ಶುಕ್ರವಾರ, ಮೇ 27, 2022
31 °C

ಸಿಗದ ಚಿಕಿತ್ಸೆ; ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ:  ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಕಟ್ಟಡದಿಂದ ಕೆಳಗಡೆ ಬಿದ್ದು ಮೃತಪಟ್ಟ ಘಟನೆ ನಗರದ ವಾಪಸಂದ್ರ ಬಡಾವಣೆಯಲ್ಲಿ ಶನಿವಾರ ನಡೆದಿದೆ.  ವ್ಯಕ್ತಿಯನ್ನು ಉಳಿಸಿಕೊಳ್ಳಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್-2ನೇ ಘಟಕದ ನಾಲ್ವರು ವಿದ್ಯಾರ್ಥಿಗಳು ತೀವ್ರ ಪ್ರಯಾಸಪಟ್ಟರೂ ಪ್ರಯೋಜನವಾಗಲಿಲ್ಲ.  ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಮತ್ತು ಅಗತ್ಯ ಚಿಕಿತ್ಸೆ ಸಿಗದ ಕಾರಣ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕೂಲಿಕಾರ್ಮಿಕ ಶ್ರೀನಿವಾಸ್ (40) ಮೃತಪಟ್ಟ ವ್ಯಕ್ತಿ. ಕಟ್ಟಡದ ಮಹಡಿ ಮೇಲೆ ಆಯೋಜಿಸಲಾಗಿದ್ದ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀನಿವಾಸ್ ವಾಪಸಂದ್ರಕ್ಕೆ ಬಂದಿದ್ದರು. ಕಟ್ಟಡದ ಅಂಚಿನಲ್ಲಿ ನಿಯಂತ್ರಣ ಕಳೆದುಕೊಂಡ ಅವರು ಕೆಳಗಡೆ ಬಿದ್ದರು. ತೀವ್ರ ಸ್ವರೂಪದಲ್ಲಿ ಗಾಯಗೊಂಡ ಪರಿಣಾಮ ಅವರ ತಲೆ ಮತ್ತು ಕಿವಿಯಿಂದ ರಕ್ತ ಸೋರಲಾರಂಭಿಸಿತು. ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು.   ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಶ್ರೀನಿವಾಸ್‌ನ ಸ್ನೇಹಿತರು ಆರೋಪಿಸಿದ್ದಾರೆ.ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಜಿ.ಕೆ.ಸಂಜಯ್‌ಕುಮಾರ್, ಡಿ.ಬಿ.ರಾಜಶೇಖರಗೌಡ, ಅರುಣ್‌ರಾವ್ ಮತ್ತು ಕೆ.ವೈ.ಪುನೀತ್‌ಕುಮಾರ್ ಅವರು ಗಾಯಗೊಂಡ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ಕರೆತರುವುದರ ಜೊತೆಗೆ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಗೆ ಕರೆದೊಯ್ಯುವವರೆಗೆ ಶ್ರಮಿಸಿದರು. ಆದರೆ ಶ್ರೀನಿವಾಸ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಂಬುಲೆನ್ಸ್ ಸೇವೆ ವ್ಯತ್ಯಯ: ‘ಎನ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾವು ಮನೆಗೆ ಹಿಂದಿರುಗುತ್ತಿದ್ದ ವೇಳೆ ಶ್ರೀನಿವಾಸ್ ಕಟ್ಟಡದ ಮೇಲಿನಿಂದ ಬಿದ್ದು ನರಳುತ್ತಿರುವುದು ಕಂಡು ಬಂತು. ಅವರ ರಕ್ಷಣೆಗೆ ಯಾರೂ ಮುಂದಾಗಲಿಲ್ಲ. ನಾವೇ ಅವರಿಗೆ ನೀರು ಕುಡಿಸಿದೆವು. ತಕ್ಷಣವೇ 108 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಆಂಬುಲೆನ್ಸ್ ವಾಹನಕ್ಕೆ ವ್ಯವಸ್ಥೆ ಮಾಡಿದೆವು. ಆದರೆ ವಾಹನ ಬರುವುದು ತಡವಾಯಿತು.  ಆಗ ನಿಮ್ಹಾನ್ಸ್‌ಗೆ ವೈದ್ಯರು ಕರೆದೊಯ್ಯುವಂತೆ ಸೂಚಿಸಿದರು. ಆದರೆ ಆಸ್ಪತ್ರೆಯಲ್ಲಿ ಅಂಬುಲೆನ್ಸ್‌ನ ವ್ಯವಸ್ಥೆಯೇ ಇರಲಿಲ್ಲ’ ಎಂದು ವಿದ್ಯಾರ್ಥಿಗಳು ಹೇಳಿದರು.‘ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ  ಪದೇ ಪದೇ ಮನವಿ ಮಾಡಿದ ನಂತರ  ಅಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆದರೆ ಅಲ್ಲಿಂದ ನಿಮ್ಹಾನ್ಸ್‌ಗೆ ಕರೆದೊಯ್ಯಲು ಮತ್ತೊಂದು ಆಂಬುಲೆನ್ಸ್ ಬರಬೇಕಿತ್ತು. ಅಲ್ಲಿಯೂ ಸಹ ತುಂಬ ತಡವಾಗಿ ಆಂಬುಲೆನ್ಸ್ ಬಂತು. ಇನ್ನು ನಿಮ್ಹಾನ್ಸ್‌ನಲ್ಲೂ ತುರ್ತು ಚಿಕಿತ್ಸೆ ಸಿಗಲಿಲ್ಲ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.‘ಜಿಲ್ಲಾ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಸೇವೆಯೇ ಲಭ್ಯವಿಲ್ಲ. ತಕ್ಷಣವೇ ದೂರವಾಣಿ ಕರೆ ಮಾಡಿದರೆ, ಸುಮಾರು ಅರ್ಧಗಂಟೆ ತಡವಾಗಿ ಅಂಬುಲೆನ್ಸ್ ಬರುತ್ತದೆ. ಆ ವೇಳೆಗೆ  ಗಾಯಗೊಂಡ ವ್ಯಕ್ತಿ ಮೃತಪಟ್ಟಿರುತ್ತಾನೆ.ಈ ಬಗ್ಗೆ ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.