ಬುಧವಾರ, ಜೂನ್ 16, 2021
28 °C
ಇಬ್ಬರು ಕ್ಯಾಬಿನೆಟ್‌, ಇಬ್ಬರು ರಾಜ್ಯ ಸಚಿವರ ಪ್ರಮಾಣ

ಸಿದ್ದರಾಮಯ್ಯ ಸಂಪುಟ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಬಾರಿಗೆ ತಮ್ಮ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಸೇರಿದಂತೆ ನಾಲ್ವರು ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ವಿಧಾನ ಪರಿಷತ್‌ ಸದಸ್ಯರೂ ಆದ ಪರಮೇಶ್ವರ್‌ (ಚಲವಾದಿ) ಮತ್ತು ಹಾನಗಲ್‌ ಶಾಸಕ ಮನೋಹರ ತಹಸೀಲ್ದಾರ್‌ (ಬಲಿಜ) ಅವರು ಸಂಪುಟ ದರ್ಜೆ ಸಚಿವರಾಗಿ ಹಾಗೂ ಅರಕಲಗೂಡು ಶಾಸಕ ಎ.ಮಂಜು (ಒಕ್ಕಲಿಗ) ಮತ್ತು ಧಾರವಾಡ ಶಾಸಕ ವಿನಯ ಕುಲಕರ್ಣಿ (ಪಂಚಮಸಾಲಿ ಲಿಂಗಾಯತ) ಅವರು  ರಾಜ್ಯ ಸಚಿವರಾಗಿ (ಸ್ವತಂತ್ರ ಕಾರ್ಯಭಾರ) ಪ್ರಮಾಣ ವಚನ ಸ್ವೀಕರಿಸಿದರು.ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಎಲ್ಲ 34 ಸ್ಥಾನಗಳು ಭರ್ತಿಯಾದಂತಾಗಿವೆ.ಪರಮೇಶ್ವರ್‌ ಸೇರ್ಪಡೆಯಿಂದ ಪರಿಷತ್ತಿನ ಇಬ್ಬರು ಸಚಿವರಾದಂತಾಗಿದೆ. ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್.ಪಾಟೀಲ ಕೂಡ ಪರಿಷತ್ತಿನ ಸದಸ್ಯರು.ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ಮಂದಿಯಲ್ಲಿ ಪರಮೇಶ್ವರ್‌ ಮಾತ್ರ ಈ ಹಿಂದೆ ಎಸ್‌.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದವರು. ಉಳಿದ ಮೂವರಿಗೆ ಸಚಿವ ಸ್ಥಾನದ ಅನುಭವ ಇದೇ ಮೊದಲು. ಮನೋಹರ ತಹಸೀಲ್ದಾರ್‌ ವಿಧಾನಸಭೆ ಉಪಾಧ್ಯಕ್ಷರಾಗಿದ್ದರು.10 ವರ್ಷಗಳ ನಂತರ ಪ್ರಾತಿನಿಧ್ಯ: ಹಾಸನ ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಬ್ಬರಿಗೆ ಹತ್ತು ವರ್ಷಗಳ ನಂತರ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ.ಧರ್ಮಸಿಂಗ್‌ ಸಂಪುಟದಲ್ಲಿ ಹಾಸನದ ಬಿ.ಶಿವರಾಂ ಸಚಿವರಾಗಿದ್ದರು. ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪ್ರಯತ್ನ ನಡೆಸಿದ್ದ ಮಂಜು ಅವರ ಆಸೆ ಈಗ ಈಡೇರಿದೆ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಇರಲಿಲ್ಲ ಎನ್ನುವ ಕಾರಣಕ್ಕೆ ಆ ಎರಡೂ ಜಿಲ್ಲೆಗಳಿಂದ ತಹಸೀಲ್ದಾರ್‌ ಮತ್ತು  ಕುಲಕರ್ಣಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕೆ.ಬಿ.ಕೋಳಿವಾಡ, ಬಸವರಾಜ ರಾಯರೆಡ್ಡಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.ದೇವರು, ತಂದೆ–ತಾಯಿ...

ಪರಮೇಶ್ವರ್‌, ತಹಸೀಲ್ದಾರ್‌  ಮತ್ತು ಕುಲಕರ್ಣಿ ಅವರು ದೇವರ ಹೆಸರಿನಲ್ಲಿ , ಮಂಜು ಅವರು ತಂದೆ–ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪರಮೇಶ್ವರ್‌ ಹೊರತುಪಡಿಸಿ ಉಳಿದ ಮೂವರು ಪ್ರಮಾಣ ವಚನ ನಂತರ ಮುಖ್ಯಮಂತ್ರಿಯವರ ಪಾದಗಳಿಗೆ ಬಾಗಿ ನಮಸ್ಕರಿಸಿದರು.

ಊರುಗೋಲಾದ ಮೈಕ್‌ ಸ್ಟ್ಯಾಂಡ್‌:  ಮನೋಹರ ತಹಸೀಲ್ದಾರ್‌ ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ಮುಂದಿದ್ದ ಮೈಕ್‌ ಸ್ಟ್ಯಾಂಡ್‌ ಅನ್ನೇ ಊರುಗೋಲಾಗಿ ಬಳಸಿದರು.ಮಂಡಿ ನೋವಿನಿಂದ ಬಳಲುತ್ತಿದ್ದ ಅವರು, ಸ್ವತಂತ್ರವಾಗಿ ನಿಲ್ಲುವುದಕ್ಕೂ ಕಷ್ಟಪಡುತ್ತಿದ್ದರು. ಹೀಗಾಗಿ ಒಂದು ಕೈಯಲ್ಲಿ ಮೈಕ್ ಸ್ಟ್ಯಾಂಡ್‌ ಹಿಡಿದೇ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಹಿ ಹಾಕಲು ತೆರಳುವುದಕ್ಕೂ ಅಕ್ಕಪಕ್ಕ ಇದ್ದ ಟೇಬಲ್‌ಗಳನ್ನು ಹಿಡಿದೇ ಮುಂದೆ ಸಾಗಿದರು. ವೇದಿಕೆ ಇಳಿಯುವಾಗಲಂತೂ ಬೇರೆಯವರ ನೆರವು ಪಡೆದರು.ಓದಲು ತಡವರಿಸಿದ ಕುಲಕರ್ಣಿ: ವಿನಯ ಕುಲಕರ್ಣಿ ಪ್ರಮಾಣ ವಚನ ಸ್ವೀಕರಿಸುವಾಗ ಕನ್ನಡ ಓದಲು ತಡವರಿಸಿದ ಪ್ರಸಂಗ ನಡೆಯಿತು.ಪರಮೇಶ್ವರ್‌ಗೆ ಗೃಹ?

ಪರಮೇಶ್ವರ್‌ ಅವರು ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಿಗೆ ಪಟ್ಟುಹಿಡಿದಿರುವ ಕಾರಣ ಖಾತೆ ಹಂಚಿಕೆ ಕಗ್ಗಂಟಾಗಿದ್ದು, ಶುಕ್ರವಾರ ಅಂತಿಮವಾಗುವ ಸಾಧ್ಯತೆ ಇದೆ.ಜೇಬಿಗೆ ಕತ್ತರಿ: ಅರಕಲಗೂಡಿನ ಶಾಸಕ ಎ.ಮಂಜು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭ್ರಮ ಕಣ್ತುಂಬಿಕೊಳ್ಳಲು ಬಂದ ಅವರ ಗೆಳೆಯರೊಬ್ಬರ ಜೇಬಿಗೆ ಕತ್ತರಿ ಬಿದ್ದಿದೆ. ಬಾಲ್ಯ ಸ್ನೇಹಿತ ಸಚಿವ ನಾದ ಸಂಭ್ರಮದಲ್ಲಿ ಮೈಮರೆತಿದ್ದ ಅರಕಲಗೂಡಿನ ಆನಂದ್‌ ಅವರು ಜೇಬಿನಲ್ಲಿದ್ದ ₹ 50 ಸಾವಿರವನ್ನು ಕಳೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.