ಶುಕ್ರವಾರ, ಏಪ್ರಿಲ್ 23, 2021
22 °C

ಸೀತಾಸುತ ಕೃತಿಗಳ ವಿಮರ್ಶೆ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕನ್ನಡ ಸಾರಸ್ವತ ಲೋಕದ ಧ್ರುವತಾರೆಯಾಗಿ ಮೆರೆದ ಸಾಹಿತಿ ದಿ. ಸೀತಾಸುತ ಅವರ ಕೃತಿಗಳ ಬಗೆಗೆ ಗಂಭೀರ ವಿಮರ್ಶೆ ಆಗಬೇಕಿದೆ ಎಂದು ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು.ನಗರದ ಗಾಂಧಿ ಭವನದಲ್ಲಿ ಭಾನುವಾರ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಾಹಿತಿ ಸೀತಾಸುತ ಅವರ 114ನೇ ಸಂಸ್ಮರಣೆ ಹಾಗೂ ಸೀತಾಸುತ ಮತ್ತು ಡಾ. ವಿ.ಟಿ.ಸುಶೀಲಾ ಜಯರಾಮ್ ಹೆಸರಿನಲ್ಲಿ ನೀಡುವ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಚಿಂತನಾಶೀಲರೂ, ಸಾಹಿತ್ಯ ಉಪಾಸಕರೂ ಆಗಿದ್ದ ಸೀತಾಸುತ ಅವರು, ಸಾಹಿತ್ಯ ಕ್ಷೇತ್ರದಲ್ಲಿ ನೆನಪಿನಲ್ಲಿ ಉಳಿಯುವಂತಹ ಸುಮಾರು 56 ಕೃತಿಗಳನ್ನು ರಚಿಸಿದ್ದಾರೆ. ಆದರೆ, ಈವರೆವಿಗೂ ಈ ಕೃತಿಗಳ ಚರ್ಚೆಯೇ ನಡೆದಿಲ್ಲ. ವಿಚಾರ ಸಂಕಿರಣದ ಮೂಲಕ ಈ ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದರು.ಯುವಜನರಲ್ಲಿ ಸದ್ಬಾವನೆ ಬಿತ್ತುವ, ವ್ಯಕ್ತಿತ್ವ ರೂಪಿಸುವ ರೀತಿಯಲ್ಲಿರುವ ಸೀತಾಸುತ ಅವರ ಸಾಹಿತ್ಯವನ್ನು ರಾಷ್ಟ್ರಕವಿ ಕುವೆಂಪು ಅವರೇ ಮೆಚ್ಚಿದ್ದರು ಎಂಬುದು ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.ಈ ನೆಲ, ಜಲ, ಭಾಷೆಯ ಸಂರಕ್ಷಣೆ ಮತ್ತು ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಯುವಜನರು ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ. ಯುವಜನರಿಗೆ ಸೀತಾಸುತರ ಕೃತಿಗಳು ಮಾರ್ಗದರ್ಶಕ ನಂತೆ ಇವೆ ಎಂದು ಬಣ್ಣಿಸಿದರು.ವೀರಯೋಧ ಅಭಿಜಿತ್ ಭಂಡಾರಕರ್ (ಮರಣೋತ್ತರ) ಅವರ ಪರವಾಗಿ ಪತ್ನಿ ಶಕುಂತಳ ಭಂಡಾರಕರ್ ಅವರಿಗೆ `ಸೀತಾಸುತ ದೇಶಸೇವಾ ಪ್ರಶಸ್ತಿ~, ಸಾಹಿತಿ ನಾಗತಿಹಳ್ಳಿ ಚಂದ್ರ ಶೇಖರ್ ಅವರಿಗೆ `ಸೀತಾಸುತ ಸಾಹಿತ್ಯ ಸೇವಾ ಪ್ರಶಸ್ತಿ~ ಹಾಗೂ ಡಾ. ಬಿ.ಕೆ. ಸತ್ಯವತಿ ಅವರಿಗೆ ದಿ. ಡಾ .ವಿ.ಟಿ. ಸುಶೀಲಾ ಜಯರಾಮ್ `ವೈದ್ಯಕೀಯ ಸೇವಾ ಪ್ರಶಸ್ತಿ~ ಮತ್ತು ವಿದ್ಯಾರ್ಥಿನಿ ಎಂ.ಪುಷ್ಪಾಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿಫಲಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿನಿಯರಾದ ಸಮೀಕ್ಷಾ ಮನುಕುಮಾರ್, ಸ್ವಾತಿ ಕಾಂತರಾಜ್ ಹಾಗೂ ಅನುಷಾ ಸತೀಶ್ ಅವರು ಪ್ರಸ್ತುತ ಪಡಿಸಿದ ನೃತ್ಯಗಳು ಗಮನ ಸೆಳೆದವು.ಟ್ರಸ್ಟ್‌ನ ಕೆ.ಎಸ್.ದೊರೆಸ್ವಾಮಿ, ಕೆ.ಎಸ್.ಜಯರಾಮ್, ಡಾ. ಕೆ.ಜೆ. ದಿನೇಶ್, ಡಾ. ಡಿ.ಉಷಾರಾಣಿ ಮತ್ತಿ ತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.