ಸೋಮವಾರ, ಸೆಪ್ಟೆಂಬರ್ 16, 2019
22 °C

ಸಿಬಿಐ ತನಿಖೆಯೇ ಸೂಕ್ತ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿರುವುದು ಸಮರ್ಥನೀಯ ವಾಗಿದ್ದು, ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು  ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆಗ್ರಹಿಸಿದರು.ಜನಾರ್ದನ ರೆಡ್ಡಿ ಬಂಧನ ಕುರಿತಂತೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಅವರು, `ಜನಾರ್ದನ ರೆಡ್ಡಿ ಮತ್ತು ಅವರ ತಂಡ ಯಾವ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದೆ ಎಂಬ ವಿಷಯ ನಾನು ಸಲ್ಲಿಸಿದ ವರದಿಯಲ್ಲೇ ಇತ್ತು. ಆಂಧ್ರಪ್ರದೇಶದಲ್ಲಿ ನಡೆಸಿರುವ ಅಕ್ರಮಗಳ ಬಗ್ಗೆ ಸಿಬಿಐ ಬಲವಾದ ಸಾಕ್ಷ್ಯಗಳ ಆಧಾರದಲ್ಲೇ ಬಂಧಿಸಿರಬಹುದು~ ಎಂದರು.ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪೆನಿ, ಅನಂತಪುರ ಗಣಿ ಕಂಪೆನಿ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಗಳು ಹೊಂದಿದ್ದ ಗಣಿ ಗುತ್ತಿಗೆ ಪ್ರದೇಶದಲ್ಲಿ ತೆಗೆದ ಅದಿರಿನ ಪ್ರಮಾಣಕ್ಕೂ ರಫ್ತು ಮಾಡಿದ ಪ್ರಮಾಣಕ್ಕೂ ಭಾರಿ ವ್ಯತ್ಯಾಸವಿದೆ. ಕರ್ನಾಟಕದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅದಿರನ್ನು ಕಳ್ಳ ಸಾಗಣೆ ಮಾಡಿರುವ ಬಗ್ಗೆ ವರದಿಯಲ್ಲಿ ದಾಖಲೆ ಒದಗಿಸಲಾಗಿದೆ. ರೆಡ್ಡಿ ಮಾತ್ರವಲ್ಲ ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯಲ್ಲಿನ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದರು.`ಹಲವು ಪ್ರಕರಣಗಳ ಬಗ್ಗೆ ಮುಂದಿನ ತನಿಖೆ ನಡೆಸುವಂತೆ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆ ಎಲ್ಲ ಪ್ರಕರಣಗಳನ್ನೂ ಸಿಬಿಐಗೆ ಒಪ್ಪಿಸಬೇಕು. ಉಳಿದಂತೆ ಕಾನೂನು ತಿದ್ದುಪಡಿ, ಆಡಳಿತ ಸುಧಾರಣೆ ವಿಷಯಗಳ ಬಗ್ಗೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು~ ಎಂದು ಹೆಗ್ಡೆ ಹೇಳಿದರು.

Post Comments (+)