ಬುಧವಾರ, ಜೂನ್ 23, 2021
22 °C
ಡೀಮ್ಡ್‌ ವಿಶ್ವವಿದ್ಯಾಲಯಗಳ ಹಗರಣ

ಸೀಟು ಕಬಳಿಸಿದ ಆಡಳಿತ ಮಂಡಳಿ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 9 ಡೀಮ್ಡ್ ವೈದ್ಯ­ಕೀಯ ವಿಶ್ವವಿದ್ಯಾಲಯಗಳು ಒಟ್ಟು 1042 ಸೀಟುಗಳನ್ನು ಸರ್ಕಾರಕ್ಕೆ ನೀಡದೇ ಇರುವ ಪ್ರಕರಣ ಬೆಳಕಿಗೆ ಬಂದಿದೆ.ಕಾಲೇಜು ಆರಂಭಿಸಲು ನಿರಾ­ಕ್ಷೇಪಣಾ ಪತ್ರ ನೀಡುವಾಗ ಶೇ 25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾಗೆ ಮೀಸ­ಲಿಡಬೇಕು ಎಂಬ ಷರತ್ತು ವಿಧಿಸ­ಲಾಗಿದೆ.ಸರ್ಕಾರದೊಂದಿಗೆ ಒಪ್ಪಂದ ಮಾಡಿ­ಕೊಳ್ಳು­ವಾಗಲೂ ಇದನ್ನು ಸ್ಪಷ್ಟ­ವಾಗಿ ಹೇಳಲಾಗಿದೆ. 2010ರ ಜೂನ್‌ 26ರಂದು ಆದೇಶ ಹೊರಡಿಸಲಾಗಿದೆ.   ಇಷ್ಟಾದರೂ ಈ ಡೀಮ್ಡ್   ವಿಶ್ವ­ವಿದ್ಯಾಲಯಗಳು ಆದೇಶವನ್ನು ಪಾಲಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.ಸರ್ಕಾರಿ ಕೋಟಾದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗ­ಬೇಕಾದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಕೋಟಿಗಟ್ಟಲೆ ರೂಪಾ­ಯಿಗೆ ಮಾರಾಟ ಮಾಡಿರು­ವುದು ಹಲವು ವರ್ಷಗಳಿಂದ ನಡೆದು ಬಂದಿದೆ ಎಂದು ಅವರು ವಿವರಿಸಿದರು.ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಅಲ್ಪಸಂಖ್ಯಾತರಿಗೆ ಸೀಟುಗಳನ್ನು ನೀಡದೆ ಇರುವ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ, ಡೀಮ್ಡ್‌ ವಿಶ್ವವಿದ್ಯಾಲಯಗಳ ಈ ಅಕ್ರಮ  ಬಯಲಾಗಿದೆ.ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಅಕಾಡೆಮಿ, ಯನಪೋಯ, ಜೆಎಸ್ಎಸ್, ಕಸ್ತೂರ­ಬಾ, ನಿಟ್ಟೆ ವಿಶ್ವವಿದ್ಯಾಲಯ ಶೇ 25ರ ಬದಲು ಶೇ 3ರಿಂದ 4ರಷ್ಟು ಸೀಟು­ಗಳನ್ನು ಮಾತ್ರ ನೀಡಿವೆ. ಬಿಎಲ್‌ಡಿಇ, ಜೆಎಸ್‌ಎಸ್‌ ವೈದ್ಯ­ಕೀಯ ಕಾಲೇಜು, ದೇವರಾಜ ಅರಸು ವಿಶ್ವವಿದ್ಯಾಲಯ, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಒಂದು ಸೀಟನ್ನೂ ನೀಡಿಲ್ಲ. ಸರ್ಕಾರಕ್ಕೆ ನೀಡಬೇಕಾದ ಎಲ್ಲ ಸೀಟು­ಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ಶೇ 3ರಿಂದ 4ರಷ್ಟು ಸೀಟುಗಳನ್ನು ನೀಡಿರುವ ಕಾಲೇಜುಗಳು ಸಹ ಸರ್ಕಾರಿ ಕೋಟಾ ಸೀಟಿಗೆ, ಸರ್ಕಾರ ನಿಗದಿಪಡಿಸಿ­ರುವುದಕ್ಕಿಂತ ಹೆಚ್ಚಿನ ಶುಲ್ಕ ಪಡೆದಿವೆ. ಅಲ್ಲದೆ ಬೇಡಿಕೆ ಇಲ್ಲದ ಸೀಟುಗಳನ್ನು ನೀಡಲಾಗಿದೆ ಎಂದು ಅವು ಹೇಳಿವೆ.ನೋಟಿಸ್‌ಗೆ ಕಿಮ್ಮತ್ತಿಲ್ಲ: ಸೀಟು ಬಿಟ್ಟು­ಕೊಡದ ವಿಶ್ವವಿದ್ಯಾಲಯಗಳಿಗೆ ಜನವರಿ, ಫೆಬ್ರುವರಿ ತಿಂಗಳಲ್ಲಿ ಸರ್ಕಾರ ನೋಟಿಸ್‌ ನೀಡಿತ್ತು. 2014–15ನೇ ಸಾಲಿನಿಂದ ಶೇ 25ರಷ್ಟು ಸೀಟುಗಳನ್ನು ನೀಡಬೇಕು. ಹಿಂದಿನ ವರ್ಷಗಳಲ್ಲಿ ನೀಡದೆ ಇರುವ ಹಿಂಬಾಕಿ ಸೀಟುಗಳನ್ನೂ ಬಿಟ್ಟುಕೊಡ­ಬೇಕು. ಇಲ್ಲದಿದ್ದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.ಇದಕ್ಕೆ ಉತ್ತರ ಬಾರದ ಕಾರಣ ವೈದ್ಯ­ಕೀಯ ಶಿಕ್ಷಣ ಸಚಿವ ಡಾ.ಶರಣ­ಪ್ರಕಾಶ ಪಾಟೀಲ ಅವರು ಡೀಮ್ಡ್‌ ವಿಶ್ವವಿದ್ಯಾ­ಲಯಗಳ ರಿಜಿಸ್ಟ್ರಾರ್‌ಗಳ ಸಭೆ ಕರೆ­ದಿದ್ದರು. ಸರ್ಕಾರದ ಆದೇಶವನ್ನು ಕಡ್ಡಾ­ಯವಾಗಿ ಪಾಲಿಸಬೇಕು ಎಂದು ಸೂಚಿಸಿ­ದ್ದರು. ಆದರೆ, ಸ್ಪಷ್ಟ ಉತ್ತರ ನೀಡದ ರಿಜಿಸ್ಟ್ರಾರ್‌ಗಳು, ಈ ವಿಷಯ­ವನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವು­ದಾಗಿ ತಿಳಿಸಿದರು ಎಂದು ಗೊತ್ತಾಗಿದೆ.ಎಡವಿದ ಇಲಾಖೆ: ಸೀಟು ಹಂಚಿಕೆ ಪಟ್ಟಿ­ಯನ್ನು ಪ್ರತಿ ವರ್ಷ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಿದ್ಧಪಡಿ­ಸುತ್ತದೆ. ಡೀಮ್ಡ್‌ ವಿ.ವಿಗಳು ಶೇ 25ರಷ್ಟು ಸೀಟು­ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವಂತೆ ನೋಡಿಕೊಳ್ಳ­ಬೇಕಾದ ಜವಾಬ್ದಾರಿ ಇಲಾಖೆಯ ಮೇಲಿದೆ.ಆದರೆ, ಇಲಾಖೆ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಒಪ್ಪಂದದ ಪ್ರಕಾರ ಡೀಮ್ಡ್‌ ವಿಶ್ವವಿದ್ಯಾಲಯಗಳು ಸೀಟುಗಳನ್ನು ನೀಡಿರುವ ಬಗ್ಗೆ ಪರಿ­ಶೀಲಿಸಿಲ್ಲ ಎಂದು ಅಧಿಕಾರಿ ಹೇಳಿದರು.ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯ­ದರ್ಶಿ ವಿ.ರಶ್ಮಿ ಅವರು ಈಚೆಗೆ ಅಕ್ರಮ­ಗಳನ್ನು ಪತ್ತೆಹಚ್ಚಿ ಡೀಮ್ಡ್ ವಿ.ವಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ­ದ್ದರು. ಇದಾದ ನಂತರ ವಿ.ವಿ.ಗಳ ಕಡೆ­ಯಿಂದ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.