ಬುಧವಾರ, ಜೂಲೈ 8, 2020
28 °C

ಸಿಆರ್‌ಎಸ್‌ಐನಿಂದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಇಸವಿಯನ್ನು ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷವನ್ನಾಗಿ ಆಚರಿಸುವ ವಿಶ್ವಸಂಸ್ಥೆಯ ಘೋಷಣೆಯ ಹಿನ್ನೆಲೆಯಲ್ಲಿ ಕೆಮಿಕಲ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ (ಸಿಆರ್‌ಎಸ್‌ಐ) ‘ರಸಾಯನಶಾಸ್ತ್ರ - ನಮ್ಮ ಜೀವನ, ನಮ್ಮ ಭವಿಷ್ಯ’ ಎಂಬ ಘೋಷವಾಕ್ಯದಡಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲಿದೆ.ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಸಿ.ಎನ್.ಆರ್. ರಾವ್ ಅವರು ‘ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಶನಿವಾರ ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆ ಉದ್ಘಾಟನೆಗೊಳ್ಳಲಿದೆ’ ಎಂದರು.

‘ಭಾರತದಲ್ಲಿ ರಸಾಯನಶಾಸ್ತ್ರ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ಈ ಕ್ಷೇತ್ರದಲ್ಲಿ ಸಂಶೋಧನೆಗಳು ವಿಶಿಷ್ಟವಾಗಿರುತ್ತವೆ. ರಸಾಯನಶಾಸ್ತ್ರದ ಅಧ್ಯಯನವನ್ನು ಉತ್ತೇಜಿಸಲು 2011ನೇ ಇಸವಿಯಲ್ಲಿ ಸಿಆರ್‌ಎಸ್‌ಐ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’ ಎಂದು ತಿಳಿಸಿದರು.‘ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಕುರಿತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುವುದು, ರಸಾಯನಶಾಸ್ತ್ರ ಶಿಕ್ಷಕರಿಗೆ ದೇಶದಾದ್ಯಂತ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು, ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ರಸಾಯನಶಾಸ್ತ್ರದ ಕುರಿತು ಆಸಕ್ತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆಯ ಅಂಗವಾಗಿ ಸಿ.ಎನ್.ಆರ್.ರಾವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ‘ರಸಾಯನಶಾಸ್ತ್ರ ಕುರಿತ ಸಂಶೋಧನೆಗಾಗಿ ಸಿ.ಎನ್.ಆರ್ ರಾವ್ ರಾಷ್ಟ್ರೀಯ ಪ್ರಶಸ್ತಿ’ಯನ್ನು 2011ರಿಂದ ನೀಡಲಾಗುವುದು ಎಂದು ಸಿಆರ್‌ಎಸ್‌ಐನ ಅಧ್ಯಕ್ಷ ಪ್ರೊ.ವಿ. ಕೃಷ್ಣನ್ ಅವರು ತಿಳಿಸಿದರು.ಪರ್ಯಾಯ ಇಂಧನ-ಟಾಟಾ ನೆರವು: ಅಮೆರಿಕದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರೊ. ಡ್ಯಾನ್ ನೊಸೆರಾ ಅವರು ನೀರಿನಲ್ಲಿರುವ ಹೈಡ್ರೋಜನ್ ಅನ್ನು ಇಂಧನವನ್ನಾಗಿ ಬಳಸಿ ಚಲಿಸುವ ಎಂಜಿನ್‌ನ ಅಭಿವೃದ್ಧಿಯ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಶೋಧನೆಗೆ ಟಾಟಾ ಸಮೂಹ ಆರ್ಥಿಕ ನೆರವು ನೀಡುತ್ತಿದೆ ಎಂದು ಸಿ.ಎನ್.ಆರ್. ರಾವ್ ಇದೇ ಸಂದರ್ಭದಲ್ಲಿ ತಿಳಿಸಿದರು.(ನೀರಿನ ಅಣುವಿನ ವಿದಳನದ ಮೂಲಕ ಹೈಡ್ರೋಜನ್ ಮತ್ತು ಆಮ್ಲಜನಕದ ಅಣುವನ್ನು ಪಡೆಯಬಹುದು. ಹೈಡ್ರೋಜನ್ ಅನ್ನು ವಾಹನಗಳಲ್ಲಿ ಇಂಧನವನ್ನಾಗಿ ಬಳಸಬಹುದು. ಹೈಡ್ರೋಜನ್ ಇಂಧನವನ್ನು ಉಪಯೋಗಿಸಿ ಚಲಿಸುವ ಅನೇಕ ವಾಹನಗಳು ಈಗಾಗಲೇ ರಸ್ತೆಗಿಳಿದಿವೆ. ಆದರೆ ಹೈಡ್ರೋಜನ್ ಅನ್ನು ವಾಹನಗಳಲ್ಲಿ ಶೇಖರಿಸಿಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇನ್ನೂ ಅಭಿವೃದ್ಧಿಯಾಗಿಲ್ಲ.)‘ಇನ್ನು 20ರಿಂದ 30ವರ್ಷಗಳಲ್ಲಿ ಪರ್ಯಾಯ ಇಂಧನ ಬಳಸಿ ಚಲಿಸುವ ವಾಹನಗಳನ್ನು ನಾವು ಅಭಿವೃದ್ಧಿಪಡಿಸಲೇ ಬೇಕು. ವಾತಾವರಣದಲ್ಲಿ ಹೇರಳವಾಗಿ ಲಭ್ಯವಿರುವ ಹೈಡ್ರೋಜನ್ ಪರಿಣಾಮಕಾರಿ ಪರ್ಯಾಯ ಇಂಧನವಾಗಬಲ್ಲದು’ ಎಂದು ಪ್ರೊ. ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೃತಕವಾಗಿ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿ ಆಮ್ಲಜನಕ ಉತ್ಪಾದಿಸುವ ಕುರಿತೂ ಸಂಶೋಧನೆಗಳು ನಡೆಯುತ್ತಿವೆ, ಇದು ಯಶಸ್ವಿಯಾದಲ್ಲಿ ಇಡೀ ಜಗತ್ತಿಗೇ ಸವಾಲಾಗಿರುವ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣದ ಹೆಚ್ಚಳಕ್ಕೆ ಕಡಿವಾಣ ಹಾಕಬಹುದು ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.