ಗುರುವಾರ , ಮಾರ್ಚ್ 4, 2021
29 °C
ಜಯಂತಿ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ನುಡಿ

ಸಿದ್ದರಾಮೇಶ್ವರ ಸಮಾಜ ಸುಧಾರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮೇಶ್ವರ ಸಮಾಜ ಸುಧಾರಕರು

ಕಲಬುರ್ಗಿ: ಶಿವಯೋಗಿ ಸಿದ್ದರಾಮೇಶ್ವರು ತಮ್ಮ ಕಾಲದಲ್ಲಿ ಸಮಾಜದಲ್ಲಿರುವ ತೊಡಕುಗಳನ್ನು ಸುಧಾರಿಸಲು ಸುಮಾರು 68ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು ರಚಿಸುವ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದರು.ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉತ್ಸವ ಸಮಿತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬರಗಾಲದಿಂದ ನಾಡು ತತ್ತರಿಸಿದಾಗ ದುಡಿಯುವ ಮತ್ತು ಶ್ರಮಿಕ ವರ್ಗ ಭೋವಿ ಸಮಾಜದವರ ಶೋಷಣೆ ತಪ್ಪಿಸಲು ಹಾಗೂ ಈ ವರ್ಗದ ಶ್ರೇಯೋಭಿವೃದ್ಧಿಗಾಗಿ ಸಿದ್ದರಾಮೇಶ್ವರರು ಅನೇಕ ಕೆರೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು. ಸೊಲ್ಲಾಪುರದಲ್ಲಿ ಈಗಲೂ ಇರುವ ಕೆರೆಯಿಂದ ನೀರನ್ನು ಕುಡಿಯಲು ಮತ್ತು ನೀರಾವರಿಗೆ ಬಳಸಿಕೊಳ್ಳಲಾಗುತ್ತಿದೆ. 12ನೇ ಶತಮಾನವು ಈ ಭಾಗಕ್ಕೆ ಅವಿಸ್ಮರಣೀಯ ಕಾಲವಾಗಿದ್ದು, ಅಂದಿನ ಐವರು ಮುಖ್ಯ ಗುರುಗಳಲ್ಲಿ ಸಿದ್ದರಾಮೇಶ್ವರರು ಒಬ್ಬರಾಗಿದ್ದರು. ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅವರು ಶ್ರಮಿಸಿದ್ದರು ಎಂದು ಹೇಳಿದರು.ಚಿಂಚೋಳಿ ಶಾಸಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಉಮೇಶ ಜಾಧವ ಮಾತನಾಡಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಹಿಂದುಳಿದ ಸಮಾಜದ ಸುಧಾರಣೆಗೆ ಬಳಸಲಾಗುತ್ತಿದ್ದು, ಕೆಎಸ್‌ಎಫ್‌ಸಿಯಿಂದ ₹5 ಕೋಟಿ ವರೆಗೆ ಶೇ 4ರ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ಮುಂದೆ ಬರಬೇಕು ಎಂದರು.    ಚಿಗರಳ್ಳಿಯ ಮರುಳ ಶಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೇಯರ್ ಭೀಮರೆಡ್ಡಿ ಪಾಟೀಲ ಕುರಕುಂದಾ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭಾಗಣಗೌಡ ಸಂಕನೂರ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಟೆಂಗಳಿ, ಜಿಲ್ಲಾ ಭೋವಿ (ವಡ್ಡರ) ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಿ.ಕುಸ್ತಿ, ಸಮಾಜದ ಮುಖಂಡ ಅನಿಲ್ ವಿ.ಜಾಧವ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಯುಸೂಫ್ ಭಾಗವಹಿಸಿದ್ದರು. ಸಾಹಿತಿ ಎಚ್.ಎಸ್. ಬೇನಾಳ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.ಆಕರ್ಷಕ ಮೆರವಣಿಗೆ: ಕಾರ್ಯಕ್ರಮದ ನಂತರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆಯು ಡಾ.ಎಸ್.ಎಂ.ಪಂಡಿತ ರಂಗಮಂದಿರದಿಂದ ಹೊರಟು ಜಗತ್ ವೃತ್ತ, ರಂಗಮಂದಿರ, ಆನಂದ ಹೋಟೆಲ್, ವಿನೋಭಾ ಭಾವೆ ಚೌಕ್ ಮೂಲಕ ಬ್ರಹ್ಮಪುರ (ವಡ್ಡರಗಲ್ಲಿ) ದಲ್ಲಿರುವ ಶಿವದಾಸ ಮಹಾರಾಜರ ಮಠ ತಲುಪಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.