ಶನಿವಾರ, ಮೇ 21, 2022
25 °C

ಸಿಇಟಿ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆ, ವಿಳಂಬ ಹಾಗೂ ಗೊಂದಲ ಇಲ್ಲದೆ ನೆರವೇರಿದ ನಿದರ್ಶನಗಳು ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ. ಸೀಟು ಹಂಚಿಕೆ ಅಥವಾ ಶುಲ್ಕ ನಿಗದಿ ವಿಚಾರದಲ್ಲಿ ಸರ್ಕಾರ ಮತ್ತು ವೃತ್ತಿಪರ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟವಾದ `ಕಾಮೆಡ್-ಕೆ' ನಡುವೆ ಪ್ರತಿವರ್ಷ ಏನಾದರೊಂದು ತಿಕ್ಕಾಟ ಇದ್ದೇ ಇರುತ್ತದೆ. ಈ ಬಗೆಯ ಗೊಂದಲಗಳೊಂದಿಗೆ ಕಾಮೆಡ್-ಕೆ ಈ ವರ್ಷ ಹೊಸ ಪರಿಪಾಠಕ್ಕೆ ನಾಂದಿ ಹಾಡಿ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ ಹತ್ತೊಂಬತ್ತು ವರ್ಷಗಳ ಹಿಂದೆ ಜಾರಿಗೆ ಬಂದಿತು.ಸಿ.ಇ.ಟಿ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರ ನಡೆಸುವ ಕೌನ್ಸೆಲಿಂಗ್‌ಗಿಂತ ಮೊದಲೇ ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಾರಂಭವಾಗಿರುವುದೇ ಈ ಆತಂಕಕ್ಕೆ ಕಾರಣ. ಈ ನಡೆ, ಖಾಸಗಿ ಕೋಟಾದಡಿ ಸೀಟು ಪಡೆಯಬೇಕೋ ಅಥವಾ ಸರ್ಕಾರಿ ಕೋಟಾ ಸೀಟುಗಳಿಗೆ ಕಾಯಬೇಕೋ ಎನ್ನುವ ಗೊಂದಲಕ್ಕೆ ಅಭ್ಯರ್ಥಿಗಳನ್ನು ದೂಡಿದೆ. ಸಾಮಾನ್ಯವಾಗಿ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆ ಪ್ರಕ್ರಿಯೆ ಮುಗಿದ ಬಳಿಕ ಕಾಮೆಡ್-ಕೆ ಕೌನ್ಸೆಲಿಂಗ್ ನಡೆಯುತ್ತದೆ. ಸರ್ಕಾರಿ ಕೋಟಾದಡಿ ಸೀಟು ಪಡೆಯಲಾಗದವರು ಕಾಮೆಡ್-ಕೆ ಸೀಟು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಲ ತದ್ವಿರುದ್ಧದ ಸ್ಥಿತಿ ನಿರ್ಮಾಣವಾಗಿದೆ. ಕಾಮೆಡ್-ಕೆ ಸೀಟು ಶುಲ್ಕ ಅಧಿಕ. ಸರ್ಕಾರಿ ಕೋಟಾದಡಿ ಸೀಟು ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕಾಮೆಡ್-ಕೆ ಸೀಟು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಹೊಣೆಗೇಡಿ ಧೋರಣೆಯೇ ಪ್ರಮುಖ ಕಾರಣ.ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಈ ತಿಂಗಳ 31ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎನ್ನುವುದು ಅಧಿಕಾರಿಗಳಿಗೆ ತಿಳಿಯದ ಸಂಗತಿಯಲ್ಲ. ಗಡುವು ಸಮೀಪಿಸುವವರೆಗೂ ನಿದ್ದೆಯ ಮಂಪರಿನಿಂದ ಹೊರಬರದಿರುವುದು ಅಕ್ಷಮ್ಯ. ವಿಳಂಬಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕಡೆ ಬೆರಳು ತೋರುವುದು ಪರಿಪಾಠವೇ ಆಗಿದೆ. ಎಂಸಿಐ ಅನುಮತಿ ದೊರೆಯದ ಕಾರಣ ಕೌನ್ಸೆಲಿಂಗ್ ಆರಂಭಿಸುವುದು ತಡವಾಯಿತು ಎಂದು ನೆಪ ಹೇಳಿ ನುಣುಚಿಕೊಳ್ಳಲಾಗದು. `ಕೌನ್ಸೆಲಿಂಗ್ ಮುಂದೂಡುವಂತೆ ಕಾಮೆಡ್-ಕೆ ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ.`ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ' ಎಂದು ಕಾಮೆಡ್-ಕೆ ಮುಖ್ಯ ಕಾರ್ಯನಿರ್ವಾಹಕರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಮತ್ತು ಕಾಮೆಡ್-ಕೆ ನಡುವಣ ಸಂವಹನ ಕೊರತೆಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ಈ ಪ್ರವೇಶ ಪ್ರಕ್ರಿಯೆಯಲ್ಲಿ  ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಅಡಗಿದೆ. ವೃತ್ತಿ ಶಿಕ್ಷಣ, ಹಣವಿದ್ದವರಿಗೆ ಮಾತ್ರ ಸಾಧ್ಯ ಎನ್ನುವ ಹಂತ ತಲುಪಿದ್ದಾಗ ರಾಜ್ಯದಲ್ಲಿ ಜಾರಿಗೆ ಬಂದ ಸಿಇಟಿ ದೇಶಕ್ಕೇ ಮಾದರಿ. ಅದರ ಮೌಲ್ಯ ಕುಂದಿಸುವ ಪ್ರಯತ್ನಗಳು ಆಗಬಾರದು. ಒಂದು ನಿರ್ದಿಷ್ಟ ವೇಳಾಪಟ್ಟಿಗೆ ಬದ್ಧವಾಗಿ ಪ್ರವೇಶ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.