ಗುರುವಾರ , ಮೇ 26, 2022
30 °C

ಸಿಡಿಲು ಬಡಿದು ಏಳು ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಬುಧವಾರ ಸಿಡಿಲು ಬಡಿದು ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಆರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಕೆಲವು ಕುರಿಗಳೂ ಮೃತಪಟ್ಟಿವೆ.

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಡಿಗ್ಗಿ ತಾಂಡಾದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು  ಸಾವನ್ನಪ್ಪಿದ್ದಾರೆ. ಇವರನ್ನು ಸಂಜಯ ರಾಮು ಜಾಧವ (20), ಮಂಜು ರಾಮು ಜಾಧವ (18), ಶಾಂತಾಬಾಯಿ ರಾಮು ಜಾಧವ (50) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ.

ಹೊಲಕ್ಕೆ ಹೋದ ಯುವಕ ಸಿಡಿಲು ಬಡಿದು ಸತ್ತ ಘಟನೆ ಇದೇ ತಾಲ್ಲೂಕಿನ ಕಾಟಮ್ಮದೇವರಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ ನಡೆದಿದೆ. ಗ್ರಾಮದ ತಾಯಪ್ಪ ರಾಜೇಂದ್ರ ಭೋವಿ (20) ಸಿಡಿಲಿಗೆ ಬಲಿಯಾಗಿದ್ದಾರೆ. ಇವರ ಪ್ಯಾಂಟಿನಲ್ಲಿ ಮೊಬೈಲ್ ಇತ್ತು.

ಸಿಡಿಲು ನೇರವಾಗಿ ಮೊಬೈಲ್ ಇದ್ದ ಭಾಗಕ್ಕೆ  ಅಪ್ಪಳಿಸಿದ್ದು ತಾಯಪ್ಪ ಸ್ಥಳದಲ್ಲಿಯೇ ಮೃತರಾದರು. ಕಾಟಮ್ಮದೇವರಹಳ್ಳಿ ಕಂದಾಯ ವ್ಯಾಪ್ತಿಯಲ್ಲಿ ಎತ್ತುಗಳನ್ನು ಮೇಯಿಸಲು ಹೋದಾಗ ಈ ಘಟನೆ ಸಂಭವಿಸಿದೆ.

ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಹೂರು ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಈರಪ್ಪ ಮಲ್ಲಪ್ಪ ಕಟ್ಟಿ (75) ಎಂಬುವವರು ಮೃತಪಟ್ಟಿದ್ದಾರೆ. ಕುರಿಗಳಿಗೆ ಯಾವುದೇ ಹಾನಿ ಆಗಿಲ್ಲ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮದಕಟ್ಟಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕಾಶ ನಾಗಪ್ಪ (35) ಮೃತ ವ್ಯಕ್ತಿ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅದೇ ಹೊಲದಲ್ಲಿದ್ದ 14 ವರ್ಷದ ಬಾಲಕನಿಗೆ ಗಾಯಗಳಾಗಿದ್ದು ಭಾಲ್ಕಿ ಆಸ್ಪತ್ರೆಗೆ ಸೇರಿಸಲಾಗಿದೆ. ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ಸಾವು- ಐವರಿಗೆ ಗಾಯ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಕಾಳಾಪುರ ಗ್ರಾಮದ ಹತ್ತಿರ ಸಿಡಿಲು ಬಡಿದು ನಾಗರಾಜ (26) ಮೃತಪಟ್ಟಿದ್ದಾರೆ. ಇತರ ಐವರಿಗೆ ಗಾಯಗಳಾಗಿವೆ. 16 ಮೇಕೆ ಹಾಗೂ 3 ಕುರಿ ಸಾವನ್ನಪ್ಪಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.