದೇಶನದ ‘ಟಿಪಿಕಲ್‌ ಕೈಲಾಸ’ ಚಿತ್ರದ ಕುರಿತು.ನಾಗತಿಹಳ್ಳಿ ಚಂದ್ರಶೇಖರ್‌, ದುನಿಯಾ ಸೂರಿ ಮುಂತಾದವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಲ್ಲಿಕಾರ್ಜುನ ಗಂಭೀರ ವಸ್ತುವೊಂದನ್ನು ಹಾಸ್ಯದ ಮೂಲಕ ತೆರೆದಿಡುತ್ತಿದ್ದಾರೆ. 25 ವರ್ಷ ಬಂಧನದಲ್ಲಿರುವ ವ್ಯಕ್ತಿ ಬಂಧಮುಕ್ತನಾದಾಗ ಹೊಸ ಬದುಕನ್ನು ಆತ ಹೇಗೆ ಸ್ವೀಕರಿಸುತ್ತಾನೆ, ಸ್ವತಂತ್ರ ಜೀವನವನ್ನು ನಡೆಸಲು ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ ಎನ್ನುವುದನ್ನು ಅವರು ‘ಟಿಪಿಕಲ್‌ ಕೈಲಾಸ’ದಲ್ಲಿ ಹೇಳಿದ್ದಾರಂತೆ.ಲಾಭ ಗಳಿಕೆಗಿಂತ ಪ್ರೀತಿ ಮತ್ತು ಸ್ನೇಹದಿಂದ ಮಾಡಿರುವ ಚಿತ್ರ ಇದು ಎಂದು ಹೇಳಿದರು ಮಲ್ಲಿಕಾರ್ಜುನ. ಹೆಸರನ್ನು ಮೊಟಕುಗೊಳಿಸಿರುವ ಗೆಳೆಯರ ಪಾಲಿಗೆ ಅವರು ಮಲ್ಲಿಕಾ. ಚಿತ್ರದಲ್ಲಿ ಕೆಲ ದ್ವಂದ್ವಾರ್ಥದ ಸಂಭಾಷಣೆಗಳೂ ಇವೆ. ಆದರೆ ಅವು ಹಾನಿಕರವಲ್ಲ ಎಂಬ ಸ್ಪಷ್ಟನೆ ಚಿತ್ರತಂಡದ್ದು. ಈ ಚಿತ್ರಕ್ಕೆ ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಪ್ರೇರಣೆ ನೀಡಿದ್ದಾಗಿ ಮಲ್ಲಿಕಾ ಹೇಳಿಕೊಂಡರು.ನಟ ಸೃಜನ್‌ ಲೋಕೇಶ್‌ ಉಂಡಾಡಿ ಗುಂಡನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮನ್ನು ಸ್ಟಾರ್‌ ಹೀರೊಗಳಂತೆಯೇ ತೋರಿಸಿದ್ದಾರೆ ಎಂಬ ಸಂತಸ ಅವರದು. ನಾಯಕನಟನಾಗುವ ಮುನ್ನ ತಂದೆ ಲೋಕೇಶ್‌ ಅವರಂತೆಯೇ ಹತ್ತು ವರ್ಷ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ ಕ್ಷಣಗಳನ್ನು ನೆನಪಿಸಿಕೊಂಡರು. ನಟನೆ ತಂದೆಯ ಬಳುವಳಿ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.‘ಗೊಂಬೆಗಳ ಲವ್‌’ ಖ್ಯಾತಿಯ ಪಾವನಾ ಈ ಚಿತ್ರದ ನಾಯಕಿ. ಆದರೆ ಈ ಚಿತ್ರದಿಂದ ಅವರು ಪಾವನಾ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಪಾವನಾ ಎಂಬ ಹೆಸರನ್ನು ಒಂದೊಂದು ರೀತಿಯಲ್ಲಿ ಕರೆಯುತ್ತಿದ್ದಾರೆ. ಈ ಗೊಂದಲಗಳೇ ಬೇಡವೆಂದು ವೃಂದಾ ಹೆಸರಿನಲ್ಲಿ ಅವರು ಗುರ್ತಿಸಿಕೊಳ್ಳಲಿದ್ದಾರೆ. ನಿರ್ದೇಶಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು ವೃಂದಾ.ಚಿತ್ರದ ಕಲಾವಿದರಿಗಿಂತಲೂ ನಿರ್ಮಾಪಕರ ಸಂಖ್ಯೆಯೇ ಹೆಚ್ಚು. ಬರೋಬ್ಬರಿ 15 ಮಂದಿ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ವಿ. ಮನೋಹರ್‌ ಐದು ಹಾಡುಗಳಿಗೆ ಸಂಗೀತ ಹೊಸೆದಿದ್ದಾರೆ. ಬೆಂಗಳೂರು ಮತ್ತು ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಾಹಕ ಸೂರ್ಯಕಿರಣ್‌ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುವಲ್ಲಿ ಹೆಚ್ಚು ಗಮನಹರಿಸಿದ್ದಾಗಿ ಹೇಳಿದರು. ನಿರ್ದೇಶಕರಾದ ದುನಿಯಾ ಸೂರಿ, ಮಂಜು ಸ್ವರಾಜ್‌ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.