ಸೋಮವಾರ, ಏಪ್ರಿಲ್ 12, 2021
26 °C

ಸಿನಿಮಾಕ್ಕಾಗಿ ವಿವಾಹ ತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನಿಮಾಕ್ಕಾಗಿ ವಿವಾಹ ತ್ಯಾಗ

`ಗೋವಿಂದಾಯ ನಮಃ~ ಸಿನಿಮಾ ನಿರ್ದೇಶನದ ಮೂಲಕ ಜನಪ್ರಿಯತೆ ಪಡೆದಿರುವ ಪವನ್ ಒಡೆಯರ್ ಅಂತಿಂಥ ಪ್ರತಿಭಾವಂತರಲ್ಲ. ಹೈಸ್ಕೂಲ್‌ನಲ್ಲಿ ಹಾಜರಾತಿ ಕಡಿಮೆ ಬಿದ್ದಾಗ ಹಾಜರಿ ಪುಸ್ತಕವನ್ನೇ ಕದಿಯುವಂಥ ಸೃಜನಶೀಲ ಐಡಿಯಾ ಮಾಡಿದವರು. ಅತಿ ಸಣ್ಣ ವಯಸ್ಸಿನಲ್ಲೇ ನಿರ್ದೇಶಕರಾಗಿ ಯಶಸ್ವಿಯಾಗಿರುವವರು. ಅವರ ಬದುಕಿನ ಅಮೂಲ್ಯ ಕ್ಷಣಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.“ನಿರ್ದೇಶಕನಾಗಬೇಕೆಂಬ ಕನಸನ್ನು ನಾನು ಯಾವತ್ತೂ ಕಂಡಿರಲೇ ಇಲ್ಲ. ಆದರೂ ನನಗೆ ಅರಿವಿಲ್ಲದಂತೆ ಬಾಲ್ಯದ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದೆ. ಕಲೆಯ ಗೀಳು ಎಲ್ಲೋ ನನ್ನೊಳಗೆ ಅಂತರ್ಗಾಮಿಯಾಗಿ ನನಗೇ ಗೊತ್ತಿಲ್ಲದಂತೆ ಹರಿಯುತ್ತಿತ್ತು. ಸಿನಿಮಾ ಕ್ಷೇತ್ರವಂತೂ ಹೇಗಿರುತ್ತದೆ ಎಂಬ ಅಂದಾಜೇ ಇರಲಿಲ್ಲ.ಕಾಲೇಜು ಜೀವನದಲ್ಲಂತೂ ಎಂದೂ ಸಿನಿಮಾ ನೋಡುವ ಗೀಳನ್ನು ಹಚ್ಚಿಕೊಂಡಿದ್ದವನಲ್ಲ. ಆದರೂ ಇಂದು ಈ ಸಿನಿಮಾ ಕ್ಷೇತ್ರವೇ ನನಗೆ ಜನಪ್ರಿಯತೆ ತಂದುಕೊಟ್ಟಿದೆ. ನನ್ನ ಬದುಕನ್ನು ಪೊರೆಯುವಂತೆ ಮಾಡಿದೆ.    ನನ್ನೂರು ಕುಣಿಗಲ್. ನಮ್ಮದು ಸಂಪ್ರದಾಯಸ್ಥ ಕುಟುಂಬ. ಬರವಣಿಗೆಯಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದಿದ್ದರಿಂದ ಸಿನಿಮಾಕ್ಕೆ ಕಥೆ ಬರೆಯಬೇಕೆಂಬ ಹಂಬಲ ಮೊಳಕೆಯೊಡೆಯಿತು. ನನ್ನ ಬಯಕೆಯನ್ನು ಮನೆಯವರಲ್ಲಿ ಹೇಳಿಕೊಂಡಾಗ ಅಮ್ಮ `ನಿನಗೆ ಹುಡುಗಿ ಸಿಗೋದು ಕಷ್ಟ ಆಗುತ್ತದೆ ಬೇಡ~ ಎಂದುಬಿಟ್ಟಿದ್ದರು! ಏನೇ ಆಗಲಿ ಎಂದು ಸಿನಿಮಾಕ್ಕಾಗಿ ಮದುವೆಯನ್ನು ತ್ಯಾಗ ಮಾಡಿ ಈ ಕ್ಷೇತ್ರವನ್ನು ಪ್ರವೇಶಿಸಿಬಿಟ್ಟೆ ! ಆದರೆ ಮನೆಯವರ ಕನಸನ್ನು ಮುರುಟಿ ಹಾಕಲು ನನಗೆ ಇಷ್ಟ ಇರಲಿಲ್ಲ. ಒಂದು ವರ್ಷ ಸಮಯ ನೀಡಿ, ಆ ಅವಧಿಯಲ್ಲಿ ಏನೂ ಸಾಧಿಸಲಾಗದಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದಿದ್ದೆ. ಯುದ್ಧರಂಗಕ್ಕೆ ಕಳುಹಿಸುವ ಹಾಗೆ ನನ್ನ ಮನೆಯವರು ಅದಕ್ಕೆ ಒಪ್ಪಿಗೆ ಸೂಚಿಸಿಬಿಟ್ಟಿದ್ದರು.ಅದೃಷ್ಟ ಮತ್ತು ಪರಿಶ್ರಮ ಎರಡನ್ನೂ ನಾನು ನಂಬಿದ್ದೆ. ಎರಡೂ ನನ್ನ ಕೈಬಿಡಲಿಲ್ಲ. ನನ್ನ ಮೊದಲ ನಿರ್ದೇಶನದ `ಗೋವಿಂದಾಯ ನಮಃ~ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನೇ ಗಳಿಸಿತು. ಸಹಜವಾಗೇ ಮನೆಯವರಿಗೂ ಖುಷಿ ಎನ್ನಿಸಿತ್ತು.ಇವತ್ತು ಎಷ್ಟೋ ಜನ ಈ ಕ್ಷೇತ್ರದಲ್ಲಿ ನೆಲೆಯೂರಲು ಹೆಣಗಾಡುತ್ತಿದ್ದಾರೆ. ಆದರೆ ನನ್ನ ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದೆ. ಮೊದಲಿಗೆ ನಾನು ಬರೆದ ಕಥೆಯನ್ನು ಹೇಳಲು ನಾಗತಿಹಳ್ಳಿ ಚಂದ್ರಶೇಖರ್ ಬಳಿ ಹೋದೆ. ಕಥೆಯಂತೂ ಅವರಿಗೆ ಒಪ್ಪಿಗೆಯಾಗಲಿಲ್ಲ. ಆದರೇನಂತೆ ಆ ಪ್ರಯತ್ನ ನನಗೆ ಸಹ ಕಲಾವಿದನಾಗಿ ನಟಿಸುವ ಅವಕಾಶ ದೊರಕಿಸಿ ಕೊಟ್ಟಿತ್ತು. ನಂತರ ನಾನೆಂದೂ ಹಿಂದಿರುಗಿ ನೋಡಲೇ ಇಲ್ಲ.ಮುಂದೆ ಯೋಗರಾಜ್ ಭಟ್ಟರ ಗರಡಿ ಪ್ರವೇಶಿಸಲು ಅಣಿಯಾದೆ. ಸಿನಾಪ್ಸಿಸ್ ಹಿಡಿದುಕೊಂಡು ಅವರ ಮನೆಗೆ ಹೋದೆ. ಯಾಕಪ್ಪಾ ನಿನಗೆ ಸಿನಿಮಾದ ಗೀಳು. ಈ ಕ್ಷೇತ್ರಕ್ಕೆ ಪ್ರವೇಶಿಸಿದವರ ಬದುಕು ಚಿತ್ರಾನ್ನ ಆಗಿ ಬಿಡುತ್ತದೆ ಎಂದರು.ನನಗೆ ಚಿತ್ರಾನ್ನಾನೇ ಇಷ್ಟ ಸರ್ ಎಂದೆ. ಬಹುಶಃ ಅವರಿಗೆ ನನ್ನ ಆತ್ಮವಿಶ್ವಾಸ ಮೆಚ್ಚುಗೆಯಾಗಿರಬೇಕು. ಅವರ `ಪಂಚರಂಗಿ~ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಿದರು. ನಿಜಕ್ಕೂ ಅದೊಂದು ಅದ್ಭುತ ಅನುಭವ.

 

ಒಬ್ಬ ನಿರ್ದೇಶಕನಿಗಿರಬೇಕಾದ ಗುಣಗಳನ್ನು ನಾನು ಕಲಿತದ್ದು ಅಲ್ಲಿಯೇ. ಕಥೆ ಬರೆಯೋದಕ್ಕೂ ಅದನ್ನು ಸಿನಿಮಾ ಮಾಡೋದಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಇವೆರಡನ್ನೂ ಸರಿಯಾಗಿ ನಿರ್ವಹಣೆ ಮಾಡಿದಾಗ ಮಾತ್ರ ಉತ್ತಮ ನಿರ್ದೇಶಕನಾಗಲು ಸಾಧ್ಯ ಎಂಬುದನ್ನು ಅಲ್ಲಿ ತಿಳಿದುಕೊಂಡೆ.ನನ್ನ ಸ್ನೇಹಿತರಾದ ಸಂತೋಷ್ ಮತ್ತು ರಾಘವೇಂದ್ರರ ಜತೆಗೂಡಿ `ಐಡಿಯಾಲಜಿ~ ಮತ್ತು `ಫಾತಿಮಾ~ ಎಂಬ ಶಾರ್ಟ್ ಫಿಲ್ಮ್‌ಗಳನ್ನು ತೆಗೆದಿದ್ದೆ. ಆ ಸಮಯದಲ್ಲಿ ಆ್ಯಕ್ಷನ್, ಕಟ್ ಹೇಳುವುದಕ್ಕೂ ನನಗೆ ಬರುತ್ತಿರಲಿಲ್ಲ. ಆದರೆ ಈಗ ಸ್ವತಂತ್ರವಾಗಿ ನಿರ್ದೇಶನ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಇದಕ್ಕೆ ಯೋಗ್‌ರಾಜ್ ಭಟ್ ಮತ್ತು ನನ್ನ ಗೆಳೆಯರ ಸಹಕಾರ ಬಹಳಷ್ಟಿದೆ.ನನಗೀಗ 24 ವಯಸ್ಸು. ಈ ವಯಸ್ಸಿನಲ್ಲೇ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಅಂದೊಮ್ಮೆ ನಾನು ಎಸ್ಸೆಸ್ಸೆಲ್ಸಿಯಲ್ಲಿ ಅನುತೀರ್ಣನಾಗಿದ್ದ ಹುಡುಗ. ಒಬ್ಬ ವ್ಯಕ್ತಿ ಸೋತಾಗ ಸುತ್ತಲಿನ ಜನ ಹೇಗೆ ನೋಡುತ್ತಾರೆ ಎಂಬುದು ತಿಳಿದದ್ದು ನನಗೆ ಆಗಲೇ. ಹಾಗೆಂದು ನಾನು ಯಾವತ್ತೂ ಕೈಕಟ್ಟಿ ಕೂರಲಿಲ್ಲ.ಇನ್ನು ನನ್ನಿಂದ ಏನೂ ಸಾಧಿಸಲಾಗುವುದಿಲ್ಲ ಎಂದು ನನ್ನ ಮನಸ್ಸು ವಿಚಲಿತವಾಗಲಿಲ್ಲ. ಸೋಲನ್ನೇ ಸವಾಲಾಗಿ ಸ್ವೀಕರಿಸಿದೆ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದು ನನಗೆ ಅನ್ನಿಸಿದ್ದು ಆಗಲೇ. ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದೆ. ಆ ವರ್ಷದ ಪ್ರತಿಭಾ ಪುರಸ್ಕಾರವೂ ನನಗೆ ದೊರೆಯಿತು. ಬಿ.ಕಾಂ. ಮುಗಿಸಿದ ನಂತರ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಕೂಡಾ ಸಿಕ್ಕಿತು. ಆದರೆ ಸಿನಿಮಾ ರಂಗ ಕೈಬೀಸಿ ಕರೆಯುತ್ತಿದ್ದುದರಿಂದ ಆ ಕೆಲಸವನ್ನು ಬಿಡಬೇಕಾಯಿತು.    ಕಾಲೇಜ್‌ಗಿಂತ ನನನ್ನು ಹೆಚ್ಚು ಕಾಡಿದ್ದು ಹೈಸ್ಕೂಲ್ ದಿನಗಳು. ಆ ನನ್ನ ಸ್ನೇಹಿತರು, ನಾವು ಮಾಡುತ್ತಿದ್ದ ತರ‌್ಲೆಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಎ್ಲ್ಲಲರೂ ಕಾಲೇಜಿನಲ್ಲಿ ಕ್ಲಾಸ್‌ಗೆ ಚಕ್ಕರ್ ಹೊಡೆದರೆ, ನಾವು ಆ ಚಾಳಿಯನ್ನು ಹೈಸ್ಕೂಲ್‌ನಿಂದಲೇ ಪ್ರಾರಂಭ ಮಾಡಿದ್ದೆವು.ಹಾಗಾಗಿ ಹೈಸ್ಕೂಲ್ ದಿನಗಳಲ್ಲಿ ಹಾಜರಿ ಸಂಖ್ಯೆ ಕಡಿಮೆಯಾಗಿತ್ತು. ನಮ್ಮ ದೈಹಿಕ ಶಿಕ್ಷಕರು ಒಂದು ದಿನ ನನ್ನಪ್ಪನ ಕಿವಿಗೆ ಈ ವಿಷಯ ಮುಟ್ಟಿಸಿದರು. ಅಪ್ಪ ನನ್ನ ಹತ್ತಿರ ವಿಚಾರಿಸಿದಾಗ `ಪಿ.ಟಿ ಮಾಸ್ಟರ್‌ಗೆ ಅದ್ಲ್ಲೆಲಾ ಏನು ಗೊತ್ತಾಗುತ್ತಪ್ಪ~ ಎಂದು ಮರು ಪ್ರಶ್ನಿಸಿದ್ದೆ. ತಪ್ಪಿಸಿಕೊಳ್ಳಲು ಏನೋ ಸಮಜಾಯಿಷಿ ಕೊಟ್ಟಿದ್ದೆ.ಆದರೆ ಹಾಜರಾತಿ ಕಡಿಮೆ ಇದ್ದರೆ ಹಾಲ್ ಟಿಕೆಟ್ ಕೊಡೊಲ್ಲವಲ್ಲ. ಅದಕ್ಕೆ ಏನಾದರೂ ಪರಿಹಾರ ಕಂಡು ಹಿಡಿಯಲೇಬೇಕಿತ್ತು. ನಮ್ಮ ತರ‌್ಲೆ ತಂಡದ ಎಲ್ಲರೂ ಕೂತು ಇದಕ್ಕಾಗಿ ಪರಿಹಾರ ಏನೆಂದು ಯೋಚಿಸಿದೆವು. ಕ್ಲರ್ಕ್‌ಗೆ ಲಂಚ ಕೊಟ್ಟು ಅಟೆಂಡೆನ್ಸ್ ಹಾಕಿಸಿಕೊಳ್ಳೊ ಯೋಚನೆ ಹೊಳೆಯಿತು.ಎಲ್ಲಾ ಸೇರಿ 50 ರೂ. ಒಟ್ಟುಮಾಡಿ ಕ್ಲರ್ಕ್‌ಗೆ ಕೊಡೋಣ ಎಂದು ತೀರ್ಮಾನಿಸಿ ದುಡ್ಡು ತೆಗೆದುಕೊಂಡು ಅವರ ಬಳಿ ಹೋದೆವು. ಕ್ಲರ್ಕ್ ನಮ್ಮ ಮುಖಕ್ಕೆ ಸರಿಯಾಗಿ ಮಂಗಳಾರತಿ ಮಾಡಿದರು. ಸದ್ಯ ನಮ್ಮ ಅದೃಷ್ಟಕ್ಕೆ ವಿಷಯ ದೊಡ್ಡದಾಗಲಿಲ್ಲ. ಮುಂದೆ ಅವರಿಗೆ ಬೇರೆಡೆ ವರ್ಗಾವಣೆ ಆಯಿತು. ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಆಗ ನಮ್ಮ ತಲೆಗೆ ಹೊಳೆದಿದ್ದು ಮತ್ತೊಂದು ಭಯಂಕರ ಯೋಚನೆ.ಅಟೆಂಡೆನ್ಸ್ ಬುಕ್ ಕದ್ದರೆ ಹೇಗಿರುತ್ತದೆ ಎಂದು ಚಿಂತಿಸಿದೆವು. ತಡಮಾಡದೆ ಆ ದುಸ್ಸಾಹಸಕ್ಕೂ ಮುಂದಾದೆವು. ಈ ಸಲ ನಮ್ಮ ಪ್ರಯತ್ನ ವಿಫಲವಾಗಲಿಲ್ಲ. ಹೇಗೋ ಅಟೆಂಡೆನ್ಸ್ ಪಟ್ಟಿಯನ್ನು ಕದ್ದೆವು. ಎಲ್ಲರ ಮುಖದಲ್ಲೂ ಮಂದಹಾಸ.ಪರೀಕ್ಷೆಯಲ್ಲಿ ಗೆದ್ದಷ್ಟೇ ಸಂತೋಷ. ಇಂದಿಗೂ ಆ ನೆನಪುಗಳೆಲ್ಲ ಮನದ ಪುಟದಲ್ಲಿ ಬಂದರೆ ಮುಖದಲ್ಲಿ ನನಗೆ ತಿಳಿಯದಂತೆ ನಗುವೊಂದು ಚಿಮ್ಮಿ ಹೋಗುತ್ತದೆ. ಆ ತರ‌್ಲೆ ದಿನಗಳಲ್ಲಿ ಮನಸ್ಸು ಏನೆಲ್ಲಾ ಸೃಜನಶೀಲವಾಗಿ, ಚೌಕಟ್ಟುಗಳನ್ನು ಮೀರಿ ಹೊಸತನಕ್ಕೆ ತುಡಿಯುತ್ತಿತ್ತಲ್ಲಾ ಎಂಬ ಪುಳಕ ಆವರಿಸುತ್ತದೆ.  ಆ ದಿನಗಳ ನನ್ನ ಸ್ನೇಹಿತರೆಲ್ಲಾ ಇಂದಿಗೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ಹಲವರು ಸಾಕಷ್ಟು ಹಣದ ಸಹಾಯ ಮಾಡಿದ್ದಾರೆ. ನಾನಿನ್ನೂ ಆ ಸಾಲವನ್ನು ತೀರಿಸಿಲ್ಲ. ಯಾರಿಗೆ ಎಷ್ಟು ಕೊಡಬೇಕೆಂಬುದೇ ನನಗೆ ನೆನಪಿಲ್ಲ. ಅವರ ಪ್ರೋತ್ಸಾಹವೇ ನಾನು ಈ ಮಟ್ಟಿಗೆ ಬೆಳೆಯಲು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

 ನಾನು ಒಳ್ಳೆಯ ಹಾಡುಗಾರ ಕೂಡ.ಶಾಲಾ ದಿನಗಳಲ್ಲಿ ಭಾವಗೀತೆ, ಚಿತ್ರಗೀತೆ ಸ್ಪರ್ಧೆಗಳಲ್ಲಿ ಮೊದಲ ಬಹುಮಾನವನ್ನು ಯಾರಿಗೂ ಬಿಟ್ಟು ಕೊಟ್ಟವನೇ ಅಲ್ಲ. `ಗೋವಿಂದಾಯ ನಮಃ~ ಸಿನಿಮಾದ `ಪ್ಯಾರ್‌ಗೆ ಆಗ್ಬುಟೈತೆ~ ಹಾಡಿನ ಟ್ರ್ಯಾಕ್ ಹಾಡನ್ನು ಮೊದಲಿಗೆ ನಾನೇ ಸಂಯೋಜಿಸಿ ಹಾಡಿದ್ದೆ. ಟೇಬಲ್ ಟೆನ್ನಿಸ್, ಚೆಸ್, ಕ್ರಿಕೆಟ್ ಹೀಗೆ ಎಲ್ಲದರಲ್ಲೂ ನಾನು ಚಾಂಪಿಯನ್. ಮನೆಯಲ್ಲಿ ಜಾಗ ಹಿಡಿಸಲಾರದಷ್ಟು ಪ್ರಶಸ್ತಿ, ಫಲಕಗಳಿವೆ. ಜೀವನದಲ್ಲಿ ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಮೊದಲ ಸಿನಿಮಾಕ್ಕೆ ಪ್ರೇಕ್ಷಕರು ನೀಡಿರುವ ಪ್ರೋತ್ಸಾಹದಿಂದ ನನ್ನ ಜವಾಬ್ದಾರಿಯೂ ಹೆಚ್ಚಿದೆ. ಸದ್ಯ `ಗೂಗ್ಲಿ~ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದೇನೆ.ಒಂದಕ್ಕಿಂತ ಒಂದು ವಿಭಿನ್ನವಾದ ಚಿತ್ರವನ್ನು ಜನರಿಗೆ ನೀಡಬೇಕು, ಪ್ರತಿಯೊಂದು ಸಿನಿಮಾದಲ್ಲೂ ನನ್ನದೇ ಆದ ವಿಶೇಷತೆಯನ್ನು ಇಟ್ಟುಕೊಂಡು ಕನ್ನಡ ಸಿನಿಮಾ ರಂಗಕ್ಕೆ ಮಹತ್ವದ ಕಾಣ್ಕೆ ನೀಡಬೇಕೆಂಬುದೇ ನನ್ನ ಗುರಿ”.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.