ಬುಧವಾರ, ಮೇ 12, 2021
19 °C

ಸಿಡಿಲಿಗೆ ಬೈಕ್ ಸವಾರ ಸೇರಿ ಮೂವರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ವಿಜಾಪುರ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಗುರುವಾರ ಸಿಡಿಲು ಬಡಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ.ಹುಬ್ಬಳ್ಳಿ ವರದಿ:  ವಿಜಾಪುರ ಜಿಲ್ಲೆಯ ಸಿಂದಗಿ ಬಳಿ ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸಾವಿಗೀಡಾಗಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಮೃತನನ್ನು ದೇವರಹಿಪ್ಪರಗಿ ಠಾಣೆಯ ಕಾನ್‌ಸ್ಟೆಬಲ್ ಹೊನ್ನಪ್ಪ ರಾಜಪ್ಪ ಬನಹಟ್ಟಿ (30)ಎಂದು ಗುರುತಿಸಲಾಗಿದೆ.ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬಾಳ ಕೆ.ಡಿ. ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸತ್ತಿವೆ. ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಸುತ್ತಮುತ್ತ ಆಲಿಕಲ್ಲುಸಮೇತ ಮಳೆಯಾಗಿದೆ.ಹುಬ್ಬಳ್ಳಿಯಲ್ಲಿ ಮುಂಜಾನೆ ಭಾರಿ ಗುಡುಗು-ಸಿಡಿಲು ಸಮೇತ ಮಳೆಯಾಗಿದೆ. ಕಾರವಾರ ನಗರದಲ್ಲಿಯೂ ಭಾರಿ ಸಿಡಿಲು ಸಮೇತ ಸುಮಾರು ಒಂದು ತಾಸು ಮಳೆಯಾಗಿದೆ.ಉತ್ತರ ಕರ್ನಾಟಕದ ವಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಗುರುವಾರ ಮಳೆಯಾಗಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಸಿಡಿಲು ಬಡಿದು ಹೊಲದಲ್ಲಿದ್ದ ರೈತ ಶಿವರಾಯ ಮಲ್ಲಪ್ಪ ಸೂಟಕ (65) ಮೃತಪಟ್ಟಿದ್ದಾರೆ. ತಾಲ್ಲೂಕಿನ ಬೀರನಹಳ್ಳಿಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸತ್ತಿವೆ.ಗುಲ್ಬರ್ಗ ವರದಿ:  ಗುಲ್ಬರ್ಗ ನಗರ ಮತ್ತು ಜಿಲ್ಲೆಯ ಕೆಲವೆಡೆ ಗುರುವಾರ ಸಂಜೆ ಜೋರಾಗಿ ಮಳೆ ಸುರಿಯಿತು. ಕೊಪ್ಪಳ, ಬೀದರ್‌ನ ಕೆಲವು ಕಡೆಗಳಲ್ಲೂ ತುಂತುರು ಮಳೆ ಬಿತ್ತು.ಬೀದರ್ ಜಿಲ್ಲೆ ಚಿಟಗುಪ್ಪಾ ಹತ್ತಿರದ ಕುಡಂಬಲ್ ಗ್ರಾಮದಲ್ಲಿ ಸಿಡಿಲು ಬಿದ್ದು ರೈತ ನಬಿಸಾಬ್ ಹುಸೇನಸಾಬ್ ಬೋತಗಿ (60) ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾದವು.ಹುಮನಾಬಾದ್ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಡಿಲು ಬಡಿದು ನಿರ್ಣಾದಲ್ಲಿ ಮೂರು ಕುರಿಗಳು, ಮುಸ್ತರಿ ಗ್ರಾಮದಲ್ಲಿ ಒಂದು ಎತ್ತು ಮೃತಪಟ್ಟಿವೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಒಂದು ಎಮ್ಮೆ ಮತ್ತು ಒಂದು ಎತ್ತು ಸಾವನ್ನಪ್ಪಿದ್ದವು.ಚಳ್ಳಕೆರೆ ವರದಿ: ಪಟ್ಟಣದಲ್ಲಿ ಗುರುವಾರ ಸಂಜೆಯ ಹೊತ್ತಿಗೆ ಬಿರುಗಾಳಿ ಪ್ರಾರಂಭವಾದರೆ, ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ತಾಲ್ಲೂಕಿನ ಗೋಪನಹಳ್ಳಿ, ಸಾಣೀಕೆರೆ ಮುಂತಾದೆಡೆ ಆಲಿಕಲ್ಲು ಮಳೆ ಬಿದ್ದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.