ಗುರುವಾರ , ಏಪ್ರಿಲ್ 22, 2021
25 °C

ಸುನಾಮಿ ಭೀತಿಗೆ ಗುಳೆ ಹೊರಟ ಉತ್ತರ ಕರ್ನಾಟಕ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ತುತ್ತು ಕೂಳಿಗಾಗಿಯೇ ದೂರದ ಬಯಲುಸೀಮೆ ನಾಡು ಉತ್ತರ ಕರ್ನಾಟಕದಿಂದ ಉಡುಪಿಗೆ ವಲಸೆ ಬಂದಿರುವ ಕಾರ್ಮಿಕರು ‘ಸುನಾಮಿ’ ಭೀತಿಯಿಂದ ಊರಿಗೆ ಗುಳೆ ಎದ್ದು ಹೋಗುತ್ತಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಬಾಗಲಕೋಟೆ, ವಿಜಾಪುರ, ಗದಗ, ಶಹಾಪುರದ ಕಡೆಗೆ ತಮ್ಮ ಪಯಣ ಬೆಳೆಸಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಇದೇ 19ರಂದು ಸಂಭವಿಸುವ ‘ಸೂಪರ್ ಮೂನ್’ ಪರಿಣಾಮ. ಅಂದು ಭೂಮಿಗೆ ಹತ್ತಿರಕ್ಕೆ ಬರುವ ಚಂದ್ರನಿಂದಾಗಿ ಸಮುದ್ರ ಉಕ್ಕೇರಿ ’ಭೂಕಂಪ’, ‘ಸುನಾಮಿ’ ಕಾಣಿಸಿಕೊಳ್ಳಬಹುದು ಎನ್ನುವ ಗಾಳಿಸುದ್ದಿಯಿಂದಾಗಿ ಬಡ ಕೂಲಿ ಕಾರ್ಮಿಕರಲ್ಲಿ ಬಹಳಷ್ಟು ಮಂದಿ ಸದ್ಯಕ್ಕೆ ಊರು ಬಿಟ್ಟು ಹೋಗುತ್ತಿದ್ದಾರೆ. ಗುರುವಾರ ಕೂಡ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕೆಲವು ಕಾರ್ಮಿಕರು ಗಂಟುಮೂಟೆಯೊಂದಿಗೆ ದೂರದ ವಿಜಾಪುರಕ್ಕೆ ಹೊರಟಿದ್ದರು. ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ವಿಜಾಪುರದ ಶರಣವ್ವ ಸುನಾಮಿ ಭೀತಿಯನ್ನು ತುಸು ಸಂಕೋಚದಿಂದಲೇ ಒಪ್ಪಿಕೊಂಡರು.‘ಹೌದ್ರಿ, ಟಿವಿಯ್ಯಾಗ, ಪೇಪರ್ನಾಗ ಎಲ್ಲ ಕಡೆ ನೋಡಿದ್ರೂ ಸುನಾಮಿ ಬತ್ತೈತ್ರೀ, ಸುನಾಮಿ ಬತ್ತೈತ್ರೀ ಅಂತ ಸುದ್ದಿ ಬರಾಕ್ ಹತ್ತಾವಂತಲ್ರೀ, ಎಲ್ಲರೂ ಅದನ್ನೇ ಹೇಳಾಕ್ ಹತ್ತಾರ, ನಮ್ಮ ಊರ್ನಾಗ್ನ ಇದನ್ನು ನೋಡಿ ಫೋನ್ ಮಾಡಾಕ್ ಹತ್ಯಾರ್ರಿ...ಮತ್ತೆ ಯೇನು ಮಾಡೋದ್ರಿ, ಇಲ್ಲಿ ಸಮುದ್ರ ಬೇರೆ ಹತ್ರ ಐತಿ ನೋಡ್ರಿ ಸುನಾಮಿ ಬಂದ್ರ ಏನು ಮಾಡೋಣ ಹೇಳ್ರಿ? ಅದಕ್ಕೆಸ್ವಲ್ಪ ದಿನ ಊರಲ್ಲಿದ್ರು ಬರಾಕ ಹತ್ತಿವ್ರೀ’ ಎಂದು ಶರಣವ್ವ ಹೇಳಿಕೊಂಡರು.ಬಾಗಲಕೋಟೆಯ ಯಲ್ಲಪ್ಪ ಕೂಡ ಇದೇ ಮಾತನ್ನು ಹೇಳಿದರು. ‘ಹೌದ್ರಿ, ಎಲ್ಲರೂ ಹೆದರಿಸಾಕ್ ಹತ್ತ್ಯಾರ್ರಿ, ನಾಡಿದ್ದು 19ಕ್ಕ ಭೂಕಂಪ ಆಕೈತಿ, ಸುನಾಮಿ ಬತ್ತೈತಿ ಅಂತ. ಖರೀನೋ ಸುಳ್ಳೋ ಗೊತ್ತಿಲ್ರೀ ನಮಗ, ನಮ್ಮ ಊರಿನ ಭಾಳ ಮಂದಿ ಈಗ್ಲೆ ಊರಿಗೆ ಹೊಂಟು ಹೋಗ್ಯಾರ್ರಿ, ನಾವು ಅದ್ಕ ಹೊಂಟೇವ್ರಿ’ ಎಂದರು.ಉಡುಪಿಯ ಬೀಡಿನಗುಡ್ಡೆ ಬಳಿ ಚಿಕ್ಕಪುಟ್ಟ ಗುಡಿಸಲುಗಳಲ್ಲಿ ಸಾವಿರಾರು ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಅಲ್ಲಿ ಕೂಡ ಈಗ ಅಷ್ಟಾಗಿ ಕಾರ್ಮಿಕರ ಓಡಾಟ ಕಂಡುಬರುತ್ತಿಲ್ಲ. ಉಡುಪಿ ಉತ್ತರ ಕರ್ನಾಟಕ ಕಾರ್ಮಿಕರ ಪಾಲಿಗೆ ಮಿನಿ ದುಬೈ ಇದ್ದಂತೆ. ಇಲ್ಲಿ ಕೂಲಿ ಕಾರ್ಮಿಕರು ಸಿಗದೇ ಇರುವ ಕಾರಣ ದಿನಕ್ಕೆ ರೂ 200ಕ್ಕೂ ಹೆಚ್ಚು ಕೂಲಿ ಕೊಟ್ಟು ಸ್ಥಳೀಯರು ಕೆಲಸ ಮಾಡಿಸಿಕೊಳ್ಳುತ್ತಾರೆ. ಕಟ್ಟಡ ಕಾಮಗಾರಿಗಳಿಗಂತೂ ಇವರೇ ಹೆಚ್ಚು. ಹೀಗಾಗಿ ಉ.ಕ. ಜನರೇ ಇಲ್ಲಿನ ಕೂಲಿ ಕಾರ್ಮಿಕರು. ಬ್ರಹ್ಮಗಿರಿಯ ಬಳಿ ವಾಸವಾಗಿರುವ ಶಹಾಪುರದ ಕೂಲಿ ಕಾರ್ಮಿಕ ರಮೇಶ್ ದಂಪ–ತಿಯನ್ನು ಈ ಬಗ್ಗೆ ಕೇಳಿದಾಗ ‘ಹೌದ್ರಿ, ಸುಮಾರು ಜನ ಊರಿಗೆ ಹೋಗ್ಯಾರ್ರಿ, ನಾವು ಹೋಗಂಗಿಲ್ರಿ, ದೇವರು ಮಾಡಿದಂಗಾಕೈತ್ರಿ, ಇಲ್ಲಿ ಇರ್ತೀವ್ರಿ’ ಎಂದು ತಾವು ಇಲ್ಲೇ ಉಳಿಯಲು ನಿರ್ಧಾರ ಮಾಡಿದ್ದನ್ನು ಹೇಳಿದರು.‘ಊರಿಗೆ ಬರ್ರಿ ಅಂತ 2-3 ದಿನದಿಂದ ಫೋನ್ ಬರಾಕ್ ಹತ್ತೈತ್ರಿ, ಆದ್ರೆ ನಾವು ಹೋಗಾಂಗಿಲ್ರಿ, ಸಾಯೋದಾದ್ರ ಇಲ್ಲೆ ಸಾಯೋಣ ಬಿಡ್ರಿ’ ಎಂದು ರಮೇಶ್ ಧೈರ್ಯದಿಂದ ಹೇಳಿಕೊಂಡರು. ಅವರ ಪತ್ನಿ ಶಾರದಾಳಿಗೆ ಮಾತ್ರ ಊರಿಗೆ ಹೋಗಬೇಕು ಎನ್ನುವ ಆಸೆ ಇತ್ತಂತೆ, ‘ನನಗ ಊರಿಗೆ ಹೋಗಬೇಕು ಅಂತ ಭಾಳ ಆಸೆ ಇತ್ರಿ. ಆದ್ರೆ ಇವ್ರ (ಗಂಡ) ಒಪ್ಪಿಲ್ಲ, ಸ್ವಲ್ಪ ಹೆದ್ರಿಕಿ ಆಕೈತ್ರಿ... ಮಲ್ಪೆ ಸಮುದ್ರ ಭಾಳ ಹತ್ತ ಐತಲ್ರಿ, ನಾವು ಕೆಲಸಕ್ಕೆ ಹೋಗುವಲ್ಲಿ ಎಂಜಿನಿಯರ್ ಹೇಳ್ತಾರ ಭಯ ಬ್ಯಾಡ್ರಿ, ಏನೂ ಆಗಂಗಿಲ್ಲ, ಈ ಕಡಿ ಭೂಕಂಪ, ಸುನಾಮಿ ಆಗಾಂಗಿಲ್ಲ ಅಂತಾರ್ರಿ...’ ಎಂದು ಪ್ರತಿಕ್ರಿಯಿಸಿದರು.ಒಟ್ಟಿನಲ್ಲಿ ಸುನಾಮಿ ಭೂಕಂಪದ ಹಿನ್ನೆಲೆಯಲ್ಲಿ ಬಹಳಷ್ಟು ವಲಸೆ ಕಾರ್ಮಿಕರು ಗಂಟುಮೂಟೆ ಕಟ್ಟಿದ್ದಾರೆ. ಇನ್ನು ಕೆಲವು ದಿನ ಕಾದು ಮತ್ತೆ ಮರಳಿ ಬರಲಿದ್ದಾರೆ. ಅಲ್ಲಿಯವರೆಗೆ ಇಲ್ಲಿನವರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಕಾಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.