ಬುಧವಾರ, ಮೇ 25, 2022
31 °C

ಸಿದ್ಧಾರೂಢರ ಜಾತ್ರೆ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಿದ್ಧಾರೂಢರ 106ನೇ ರಥೋತ್ಸವ ಗುರುವಾರ ವೈಭವದಿಂದ ಜರುಗಿತು. ಬೆಂಗಳೂರಿನಿಂದ ಭಕ್ತರು ಕಳಿಸಿದ ಸಂಪಿಗೆ, ಗುಲಾಬಿ, ಚೆಂಡು ಹೂವು ಜೊತೆಗೆ ಸ್ಥಳೀಯ ಭಕ್ತರು ಕಾಣಿಕೆಯಾಗಿ ನೀಡಿದ ಬಿಲ್ವಪತ್ರೆ, ಬಾಳೆಗೊನೆ, ಅಡಿಕೆ ಹೂವಿನಿಂದ ಸಿಂಗರಿಸಿದ ತೇರಿನತ್ತ ಉತ್ತತ್ತಿ, ಲಿಂಬೆಹಣ್ಣು, ಮಾವಿನಕಾಯಿ, ಬಾಳೆಹಣ್ಣು, ಮುಸಂಬಿ ಹಣ್ಣುಗಳನ್ನು ತೂರಿದ ಭಕ್ತರು ಭಕ್ತಿಯಿಂದ ಕೈಮುಗಿದರು.ವಿವಿಧೆಡೆಗಳಿಂದ ಆಗಮಿಸಿದ ಡೊಳ್ಳು ಕುಣಿತ ತಂಡ, ಭಜನೆ ಮೇಳದ ತಂಡದೊಂದಿಗೆ ಸಾಗಿದ ತೇರು ಮಹಾದ್ವಾರದವರೆಗೆ ತೆರಳಿತು. ಮರಳಿ ಮಠದ ಹತ್ತಿರ ಬಂದಾಗ ಭಕ್ತರು ಚಪ್ಪಾಳೆ ತಟ್ಟಿ ಮತ್ತೊಮ್ಮೆ ಭಕ್ತಿಯಿಂದ ನಮಿಸಿದರು. ಇದಕ್ಕೂ ಮೊದಲು ಮಧ್ಯಾಹ್ನ 12 ಗಂಟೆಗೆ ಸಿದ್ಧಾರೂಢರ ಮೂರ್ತಿ ಹೊತ್ತ ಪಲ್ಲಕ್ಕಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ಐದು ಗಂಟೆಗೆ ತೇರಿನ ಬಳಿ ಬಂತು.ಅಲ್ಲಿ ಜಿಲ್ಲಾ ನ್ಯಾಯಾಧೀಶ ಹಾಗೂ ಮಠದ ಮುಖ್ಯ ಆಡಳಿತಾಧಿಕಾರಿ ಕೆ. ನಟರಾಜನ್, ಮಠದ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ಸಿಂಘಿ  ಮತ್ತು ಇತರ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಪೂಜೆಯಾದ ನಂತರ ಸಿದ್ಧಾರೂಢರ ಮೂರ್ತಿಯನ್ನು ತೇರೊಳಗಿಟ್ಟ ಕೂಡಲೇ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಸಿದ್ಧಾರೂಢರು ಬೋಧಿಸಿದ ಅದ್ವೈತ ಸಿದ್ಧಾಂತದ ಪ್ರತಿಪಾದಕರು ಮತ್ತು ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತರು ತೇರಿನೊಂದಿಗೆ ಹೆಜ್ಜೆ ಹಾಕಿದರು.ಮುಂಜಾನೆಯಿಂದ ಆರಂಭಗೊಂಡ ಅನ್ನಪ್ರಸಾದ ಮಧ್ಯರಾತ್ರಿಯವರೆಗೆ ಮುಂದುವರಿಯಿತು. ಅನ್ನಪ್ರಸಾದದ ಜೊತೆಗೆ ಹುಲಕೋಟಿ ವೀರಭದ್ರ ದೇವಸ್ಥಾನದ ಟ್ರಸ್ಟಿ ಚಂದ್ರಶೇಖರ ಮಟ್ಟಿ, ರುದ್ರಯ್ಯ ಸ್ವಾಮಿ ಹಿರೇಮಠ ಹಾಗೂ ಬಸವರಾಜ ಕಲ್ಯಾಣಶೆಟ್ಟಿ ಅವರಿಂದ ಕಾಣಿಕೆಯಾದ ಗೋಧಿ ಹುಗ್ಗಿ, ಬೂಂದಿ ಹಾಗೂ ಪಲಾವ್ ಅನ್ನು ಭಕ್ತರಿಗೆ ಬಡಿಸಲಾಯಿತು. ಅನೇಕ ಭಕ್ತರು ಶರಬತ್ತು ಹಾಗೂ ಮಜ್ಜಿಗೆಯನ್ನೂ ವಿತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.