ಶುಕ್ರವಾರ, ಮೇ 27, 2022
21 °C

ಸಿಕ್ಕಾಪಟ್ಟೆ ಕ್ರೇಜಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಕ್ಕಾಪಟ್ಟೆ ಕ್ರೇಜಿ!

ಕವಿತಾ ಲಂಕೇಶ್ ಇದುವರೆಗೆ ನಿರ್ದೇಶಿಸಿರುವ ಚಿತ್ರಗಳ ಧಾಟಿಗಿಂತ ಬೇರೆಯೇ ತರಹ ಇರುವ ಸೂಚನೆಗಳನ್ನು `ಕ್ರೇಜಿ ಲೋಕ~ ಚಿತ್ರೀಕರಣದ ಸಂದರ್ಭದಲ್ಲೇ ಬಿಟ್ಟುಕೊಡುತ್ತಿದೆ.

ರವಿಚಂದ್ರನ್, ಡೈಸಿ ಬೋಪಣ್ಣ ಜೋಡಿಯಾಗಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುವ ಜಾಗದಲ್ಲಿ ನಾಯಕ-ನಾಯಕಿ ಇಬ್ಬರೂ ಇರಲಿಲ್ಲ. ಬದಲಿಗೆ ಚಿತ್ರದ ಇನ್ನೊಂದು ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಹೊಸ ನಾಯಕ ಸೂರ್ಯ ಹೆಜ್ಜೆ ಹಾಕುತ್ತಿದ್ದರು.ಮಿನಿ ಫ್ರಾಕ್ ತೊಟ್ಟಿದ್ದ ಹರ್ಷಿಕಾ ಎಂದಿನಂತೆ ಮುಖದ ತುಂಬಾ ನಗು ತುಳುಕಿಸುತ್ತಾ, `ಕವಿತಾ ಮೇಡಂ ಗರಡಿಯಲ್ಲಿ ಕಲಿತದ್ದು ಅಷ್ಟಿಷ್ಟಲ್ಲ~ ಎಂದು ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿದರು.ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿ, ಹಾಡೊಂದಕ್ಕೆ ನೃತ್ಯ ಮಾಡುವಂತೆ ತಮ್ಮ ಗೆಳತಿಯೂ ಆಗಿರುವ ನಟಿ ರಮ್ಯಾ ಅವರನ್ನು ಕವಿತಾ ಕೇಳಿಕೊಂಡರಂತೆ. ಅದಕ್ಕೆ ಅಸ್ತು ಎಂದಿರುವ ರಮ್ಯಾ ತಮಗಾಗಿ ಕವಿರಾಜ್ ಬರೆದಿರುವ ಸಾಲುಗಳನ್ನು ಕೇಳಿ ಖುಷಿಯ ಅಲೆ ಮೇಲೆ ತೇಲಾಡುತ್ತಿರುವುದು ಸುದ್ದಿ. ಇದನ್ನು ಖುದ್ದು ಕವಿತಾ ಹೇಳಿಕೊಂಡರು.ಅಂದುಕೊಂಡಂತೆಯೇ ಚಿತ್ರೀಕರಣ ಮುಗಿಸಿರುವ ತೃಪ್ತಿ ಕವಿತಾ ಅವರಿಗಿದೆ. ಸ್ಥಳದಲ್ಲೇ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ರವಿಚಂದ್ರನ್ ಕೊಟ್ಟ ಸಲಹೆಯನ್ನೂ ಅವರು ಸ್ವೀಕರಿಸಿದ್ದಾರೆ.ಚಿನ್ನಿ ಪ್ರಕಾಶ್, ಇಮ್ರಾನ್ ಸರ್ದಾರಿಯಾ ಹಾಗೂ ಹರ್ಷ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು, ಅವುಗಳು ಅಂದುಕೊಂಡಿದ್ದಕ್ಕಿಂತ ಕಣ್ಣುಕೋರೈಸುವಂತಿವೆ ಎಂಬುದು ಕವಿತಾ ಸಂತೋಷವನ್ನು ಇಮ್ಮಡಿಗೊಳಿಸಿದೆ. `ಶಿವಪೂಜೇಲಿ ಕರಡಿ~ ಎಂಬ ಹಾಡಿನಲ್ಲಿ ಚಿತ್ರದ ಇಡೀ ತಾರಾಬಳಗ ಹೆಜ್ಜೆಹಾಕಲಿದೆ. ತಾಂತ್ರಿಕವಾಗಿಯೂ ಚಿತ್ರವನ್ನು ಹಸನಾಗಿಸುವ ನಿರ್ಧಾರ ತೆಗೆದುಕೊಂಡಿರುವ ಕವಿತಾ `ಡಿಐ~ ಮಾಡಿಸಲು ತುದಿಗಾಲಲ್ಲಿ ನಿಂತಿದ್ದಾರೆ.ಅನುಭವಿ ನಟ-ನಟಿಯರಿದ್ದೂ ಚಿತ್ರದ ಚಿತ್ರೀಕರಣ ಅಂದುಕೊಂಡಂತೆಯೇ ಮುಗಿದಿರುವುದರಿಂದ ನಿರ್ಮಾಪಕ ರವಿಕುಮಾರ್ ನಿರಾಳ. ರವಿಚಂದ್ರನ್ ಸೇರಿದಂತೆ ಎಲ್ಲರಿಂದಲೂ ಕಲಿಯುವ ಅವಕಾಶ ಸಿಕ್ಕಿದ್ದು ಹರ್ಷಿಕಾ ಹರ್ಷಕ್ಕೆ ಕಾರಣವಾದರೆ, ಸೂರ್ಯ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ತವಕದಲ್ಲಿದ್ದರು.ಕವಿತಾ ಅವರೊಟ್ಟಿಗೆ ನಾಲ್ಕನೇ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ಮಹೇಂದರ್ ಒಳ್ಳೆಯ ಚಿತ್ರ ಮಾಡಿದ ತೃಪ್ತಿ ವ್ಯಕ್ತಪಡಿಸಿದರು. ಸೂರ್ಯ ಹಾಗೂ ಹರ್ಷಿಕಾ ನೃತ್ಯ ಪ್ರತಿಭೆಯ ಬಗ್ಗೆ ಇಮ್ರಾನ್ ಸರ್ದಾರಿಯಾ ಹೊಗಳಿಕೆ ದಾಟಿಸಿದರು.ಉಳಿದವರೆಲ್ಲರದ್ದು `ಸಿನಿಮಾ ಯಶಸ್ವಿಯಾಗಲಿ, ಚೆನ್ನಾಗಿ ಓಡಲಿ~ ಎಂಬ ಹಾರೈಕೆ. ಔಪಚಾರಿಕ ಮಾತುಕತೆಯ ನಂತರವೂ ಕವಿತಾ ಅವರಲ್ಲಿ ಆಡಲು ಇನ್ನೂ ಮಾತುಗಳು ಉಳಿದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.