ಸೋಮವಾರ, ಏಪ್ರಿಲ್ 19, 2021
31 °C

ಸಿಹಿನೀರು ಸೀಗಡಿ ಪಾಲನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಸಿಹಿ ನೀರು ಸೀಗಡಿ ಪಾಲನೆಗೆ ನಮ್ಮಲ್ಲಿ ಉತ್ತಮ ಜಲಸಂಪನ್ಮೂಲಗಳಿವೆ. ಭಾರತದಲ್ಲಿ 25ಕ್ಕೂ ಹೆಚ್ಚು ಜಾತಿಯ ಸಿಹಿನೀರು ಸೀಗಡಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮ್ಯಾಕ್ರೊಬ್ರೇಕಿಯಂ ರೋಸೆನ್ ಬರ್ಗಿ ಹಾಗೂ  ಮ್ಯಾಕ್ರೊಬ್ರೇಕಿಯಂ ಮಾಲ್ಕಂಸೋನಿ ಎಂಬ ಎರಡು ಪ್ರಭೇದಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯಲಾಗುತ್ತಿದೆ. ಈ ಜಾತಿಗಳ ಒಂದು ಸೀಗಡಿ ವರ್ಷಕ್ಕೆ 150 ರಿಂದ 250ಗ್ರಾಂವರೆಗೆ ಬೆಳೆಯಬಲ್ಲದು.ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಿಹಿ ನೀರು ಸೀಗಡಿ ಮರಿಗಳನ್ನು ಬೆಳೆಸುವ ಪ್ರಕ್ರಿಯೆ ನಡೆಯುತ್ತಿದೆ. ಸಣ್ಣ ಪ್ರಮಾಣದಲ್ಲಿ ಮರಿಗಳ ಶುಶ್ರೂಷೆ ಮಾಡಿ ಮಾರಾಟ ಮಾಡುತ್ತಿದೆ. ಜೊತೆಗೆ ರೈತರಿಗೆ ತರಬೇತಿ ನೀಡುತ್ತಿದೆ.ರೈತರು ಒಂದು ಎಕರೆಯ ಕೆರೆಯಲ್ಲಿ 8 ಸಾವಿರ ಮೀನು ಸಾಕಣೆ ಮಾಡುವುದರ ಜೊತೆಗೆ 20,000 ಸೀಗಡಿ ಪಾಲನೆ ಮಾಡಬಹುದು. 8 ತಿಂಗಳಲ್ಲಿ ಸುಮಾರು 250 ಕೆ.ಜಿ. ಸೀಗಡಿ ಇಳುವರಿ ಸಿಗುತ್ತದೆ. ಇದರಿಂದ ರೈತರಿಗೆ ಖರ್ಚು ಕಳೆದು ನಿವ್ವಳ 50ರಿಂದ 60 ಸಾವಿರ ರೂವರೆಗೆ ಲಾಭ ಸಿಗುತ್ತದೆ. ಈ ಭಾಗದ ಅನೇಕ ರೈತರು ಸಿಹಿನೀರು ಸೀಗಡಿ ಪಾಲನೆಯಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಕೇಂದ್ರದ ನಿರ್ದೇಶಕ ಪ್ರೊ.ಮಂಜಪ್ಪ.ಅತಿ ಸಣ್ಣ ಸೀಗಡಿ ಮರಿಗಳನ್ನು ನೇರವಾಗಿ ಉತ್ಪಾದನಾ ಕೆರೆಗೆ ಬಿಡುವುದರಿಂದ ಅವು ಬದುಕಿ ಉಳಿಯುವ ಸಂಭವ ಕಡಿಮೆ. ಆದ್ದರಿಂದ ಸಿಹಿನೀರು ಸೀಗಡಿ ಪಾಲನೆ ಮಾಡಲು ಬಯಸುವವರು ಪೋಸ್ಟ್ ಲಾರ್ವ ಮರಿಗಳನ್ನು 6ರಿಂದ 8 ವಾರಗಳ ಕಾಲ ವಿವಿಧ ಮಾದರಿಯಲ್ಲಿ ಶುಶ್ರೂಷೆ ಮಾಡುವುದು ಅವಶ್ಯಕ.ಶುಶ್ರೂಷೆ ಮಾದರಿಗಳು: ನೈಲಾನ್ ಹಾಪಾ: ನೈಲಾನ್ ಹಾಪಾಗಳು ಹೆಚ್ಚು ದುಬಾರಿಯಲ್ಲ. ಆದರೆ ಅವು ಪರಿಣಾಮಕಾರಿ. ಮೀನು ಸಾಕಣೆದಾರರು ಸೀಗಡಿ ಮರಿಗಳ ಶುಶ್ರೂಷೆಗೆ ಇವನ್ನು ಬಳಸಿಕೊಳ್ಳಬಹುದು. ಹಾಪಾಗಳು ಅತಿ ಸಣ್ಣ ಕಣ್ಣಿನ ಸೊಳ್ಳೆ ಪರದೆ ರೀತಿಯಲ್ಲಿ ಇರುತ್ತವೆ. ಇವು ಹೆಚ್ಚು ದೊಡ್ಡದಿದ್ದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೀಗಡಿ ಮರಿಗಳ ಶುಶ್ರೂಷೆ ಮಾಡಬಹುದು.ಹಾಪಾಗಳನ್ನು ಕೆರೆಯ 4 ಅಥವಾ 5 ಅಡಿ ಆಳದ ನೀರಿನಲ್ಲಿ ಕೋಲು ಅಥವಾ ಕಬ್ಬಿಣದ ಸರಳುಗಳನ್ನು  ಹುಗಿದು ಹಗ್ಗದ ಸಹಾಯದಿಂದ ಹಾಪಾದ ಮೇಲ್ಭಾಗ ಹಾಗೂ ತಳಭಾಗದ ನಾಲ್ಕು ಮೂಲೆಗಳನ್ನು ಭದ್ರವಾಗಿ ಕಟ್ಟಬೇಕು. ಹಾಪಾಗಳು ನೆಲದ ಮಣ್ಣಿಗೆ ತಾಗದಂತೆ ನೀರಿನಲ್ಲಿ ತೇಲುತ್ತಿರಬೇಕು. ಈ ರೀತಿ ಮಾಡಿದರೆ ನಿರ್ವಹಣೆ ಸುಲಭವಾಗುತ್ತದೆ.ಮರಿಗಳ ಬಿತ್ತನೆ: ತೊಟ್ಟಿಗಳು ಆದಷ್ಟು ಚಿಕ್ಕದಾಗಿದ್ದು ಶುಶ್ರೂಷೆ ಅವಧಿಯಲ್ಲಿ ಸುಲಭವಾಗಿ ಕಾರ್ಯ ನಿರ್ವಹಿಸುವಂತಿರಬೇಕು. ತೊಟ್ಟಿಗಳ ಅಳತೆ 10ರಿಂದ 20 ಘನ ಮೀಟರ್‌ಗಳಷ್ಟಿದ್ದು, ಅವುಗಳ ಆಳ ಒಂದು ಮೀಟರ್‌ವರೆಗೆ ಇದ್ದರೆ ಸಾಕು. ಸೀಗಡಿ ಮರಿಗಳ ನೈಸರ್ಗಿಕ ಆಹಾರದ ಉತ್ಪಾದನೆಗೆ ಸಗಣಿ ಗೊಬ್ಬರ, ಯೂರಿಯ ಹಾಗೂ ಸೂಪರ್ ಫಾಸ್ಪೇಟ್ ಗೊಬ್ಬರಗಳನ್ನು ಚದರ ಮೀಟರ್‌ಗೆ ಅನುಕ್ರಮವಾಗಿ 200 ಗ್ರಾಂ, 3ಗ್ರಾಂ ಹಾಗೂ 5 ಗ್ರಾಂನಂತೆ ಕ್ರಮವಾಗಿ ಹಾಕಬೇಕು. ತೊಟ್ಟಿಗಳಿಗೆ ನೀರನ್ನು ಪೂರ್ತಿ ತುಂಬಿಸಿ 6ರಿಂದ 7 ದಿನಗಳ ಕಾಲ ಬಿಡಬೇಕು.ಈ ವೇಳೆಗೆ ತೊಟ್ಟಿಯಲ್ಲಿರುವ ನೀರು ಫಲವತ್ತಾಗಿ ಸೀಗಡಿಯ ಪೋಸ್ಟ್ ಲಾರ್ವಾ ಮರಿಗಳಿಗೆ ನೈಸರ್ಗಿಕ ಆಹಾರವನ್ನು ಒದಗಿಸುವ ಕಾರ್ಯ ಆರಂಭವಾಗಿರುತ್ತದೆ. ಈ ಹಂತದಲ್ಲಿ  ಪೋಸ್ಟ್ ಲಾರ್ವಾ ಮರಿಗಳನ್ನು ಹತ್ತರಿಂದ ಹದಿನೈದು ನಿಮಿಷಗಳ ಕಾಲ ತೊಟ್ಟಿಯ ನೀರಿನಲ್ಲಿ ಪ್ಲಾಸ್ಟಿಕ್ ಚೀಲದೊಂದಿಗೆ ತೇಲಿ ಬಿಡಬೇಕು. ನಂತರ ಪ್ಲಾಸ್ಟಿಕ್ ಚೀಲದ ಬಾಯಿಯನ್ನು ಬಿಚ್ಚಿ ನಿಧಾನವಾಗಿ ಮರಿಗಳನ್ನು ಬಿತ್ತನೆ ಮಾಡಬೇಕು.

ಶ್ರುಶೂಷೆ ಮಾದರಿಗಳಲ್ಲಿ ಸುಮಾರು 0.2 ರಿಂದ 0.3 ಗ್ರಾಂ ವರೆಗೂ ಬೆಳೆದ ಸೀಗಡಿ ಮರಿಗಳು ಕೆರೆಗಳಲ್ಲಿ ಬಿತ್ತಲು (ಬಿಡಲು) ಯೋಗ್ಯವಾಗಿರುತ್ತವೆ. ಪೂರಕ ಆಹಾರ: ಹಾಪಾಗಳಲ್ಲಿ ಬಿತ್ತಿ ಪೋಷಿಸಲಾಗುವ ಪೋಸ್ಟ್ ಲಾರ್ವ ಸೀಗಡಿ ಮರಿಗಳಿಗೆ ನಿತ್ಯ 3ರಿಂದ 4 ಬಾರಿ ಅವುಗಳ ದೇಹದ ಶೇ10 ರಷ್ಟು ಪೂರಕ ಆಹಾರ ನೀಡಬೇಕು. ಶೇಂಗಾ ಹಿಂಡಿ, ಅಕ್ಕಿ ತೌಡು, ಮೀನಿನ ಹುಡಿ ಹಾಗೂ ಲವಣಾಂಶಗಳನ್ನು ಬೆರೆಸಿ ತಯಾರಿಸಿದ ಆಹಾರವನ್ನು ಮರಿಗಳಿಗೆ ಒದಗಿಸುವುದರಿಂದ ಉತ್ತಮ ಬೆಳವಣಿಗೆ ಸಹಕಾರಿ.ಶುಶ್ರೂಷೆಯ ಅವಧಿಯಲ್ಲಿ ಸೀಗಡಿ ಮರಿಗಳು ಪೊರೆ ಕಳಚುವ ಪ್ರವೃತ್ತಿ ನೈಸರ್ಗಿಕವಾಗಿ ಕಂಡುಬರುತ್ತದೆ.  ಈ ಹಂತದಲ್ಲಿ ಸ್ವಭಕ್ಷಕತನಕ್ಕೆ ಒಳಗಾಗಿರುತ್ತವೆ. ಆದ ಕಾರಣ ಹಾಪಾಗಳಲ್ಲಿ ಕೃತಕ ಗೂಡುಗಳಾದ ಸಣ್ಣಪುಟ್ಟ ಪ್ಲಾಸ್ಟಿಕ್ ಪೈಪ್‌ಗಳ ಗುಣುಕುಗಳನ್ನು ಒದಗಿಸುವುದು ಸೂಕ್ತ. ಸೀಗಡಿ ಮರಿಗಳು ಪೊರೆ ಕಳಚಿದ ನಂತರ ಪೈಪುಗಳಲ್ಲಿ ಆಶ್ರಯ ಪಡೆದು ಸಂರಕ್ಷಿಸಿಕೊಳ್ಳುತ್ತವೆ. ಹಾಪಾಗಳು ಸತತ ನೀರಿನ ಸಂಪರ್ಕದಲ್ಲಿರುವುದರಿಂದ ಹಾಗೂ ಪೂರಕ ಆಹಾರ ಹಾಕುವುದರಿಂದ ಅವುಗಳು ಪಾಚಿ ಕಟ್ಟುವ ಸಂಭವವಿರುತ್ತದೆ. ಹಾಗಾಗಿ ಮೂರು-ನಾಲ್ಕು ದಿನಕ್ಕೊಮ್ಮೆ ಹಾಪಾಗಳನ್ನು ಶುಚಿಗೊಳಿಸುತ್ತಿರಬೇಕು. ರೈತರು ಸಿಹಿ ನೀರು ಸೀಗಡಿ ಮರಿಗಳ ಶುಶ್ರೂಷೆ ಹಾಗೂ ಪಾಲನೆ ಕುರಿತು ಹೆಚ್ಚಿನ ಮಾಹಿತಿಗೆ ಡಾ. ಕೆ.ಮಂಜಪ್ಪ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್- 99648 18922.         

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.