ಸೋಮವಾರ, ಜನವರಿ 20, 2020
20 °C

ಸುಗಮ ಸಂಚಾರ ಇನ್ನಷ್ಟು ನಿಧಾನ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಪೊಲೀಸ್‌ ಇಲಾಖೆಯ ಭರವಸೆ, ಸಾರ್ವಜನಿಕರ ಬೇಡಿಕೆ ಯಥಾಸ್ಥಿತಿ ಉಳಿದಿದ್ದು, ನಗರ­ದಲ್ಲಿ ವಾಹನಗಳ ಸಂಚಾರ ಮತ್ತು ದಟ್ಟಣೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನಗರಸಭೆಯಲ್ಲದೇ ಇತರ ಸಂಘಸಂಸ್ಥೆ­ಗಳ ಸಹಕಾರವೂ ಅಗತ್ಯವೆಂದು ಪೊಲೀಸ್‌ ಇಲಾಖೆ ಹೇಳಿದರೆ, ಅವ್ಯವಸ್ಥೆ ಸರಿಪಡಿಸುವ ಜವಾಬ್ದಾರಿ ತಮ್ಮದಷ್ಟೇ ಅಲ್ಲ ಎಲ್ಲರದ್ದೂ ಇದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.‘ಪೊಲೀಸ್‌ ಇಲಾಖೆ ಮತ್ತು ನಗರಸಭೆಯ ಹಗ್ಗಜಗ್ಗಾಟದಲ್ಲಿ ವಾಹನ­ಗಳ ಸಂಚಾರ ಅವ್ಯವಸ್ಥೆ­ಯಾ­ಗಿಯೇ ಉಳಿದುಕೊಂಡಿದ್ದು, ನಾವು ಬಯಸುವ ವ್ಯವಸ್ಥೆ ಬದಲಾವಣೆ ಭರವಸೆಯಾಗಿಯೇ ಉಳಿದಿದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ನಗರದ ಎಂ.ಜಿ.ರಸ್ತೆ, ಬಿ.ಬಿ ರಸ್ತೆ­ಯಲ್ಲಿ ವಾಹನಗಳ ನಿಲುಗಡೆ, ಪಾದ­ಚಾರಿ ಮಾರ್ಗದ ಒತ್ತುವರಿ ತೆರವು­ಗೊಳಿಸುವಿಕೆ, ದೂಳು ಮತ್ತು ಮಣ್ಣಿನ ನಿವಾರಣೆ ಸೇರಿದಂತೆ ಹಲವಾರು ಬೇಡಿಕೆಗಳು ಭರವಸೆಯಾಗಿಯೇ ಉಳಿದುಕೊಂಡಿವೆ.ನಗರಸಭೆಗೆ ಹೊಸ ಆಯುಕ್ತರು ನಿಯೋಜನೆಗೊಂಡಾಗ ಅಥವಾ ಹೊಸದಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಧಿಕಾರ ವಹಿಸಿಕೊಂಡಾಗಲೆಲ್ಲ ನಗರ ಸಂಚಾರ ಕೈಗೊಳ್ಳುತ್ತಾರೆ. ನಗರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳ ಸರಮಾಲೆಯನ್ನು ಪಟ್ಟಿ ಮಾಡಿಕೊಳ್ಳುತ್ತಾರೆ. ಇನ್ನೇನೂ ಕೆಲವೇ ದಿನಗಳಲ್ಲಿ ಭಾರಿ ಬದಲಾವಣೆ ತರಲಾಗುವುದೆಂದು ಭರವಸೆ ಮೂಡುತ್ತಾರೆ. ಆದರೆ ಪರಿಸ್ಥಿತಿ ಮಾತ್ರ ಯಥಾಸ್ಥಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು.‘ಒಂದು ವರ್ಷದ ಹಿಂದೆ ಆಗಿನ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜತೆ ನಗರ ಸಂಚಾರ ಕೈಗೊಂಡಿದ್ದರು. ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ್ದ ಅವರು ಆಯಾ ವಾರ್ಡ್‌ ನಿವಾಸಿಗಳ ಜತೆ ಸಂವಾದ ನಡೆಸಿದ್ದರು.ಪ್ರತಿ 15 ದಿನಗಳಿಗೊಮ್ಮೆ ವಾರ್ಡ್‌ವೊಂದಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ ಅವರು ನಗರ ಸಂಚಾರವನ್ನು ಅವರು ಒಮ್ಮೆ ಮಾತ್ರ ಕೈಗೊಂಡಿದ್ದು ಹೊರತುಪಡಿಸಿದರೆ ಮತ್ತೆ ಅದರ ಬಗ್ಗೆ ಯೋಚನೆಯೇ ಮಾಡಲಿಲ್ಲ.ಸಮಸ್ಯೆಗಳ ಪರಿಹಾರಕ್ಕೆ ನಗರಸಭೆಗೆ ಸೂಚನೆ ನೀಡಲಾಗಿದೆಯೆಂದು ಹೇಳಿದರೆ ಹೊರತು ವಾರ್ಡ್‌ಗಳಲ್ಲಿ ಮೂಲಸೌಕರ್ಯ ಪೂರೈಸುವ ಅಥವಾ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಶಾಂತನಗರದ ನಿವಾಸಿ ನಾಗರಾಜ್‌ ಹೇಳುತ್ತಾರೆ.‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಿವಪ್ರಸಾದ್‌ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ದಿಢೀರ್‌ ನಗರ ಸಂಚಾರ ಕೈಗೊಂಡಿದ್ದರು. ನಗರದ ಹಳೆಯ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದ ಅವರು ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದರು.ಹಳೆಯ ಬಸ್‌ ನಿಲ್ದಾಣದಲ್ಲಿ ದ್ವಿಚಕ್ರವಾಹನಗಳ ನಿಲುಗಡೆ ನಿಷೇಧಗೊಂಡಿತ್ತಾದರೂ ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಜಾರಿಗೆ ಬರಲಿಲ್ಲ. ಹಿರಿಯ ಅಧಿಕಾರಿಯೊಬ್ಬರು ಒಮ್ಮೆ ನಗರ ಸಂಚಾರ ಕೈಗೊಂಡರೆ, ನಗರದಲ್ಲಿ ಕೊಂಚ ಮಟ್ಟಿಗಾದರೂ ಬದಲಾವಣೆ ಆಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಅದು ಆಗದಿದ್ದಾಗ ನಿರಾಸೆಯಾಗುತ್ತದೆ’ ಎಂದು ಅವರು ತಿಳಿಸಿದರು.ಕೇಂದ್ರ ವಲಯದ ಐಜಿಪಿ ಅಮರಕುಮಾರ್ ಪಾಂಡೆ ಈಚೆಗೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ವಾಹನಗಳ ನಿಲುಗಡೆ ವ್ಯವಸ್ಥೆ, ದೂಳು ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ‘ವಾಹನಗಳ ನಿಲುಗಡೆ ಮತ್ತು ಸುಗಮ ಸಂಚಾರ ವ್ಯವಸ್ಥೆ ಸರಿ ಮಾಡಲು ನಾವು ಸಿದ್ಧರಿದ್ದೇವೆ.ಆದರೆ ಬದಲಾವಣೆ ಮತ್ತು ಅಭಿವೃದ್ಧಿ ಕಾರ್ಯಗಳು ಪೊಲೀಸ್‌ ಇಲಾಖೆಯೊಂದರಿಂದ ಕಷ್ಟಸಾಧ್ಯ. ನಗರದಲ್ಲಿನ ವಾಹನಗಳ ನಿಲುಗಡೆ ಸಮಸ್ಯೆ, ಅವ್ಯವಸ್ಥೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜತೆ ಚರ್ಚಿಸಿದ್ದೇನೆ. ಪಾದಚಾರಿ ಒತ್ತುವರಿ ತೆರವು­ಗೊಳಿಸಲು, ದ್ವಿಚಕ್ರವಾಹನ, ಕಾರುಗಳ ನಿಲುಗಡೆ ವ್ಯವಸ್ಥೆ ಮಾಡಲು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಸುಧಾರಣಾ ಕ್ರಮ ಜರುಗಿಸಲಾ­ಗುವುದು’ ಎಂದು ಅವರು ಹೇಳಿದ್ದರು.ಅಧಿಕಾರಿಗಳ ಜತೆ ಜನಪ್ರತಿನಿಧಿಗಳು ಭರವಸೆಗಳನ್ನು ನೀಡಿದ್ದಾರೆ. ಆದರೆ ಅವು ಯಾವಾಗ ಕಾರ್ಯರೂಪಕ್ಕೆ ಬರುವುದೋ ಕಾದು ನೋಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)