ಶುಕ್ರವಾರ, ಮೇ 7, 2021
22 °C

ಸಿಲಿಂಡರ್‌ ಸ್ಫೋಟ: ಹೊತ್ತುರಿದ ಕಲ್ಯಾಣ ಮಂಟಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಕಲ್ಯಾಣ ಮಂಟಪದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಮತ್ತು ಕಟ್ಟಡ ಕುಸಿದ ನಂತರ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಅಕ್ಷರಶಃ ಪ್ರಾಣ ಪಣಕ್ಕಿಟ್ಟು ಹೋರಾಡಿದರು.ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಮೂರು ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದರು. ಆ ವೇಳೆಗಾಗಲೇ ಇಡೀ ಕಟ್ಟಡವೇ ಹೊತ್ತಿ ಉರಿಯುತ್ತಿತ್ತು. ಬೆಂಕಿ ಜ್ವಾಲೆಗಳು ವ್ಯಾಪಿಸುತ್ತಿದ್ದವು. ದಟ್ಟ ಹೊಗೆ ಸಹ ಆವರಿಸಿದ್ದರಿಂದ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕಟ್ಟಡದ ಒಳಗೆ ಇನ್ನೂ ಹಲವು ಸಿಲಿಂಡರ್‌ಗಳಿದ್ದವು.ಅಂತಹ ಸಂದರ್ಭದಲ್ಲಿ ಕಟ್ಟಡದೊಳಗೆ ಹೋಗುವುದು ಸಾವಿನ ಮನೆ ಪ್ರವೇಶಿಸಿದಂತೇ ಆಗಿತ್ತು. ಆದರೂ ಎದೆಗುಂದದ ಸುಮಾರು ಹತ್ತು ಮಂದಿ ಸಿಬ್ಬಂದಿ ತಂಡ ಧೈರ್ಯದಿಂದ ಒಳ ನುಗ್ಗಿ ಬೆಂಕಿ ನಂದಿಸಲಾರಂಭಿಸಿತು. ಅದಾಗಲೇ ಬೆಂಕಿಯಿಂದ ಶಿಥಿಲವಾಗಿದ್ದ ಕಟ್ಟಡ ಕುಸಿದು ಸಿಬ್ಬಂದಿ ಮೇಲೆ ಬಿತ್ತು.ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಐದು ಮಂದಿ ಗಾಯಾಳುಗಳಲ್ಲಿ ಕೆಲವರ ತಲೆಗೆ, ಎದೆಗೆ, ಕೈಗೆ ಪೆಟ್ಟು ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಗೋವಿಂದಪ್ಪ ಅವರ ಎರಡೂ ಕಾಲುಗಳ ಮೇಲೆ ಕಟ್ಟಡದ ಅವಶೇಷ ಬಿದ್ದ ಪರಿಣಾಮ ಮುಳೆ ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.|ಕಲ್ಯಾಣ ಮಂಟಪದ ಕಟ್ಟಡ ಕುಸಿದು ನಾಲ್ಕು ಮನೆಗಳ ಮೇಲೆ ಬಿದ್ದಿದ್ದರಿಂದ ಮನೆಗಳು ನೆಲಸಮವಾದವು. ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂದು ಗೊತ್ತಿರಲಿಲ್ಲ. ಇಬ್ಬರು ಸಿಲುಕಿರಬಹುದು ಎಂಬ ಸಂಶಯದಿಂದಲೇ ಸಿಬ್ಬಂದಿ ಅವಶೇಷಗಳನ್ನು ತೆರವು ಮಾಡಿದರು. ಸತತ ಆರೇಳು ಗಂಟೆ ಬಿಡುವಿಲ್ಲದಂತೆ ಕೆಲಸ ಮಾಡಿದರು.`ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಅಗ್ನಿಶಾಮಕ ಸಿಬ್ಬಂದಿ ಒಳಗೆ ನುಗ್ಗಿದ್ದು ನೋಡಿ ಆಶ್ಚರ್ಯವಾಯಿತು. ಅವರ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಲೇಬೇಕು~ ಎಂದು ಸ್ಥಳೀಯ ನಿವಾಸಿ ಮಹೇಶ್ ಹೇಳಿದರು.ಅಗ್ನಿಶಾಮಕ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, ತಾಂತ್ರಿಕ ನಿರ್ದೇಶಕ ಬಿ.ಕೆ.ಹಂಪಗೋಳ್ ಅವರು ಇತರೆ ಸಿಬ್ಬಂದಿಯಂತೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.