ಶನಿವಾರ, ಮೇ 28, 2022
26 °C

ಸಿಎಂ ಮಹಿಳಾ ರೋಜ್‌ಗಾರ್ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಿಎಂ ಮಹಿಳಾ ರೋಜ್‌ಗಾರ್ ಯೋಜನೆಯೂ ಸೇರಿದಂತೆ ಮಹಿಳಾ ಪರವಾದ ಹಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಅನುಮೋದನೆ ದೊರಕಿದ್ದು, ಆಗಸ್ಟ್‌ನಿಂದ ಜಾರಿಗೊಳ್ಳಲಿವೆ’ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರಧ್ವಾಜ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ 22 ಕೋ.ರೂ. ಹೆಚ್ಚುವರಿ ನೀಡಲಾಗಿದೆ. ನಿಗಮ ಸಲ್ಲಿಸಿದ ಹೊಸ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ ಎಂದರು.ಸ್ವಂತ ಉದ್ಯಮ ಕೈಗೊಳ್ಳುವ ಮಹಿಳೆಯರಿಗೆ ರೂ. ಒಂದು ಲಕ್ಷದವರೆಗೆ ಸಾಲ ನೀಡುವ ಉದ್ಯೋಗಿನಿ ಯೋಜನೆಯ ವಿಸ್ತರಣೆಯಾಗಿ ಸಿಎಂ ರೋಜಗಾರ್ ಯೋಜನೆ ರೂಪುಗೊಂಡಿದೆ. ಈ ಯೋಜನೆಯಲ್ಲಿ 5 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದರು.ರಾಜ್ಯದ ನಾಲ್ಕು ವಲಯದಲ್ಲಿ ಮಹಿಳಾ ಭವನ ನಿರ್ಮಿಸುವುದು. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಬಾಗಲಕೋಟೆಯಲ್ಲಿ ಭವನ ನಿರ್ಮಾಣಗೊಂಡರೆ, ಮಹಿಳೆಯರು ತಯಾರಿಸುವ ವಸ್ತುಗಳ ಮಾರಾಟಕ್ಕೆ, ತರಬೇತಿಗೆ ಅನುಕೂಲವಾಗಲಿದೆ ಎಂದರು.ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ ಸೇರಲು ತರಬೇತಿ ನೀಡಲು ಉದ್ದೇಶಿಸಲಾಗಿರುವ ಮಹಿಳಾ ಶಿಕ್ಷಣ ಅಭಿಯಾನವೂ ಶುರುವಾಗಲಿದೆ. ಪದವಿ ತರಗತಿ ಪಾಸಾದ ಮಹಿಳೆಯರಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗೆ ತರಬೇತಿ ನೀಡುವ ಉದ್ದೇಶವೂ ಇದೆ ಎಂದರು.ಇನ್ನು ನಿರ್ಗತಿಕ ಮಹಿಳೆಯರಿಗೆ ಮಹಿಳಾ ಸುರಕ್ಷಾ ನಿಧಿ ಅಡಿಯಲ್ಲಿ 5 ಸಾವಿರ ರೂಪಾಯಿ ನೀಡಲಾಗುವುದು. ಅದನ್ನು ವಾಪಸು ನೀಡಬೇಕಿಲ್ಲ. ಹಸುವನ್ನು ಸಾಕುವವರಿಗೆಂದೇ ವಿಶೇಷವಾಗಿ ಗೋಮಾತೆ ಯೋಜನೆ ರೂಪಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಹಿಳಾ ಜೀವನ್ ಸಾಥಿ ಯೋಜನೆ ರೂಪಿಸಲಾಗಿದೆ. ಸಣ್ಣ ವ್ಯಾಪಾರ ಮಾಡುವ ಮಹಿಳೆಯರಿಗೆ 10 ಸಾವಿರ ರೂಪಾಯಿ ನೇರ ಸಾಲ ನೀಡಲಾಗುವುದು. ರಾಜ್ಯ ಸಂಪನ್ಮೂಲ ಕೇಂದ್ರವನ್ನು ನಿರ್ಮಿಸಲು ನಿಗಮ ಉದ್ದೇಶಿಸಿದ್ದು, ಅದಕ್ಕೆ ಕೋಲಾರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಗ್ರಾಮವಾಸ್ತವ್ಯ: ಮಹಿಳೆಯರ ಸಮಸ್ಯೆ ಅರಿಯುವ ಸಲುವಾಗಿ ಗ್ರಾಮ ವಾಸ್ತವ್ಯ ಕೈಗೊಂಡಿರುವೆ. ಮೊದಲ ಬಾರಿಗೆ ಗುಲ್ಬರ್ಗದಲ್ಲಿ ವಾಸ್ತ್ಯವ್ಯ ಹೂಡಿದ ಬಳಿಕ, ಎರಡನೇ ಬಾರಿಗೆ ಕೋಲಾರವನ್ನು ಆಯ್ಕೆ ಮಾಡಿಕೊಂಡಿರುವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.