ಗುರುವಾರ , ಜೂನ್ 17, 2021
26 °C

ಸಿರಗುಂಪಿ:ವಸತಿ ಯೋಜನೆ ನಿರ್ಲಕ್ಷ್ಯ-ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಗುಂಪಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆಗೆ ಲಭ್ಯವಿರುವ ಗುಡಿಸಲು ವಾಸಿಗರ ವಸತಿ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಮನೆಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಸಂಬಂಧಪಟ್ಟ ಕಾರ್ಯದರ್ಶಿಗಳು ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ, ಕಾರಣ ಮನೆಗಳ ನಿರ್ಮಾಣ ಕಾರ್ಯ ಅರ್ಧಮರ್ದಕ್ಕೆ ನಿಂತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.ಮಂಗಳವಾರ ತಾಪಂ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಳಗೆ ನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಮಸ್ಯೆ ಬಗೆಹರಿಸದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಫಲಾನುಭವಿಗಳೆ ಮನೆಗಳನ್ನು ನಿರ್ಮಿಸಿಕೊಳ್ಳುವ ಯೋಜನೆ ಇದಾಗಿದ್ದು, ಈಗಾಗಲೇ ಮನೆಗಳನ್ನು ಬೆಸ್‌ಮೆಂಟ್ ಮಟ್ಟಕ್ಕೆ ನಿರ್ಮಿಸಿಕೊಳ್ಳಲಾಗಿದೆ. ಈ ಬಗ್ಗೆ ಕಚೇರಿಗೆ ದಾಖಲೆ ನೀಡಿದರೂ ಕಾರ್ಯದರ್ಶಿಗಳು ಕಂತಿನ ಹಣವನ್ನು ಬಿಡುಗಡೆ ಮಾಡುತ್ತಿಲ್ಲ, ಮನೆಗಳನ್ನು ನೋಂದಾಯಿಸಿಕೊಂಡ ಮೇಲೆಯೇ ಹಣ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ.ಹೀಗೆ ಮನೆಗಳು ಅರ್ಧಕ್ಕೆ ನಿರ್ಮಾಣಗೊಂಡು ನಾಲ್ಕೈದು ತಿಂಗಳು ಕಳೆದರೂ ಹಣ ಕೈ ಸೇರುತ್ತಿಲ್ಲ, ಹಣಕ್ಕಾಗಿ ಎದುರು ನೋಡುತ್ತಿರುವ ಫಲಾನುಭವಿಗಳು ಗ್ರಾಪಂ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಕೂಡಲೇ ಮೇಲಧಿಕಾರಿಗಳೇ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಗ್ರಾಮದ ಯಮನೂರಪ್ಪ, ಮರಿಯಪ್ಪ, ಮಹಾಂತೇಶ, ಹೂವಕ್ಕ, ಬಸವ್ವ, ಅಕ್ಕವ್ವ ಸೇರಿದಂತೆ ಅನೇಕರು ಮನವಿ ಮಾಡಿದರು.ತರಾಟೆ: ಸಿರಗುಂಪಿ ಗ್ರಾಮಸ್ಥರು ಸಭಾಂಗಣದಲ್ಲಿ ಪ್ರವೇಶಿಸುತ್ತಿದ್ದಂತೆ ಆಕ್ರೋಶಗೊಂಡ ತಾಪಂ ಉಪಾಧ್ಯಕ್ಷ ಹೊಳೆಗೌಡ ಪಾಟೀಲ ಕಾರ್ಯದರ್ಶಿ ವಿರುದ್ಧ ಹರಿಹಾಯ್ದರು. ಗ್ರಾಮ ಪಂಚಾಯಿತಿಯಲ್ಲಿಯೇ ಬಗೆ ಹರಿಸಬೇಕಾದ ಸಮಸ್ಯೆಯನ್ನು ತಾಪಂ ಕಚೇರಿಗೆ ಬಂದು ದೂರು ನೀಡುವಂತೆ ಮಾಡುವುದು ಸರಿಯಲ್ಲ, ತಮಗೆ ನೌಕರಿ ಮಾಡಲು ಬರುತ್ತದೆಯೋ ಇಲ್ಲೋ, ಪಂಚಾಯಿತಿಯಲ್ಲಿ ಕುಳಿತು ಏನು ಮಾಡ್ತೀರಿ, ಮಾನ ಮರ್ಯಾದೆ ಹರಾಜು ಹಾಕುವ ಕೆಲ್ಸಕ್ಕೆ ಕೈಹಾಕುವುದೇಕೆ, ಪ್ರತಿ ದಿನ ಒಂದಲ್ಲ ಒಂದು ಊರಿನ ಜನ ತಾಲ್ಲೂಕು ಪಂಚಾಯಿತಿಗೆ ಬಂದು ದೂರು ನೀಡುತ್ತಲೇ ಇರ‌್ತಾರೆ, ಇದನ್ನು ನೋಡಿದರೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಗಳು, ಪಿಡಿಒಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ತೀವ್ರ ತರಾಟೆಗೆ ತಗೆದುಕೊಂಡರು.ನೋಂದಣಿಯ ಸಮಸ್ಯೆ: ಗ್ರಾಮಸ್ಥರ ದೂರು ಆಲಿಸಿದ ನಂತರ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಅಕ್ಕೋಜಿ ಹಾಗೂ ವಸತಿ ಯೋಜನೆಯ ಅನುಷ್ಠಾನಾಧಿಕಾರಿ ಯಲ್ಲಪ್ಪ ಹೊಸ್ಮನಿ, ವಿಶೇಷವಾಗಿ ಮಹಿಳೆಯ ಹೆಸರಿನಲ್ಲಿ ವಸತಿ ಮಂಜೂರು ಆಗಿರುವುದರಿಂದ ಗ್ರಾಮ ಪಂಚಾಯಿತಿಯಲ್ಲಿ  ಅವರ ಹೆಸರಲ್ಲಿ ಜಮೀನು ಮುಟೇಶನ್ ಆಗುವುದು ಅಗತ್ಯವಿದೆ. ಆ ನಂತರವೇ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿದ ಮೇಲೆಯೇ ಫಲಾನುಭವಿಗೆ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಇಲ್ಲದೇ ಹೋದರೆ ಹಣ ಬಿಡುಗಡೆ ಮಾಡಲು ಯೋಜನೆಯ ನಿಯಮಾವಳಿಯ ಪ್ರಕಾರ ಅವಕಾಶವಿಲ್ಲ. ಆದರೂ ಸಂಬಂಧಪಟ್ಟ ಗ್ರಾಪಂ ಕಾರ್ಯದರ್ಶಿಗಳು ಕೂಡಾ ಸಾಕಷ್ಟು ಒತ್ತಡ ಹೇರಿ ತ್ವರಿತಗತಿಯಲ್ಲಿ ನೋಂದಾಯಿಸಲು ಪ್ರಯತ್ನಿಸುತ್ತಿದ್ದಾರೆ.ಹೀಗೆ ನೋಂದಾಯಿಸಿಕೊಂಡ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಒಪ್ಪಿಸಿ ಕಂತಿನ ಹಣ ಪಡೆಯಬೇಕಾಗುತ್ತದೆ. ಈ ಸಮಸ್ಯೆಯನ್ನು ಮನಗಂಡು ದಿನವೊಂದರಲ್ಲಿ ಕನಿಷ್ಠ 20ಮನೆಗಳನ್ನು ನೋಂದಾಯಿಸಿಕೊಳ್ಳುವಂತೆ ನೋಂದಣಾಧಿಕಾರಿಗಳಲ್ಲಿ ಮನವಿ ಮಾಡಿದ್ದು, ಈ ಸಮಸ್ಯೆಯನ್ನು ಗ್ರಾಮಸ್ಥರು ಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಕೋರಿದರು. ಅಲ್ಲದೇ ಮುಂದಿನ ದಿನಗಳಲ್ಲಿ ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳು ತಾಲ್ಲೂಕಿಗೆ ಹಾಜರಾಗುತ್ತಿದ್ದು ಅವರೊಂದಿಗೆ ಈ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದುದಾಗಿ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.