ಮಂಗಳವಾರ, ಜನವರಿ 31, 2023
19 °C

ಸುಂದರ ಮಂದಾರ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಸುಂದರ ಮಂದಾರ

‘ಸರ್ವ ಜನಾಂಗದ ಶಾಂತಿಯ ತೋಟ/ ರಸಿಕರ ಕಂಗಳ ಸೆಳೆಯುವ ನೋಟ’ ಎನ್ನುವ ಕುವೆಂಪು ಕವಿತೆಯನ್ನು ದೃಶ್ಯರೂಪದಲ್ಲಿ ತೋರಿಸಲು ಪ್ರಯತ್ನಿಸಿರುವ ‘ಒಲವೇ ಮಂದಾರ’, ಈಚಿನ ದಿನಗಳಲ್ಲಿ ತೆರೆಕಂಡ ಚಿತ್ರಗಳಲ್ಲೇ ಸುಂದರವಾದುದು. ಈ ಸಿನಿಮಾದ ಮೂಲಕ ಭರವಸೆ ಇರಿಸಿಕೊಳ್ಳಬಹುದಾದ ನಾಯಕ- ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ದೊರೆತಿದ್ದಾರೆ.‘ಒಲವೇ ಮಂದಾರ’ ಚಿತ್ರದ ನಿರ್ದೇಶಕ ಜಯತೀರ್ಥ ಬೀದಿನಾಟಕಗಳ ಹಿನ್ನೆಲೆಯುಳ್ಳವರು. ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಪ್ರೀತಿಯುಳ್ಳವರು. ಆ ಕಾರಣದಿಂದಾಗಿಯೇ ‘ಒಲವೇ ಮಂದಾರ’ ಚಿತ್ರಕ್ಕೆ ತೆಳುವಾದ ಸಾಹಿತ್ಯಿಕ-ಸಾಂಸ್ಕೃತಿಕ ಚೌಕಟ್ಟು ದೊರಕಿದೆ. ಪ್ರೇಮಕಥನದ ನೆಪದಲ್ಲಿ ಭಾರತದ ವೈವಿಧ್ಯವನ್ನು ಕಾಣಿಸುವ ನಿರ್ದೇಶಕರ ಪ್ರಯತ್ನ ಪರಿಣಾಮಕಾರಿಯಾಗಿದೆ.ಜಯತೀರ್ಥ ತಮ್ಮ ಚೊಚ್ಚಿಲ ಚಿತ್ರಕ್ಕಾಗಿ ಮೋಹಕ ಕಥಾನಕವೊಂದನ್ನು ಕಟ್ಟಿಕೊಂಡಿದ್ದಾರೆ. ನೃತ್ಯಸ್ಪರ್ಧೆಯೊಂದರಲ್ಲಿ ಅಸ್ಸಾಂನ ಹುಡುಗಿ ಹಾಗೂ ಕನ್ನಡದ ಹುಡುಗನ ಭೇಟಿಯಾಗುತ್ತದೆ. ತೊದಲು ನೋಟ-ಮಾತುಗಳಲ್ಲಿ ಪ್ರೇಮ ಕೊನರುತ್ತದೆ. ಹುಡುಗಿಗೆ ಪ್ರೇಮವೆನ್ನುವುದು ಮಂದಾರ, ಹುಡುಗನಿಗೆ ಸಸಾರ. ಇಂಥ ಹುಡುಗ, ಒಮ್ಮಿಂದೊಮ್ಮೆಗೇ ತನ್ನ ಪ್ರೇಮವನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕದಿಂದ ಅಸ್ಸಾಂನತ್ತ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸುತ್ತಾನೆ. ತಿರುಗಾಟದ ಹೊತ್ತು ಸಿದ್ದಾರ್ಥನಿಗೆ ಜ್ಞಾನೋದಯವಾದಂತೆ ಈ ರಾಜಕುಮಾರನಿಗೆ ಪ್ರೇಮೋದಯವಾಗುತ್ತದೆ.

 

ಕರ್ಮಸಿದ್ಧಾಂತದ ರೈತ, ಮಾನವೀಯತೆಯುಳ್ಳ ಕಳ್ಳ, ಶೀಲ-ಅಶ್ಲೀಲದ ವ್ಯಾಖ್ಯೆಗೆ ಸಿಗದ ಹೆಣ್ಣು, ಹೆಂಡತಿಯ ಸಾವಿಗೆ ನೆಪವಾದ ಬೆಟ್ಟವನ್ನು ಇಪ್ಪತ್ತೆರಡು ವರ್ಷಗಳ ಕಾಲ ಕುಟ್ಟಿ ದಾರಿ ಮಾಡುವ ದಶರಥ ಮಾಂಜಿ ಎನ್ನುವ ಅಮರ ಪ್ರೇಮಿ, ಕಾಲಿಲ್ಲದ ಪತ್ನಿಯೊಂದಿಗೆ ಗಾಡಿಯನ್ನು ಎಳೆದುಕೊಂಡು ಕಾಶಿಯತ್ತ ಸಾಗುವ ಜೀವಂತ ಪ್ರೇಮಿ, ಏಕಾಂತ ಲೋಕಾಂತದ ನಡುವಣ ಸಾಧು- ಇವರೆಲ್ಲರೂ ನಾಯಕನಿಗೆ ಹೊಸ ಲೋಕ ಕಾಣಿಸುತ್ತಾರೆ.ಹಾಗೆ ನೋಡಿದರೆ, ಜಯತೀರ್ಥ ಅವರ ಕಾಲ್ನಡಿಗೆಯ ಪ್ರೇಮಪುರಾಣ ತೆಳುವೂ, ಭಾವುಕವೂ ಆದುದು. ಆದರೆ ತಮ್ಮ ಕಥನ ದಾರಿಮಧ್ಯದಲ್ಲಿ ಕುಸಿಯದಿರಲೆಂದು ಅವರು ಸೃಷ್ಟಿಸಿಕೊಂಡಿರುವ ಉಪಕಥನಗಳು ಆಕರ್ಷಕವಾಗಿವೆ. ಪ್ರೇಮಕಥೆಯೊಂದು ಮಾನವೀಯತೆಯ ಆಯಾಮ ಪಡೆದುಕೊಳ್ಳುವ ಮೂಲಕ ಸಿನಿಮಾ ಖುಷಿಕೊಡುತ್ತದೆ.ಹೊಸಹುಡುಗ ಶ್ರೀಕಾಂತ್ ಹುಮ್ಮಸ್ಸಿನಿಂದ ನಟಿಸಿದ್ದಾರೆ. ಕುಣಿತ, ಹೊಡೆದಾಟ ಮಾತ್ರವಲ್ಲದೆ ಭಾವನೆಗಳ ಅಭಿವ್ಯಕ್ತಿಯಲ್ಲೂ ಗಮನಸೆಳೆಯುತ್ತಾರೆ. ಆಮದು ನಟಿ ಆಕಾಂಕ್ಷಾ ಗ್ರಾಮೀಣ ಕಲಾವಿದೆಯ ಪಾತ್ರಕ್ಕೆ ಜೀವತುಂಬಿದ್ದಾರೆ. ರಂಗಾಯಣ ರಘು- ವೀಣಾ ಸುಂದರ್ ಜೋಡಿ ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳಿಂದ ಎದ್ದುಬಂದಂತಿರುವ ರತ್ನ-ನಂಜಿಯರಂತಿದ್ದಾರೆ. ಅದರಲ್ಲೂ ರಂಗಾಯಣ ರಘು ಪ್ರಚಂಡ ಅಭಿನಯ, ಅವರ ಅವಕಾಶಬಾಕತನದ ಕೆಟ್ಟ ಚಿತ್ರಗಳ ಕೊಳಕು ನಟನೆಯನ್ನು ಮರೆಸುವಷ್ಟು ಪ್ರಭಾವಶಾಲಿಯಾಗಿದೆ. ಪುಟ್ಟ ಪಾತ್ರಗಳಾದರೂ ಸಾಧು ಕೋಕಿಲ, ಶರಣ್ ನೆನಪಿನಲ್ಲುಳಿಯುತ್ತಾರೆ.ತೆರೆಮರೆಯ ಹಿಂದೆ ನಿರ್ದೇಶಕರ ನಂತರದ ಸ್ಥಾನ ಛಾಯಾಗ್ರಾಹಕ ರವಿಕುಮಾರ್ ಸಾನಾ ಅವರಿಗೆ. ಇಡೀ ಚಿತ್ರವನ್ನು ಕಲಾಕೃತಿಯಂತೆ ಚಿತ್ರಿಸಿರುವ ಅವರ ಜಾದೂವಿನಲ್ಲಿ ದೀರ್ಘ ಪಯಣ ಆಯಾಸ ಎನಿಸುವುದಿಲ್ಲ. ದೇವಾ ಅವರ ಸಂಗೀತದ ಮಾಧುರ್ಯ ಹಾದಿಬದಿಯ ಹಕ್ಕಿಗಿಲಕಿಯಂತಿದೆ. ಕಲ್ಯಾಣ್, ಜಯತೀರ್ಥರ ಸಾಹಿತ್ಯರಚನೆಯಲ್ಲಿ ಗುನುಗುವಂಥ ಸಾಲುಗಳಿವೆ.ಜಾಗತೀಕರಣ (ನಾಯಕ) ಹಾಗೂ ದೇಸಿ ಸಂಸ್ಕೃತಿ (ನಾಯಕಿ) ನಡುವಣ ಮುಖಾಮುಖಿಯಾಗಿಯೂ ‘ಒಲವೇ ಮಂದಾರ’ ಗಮನಸೆಳೆಯುತ್ತದೆ. ಸಿನಿಮಾದಲ್ಲಿ ಕೊರತೆಗಳೂ ಇವೆ. ಸಂಭಾಷಣೆ ಕೆಲವೊಮ್ಮೆ ನಾಟಕೀಯ. ಚಿತ್ರದ ಮೊದಲ ಅರ್ಧ ಗಂಟೆ ಪ್ರೇಕ್ಷಕರ ಸಹನೆಯ ಪರೀಕ್ಷೆ ನಡೆಯುತ್ತದೆ. ಭಾವುಕವಾಗಿ ಕಾಡುವ ಕಥನದ ತಾತ್ವಿಕ ಚೌಕಟ್ಟು ಇನ್ನಷ್ಟು ಗಾಢವಾಗಿ ಇದ್ದಿದ್ದರೆ... ಎಂದೂ ಅನ್ನಿಸುತ್ತದೆ. ಇದೆಲ್ಲದರ ನಡುವೆಯೂ, ಯಾವ ರಿಯಾಯಿತಿಯನ್ನೂ ಬಯಸದ ಹೊಸ ತಂಡವೊಂದರ ಪ್ರಾಮಾಣಿಕ ಅಭಿವ್ಯಕ್ತಿಯಾಗಿ ‘ಒಲವೇ ಮಂದಾರ’ ಮುಖ್ಯವೆನ್ನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.