ಸೋಮವಾರ, ಮೇ 25, 2020
27 °C

ಸುಪ್ರೀಂ ಕೋರ್ಟ್ ಆದೇಶ ಪಾಲನೆ: 47 ಧಾರ್ಮಿಕ ಕಟ್ಟಡ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಸುಪ್ರೀಂ ಕೋರ್ಟ್ ನೀಡಿರುವ ಆದೇಶದನ್ವಯ ಕೈಕೊಳ್ಳಲಾಗುವ ಮೊದಲ ಹಂತದ ತೆರವು ಕಾರ್ಯಾಚರಣೆಯಲ್ಲಿ ತಾಲ್ಲೂಕಿನ 47 ಧಾರ್ಮಿಕ ಕಟ್ಟಡ ನೆಲಸಮ ಮಾಡಲಾಗುವುದು ಎಂದು ತಹಸೀಲ್ದಾರ ಸಿದ್ದು ಹುಲ್ಲೋಳಿ ಹೇಳಿದರು.ಸಾರ್ವಜನಿಕ ಉದ್ಯಾನ, ರಸ್ತೆ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಾಲಯ, ಮಸೀದಿ, ಚರ್ಚ್ ಇತ್ಯಾದಿ ಧಾರ್ಮಿಕ ಕಟ್ಟಡಗಳ ತೆರವು ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಕರೆದ ಸಭೆಯಲ್ಲಿ ಅವರು ಮಾತನಾಡಿದರು.ಕಂದಾಯ ಇಲಾಖೆ, ನಗರಸಭೆ, ಪುರಸಭೆ ವ್ಯಾಪ್ತಿಯ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿವಾಗಿ ಈಗಾಗಲೇ ನೋಟಿಸ್ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಮಾತ್ರ ಇನ್ನೂ ನೋಟಿಸ್ ಕೊಡಬೇಕಿದೆ. ಅಧಿಕೃತ ಕಟ್ಟಡ ಎಂದು ಸಾಬೀತು ಪಡಿಸುವ ದಾಖಲೆಗಳನ್ನು ಸಾದರಪಡಿಸುವಂತೆ ಕೋರಿ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದೆ.ನೋಟಿಸ್ ನೀಡಿದ ಬಳಿಕ ಪಡೆದ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಖುದ್ದಾಗಿ ಸ್ಥಳ ಸಮೀಕ್ಷೆ ಕೈಕೊಂಡ ಬಳಿಕ ತೆರವುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗುವುದು. ತರಾತುರಿಯಲ್ಲಿ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಒಟ್ಟು 178 ಅನಧಿಕೃತ ಕಟ್ಟಡ ಗುರುತಿಸಿ ನೋಟಿಸ್ ನೀಡಲಾಗಿದೆ ಎಂದರು.ಶಾಸಕ ಶ್ರೀಕಾಂತ ಕುಲಕರ್ಣಿ, ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವುದು ಸರಕಾರದ ನಿರ್ಧಾರ ಅಲ್ಲ. ಇದರಲ್ಲಿ ರಾಜಕೀಯ ಪ್ರವೇಶವಿಲ್ಲ. ಯಾರಿಗೂ ತೊಂದರೆ ಆಗದಂತೆ ಮತ್ತು ಯಾರ ಭಾವನೆಗೆ ಧಕ್ಕೆ ಬರದಂತೆ ತೆರವು ಕಾರ್ಯಾಚರಣೆ ಕೈಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಸಿದ್ದು ಸವದಿ, ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಮತ್ತು ಸಾರ್ವಜನಿಕರ ಹಿತಕ್ಕಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸುವುದು ಅಗತ್ಯ. ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಪ್ರಚೋದನೆ ಮಾಡಿ ಶಾಂತಿ ಭಂಗಕ್ಕೆ ಯಾರೂ ಕೈ ಹಾಕುವುದು ಬೇಡ. ಯಾವುದೇ ಅನಾಹುತಕ್ಕೆ ಅವಕಾಶ ನೀಡಬಾರದು. ಅಧಿಕಾರಿಗಳು ಸಹ ತೆರವು ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.ಡಿವೈಎಸ್ಪಿ ರವಿ ನಾರಾಯಣ, ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಯಾರೂ ಪ್ರತಿಷ್ಠೆಯ ವಿಷಯ ಮಾಡಬಾರದು. ವಾದ ಮಾಡಿ ಘರ್ಷಣೆಗೆ ಎಡೆಮಾಡಿಕೊಟ್ಟು ಸಾಮಾಜಿಕ ವಾತಾವರಣ ಹದಗೆಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಎ.ಬಿ. ಪಾಟೀಲ (ತುಬಚಿ), ರಾಜೇಸಾಬ ಕಡಕೋಳ (ಜಮಖಂಡಿ), ಶಾಂತು ಖಿದ್ರಾಪೂರ (ಆಲಗೂರ), ಜಿ.ಪಿ. ಹುಣಸಿಕಟ್ಟಿ (ಜಮಖಂಡಿ), ಡಾ. ಬಡಚಿಕರ (ರಬಕವಿ), ರಾಜೇಸಾಬ ಮಸಳಿ (ಜಮಖಂಡಿ) ಮತ್ತಿತರರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎಂ. ಹಟ್ಟಿ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಚಿಕ್ಕಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಸಿ ಮಗದುಮ್, ಟಿಪಿಇಓ ಪಾಟೀಲ, ಸಿಪಿಐ ಎಂ.ಬಿ.ಅಸೋದೆ, ಸಿಪಿಐ ಜೋಗಿನ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.