ಭಾನುವಾರ, ಫೆಬ್ರವರಿ 28, 2021
30 °C

ಸುಪ್ರೀತಾ ನಟನಾ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀತಾ ನಟನಾ ಪ್ರೀತಿ

ರಂಗಭೂಮಿಯಲ್ಲಿ ವೃತ್ತಿ ಆರಂಭಿಸಿ ಕಿರುತೆರೆ ಮೂಲಕ ನಟನಾ ಬದುಕಿಗೊಂದು ಅರ್ಥ ಕಲ್ಪಿಸಿಕೊಂಡವರು ಸುಪ್ರೀತಾ ಶೆಟ್ಟಿ. ಕಿರುತೆರೆ ಹಾಗೂ ರಂಗಭೂಮಿಯು ಜನ ನನ್ನನ್ನು ಗುರುತಿಸುವಂತೆ ಮಾಡಿದೆ. ಇಂದು ನಾನು ನಟನೆಯಲ್ಲೇ ಬದುಕು ಕಟ್ಟಿಕೊಂಡಿದ್ದೆನೆ ಎನ್ನುವ ಇವರು ಕಲರ್ಸ್‌ ಕನ್ನಡ ವಾಹಿನಿಯ ‘ಕುಲವಧು’ ಧಾರಾವಾಹಿಯ ‘ಕಾಂಚನಾ’ ಪಾತ್ರಧಾರಿ.ಖಳನಾಯಕಿಯ ಪಾತ್ರದಲ್ಲಿ ತಪ್ಪು ತಪ್ಪು ಇಂಗ್ಲಿಷ್ ಮಾತನಾಡುತ್ತಾ, ಮನಸ್ಸಿನಲ್ಲೇ ಮನೆಯವರ ವಿರುದ್ಧ ಕತ್ತಿ ಮಸೆಯುವ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈಕೆಯ ಧಾರಾವಾಹಿಯ ಸಂಭಾಷಣೆ ಎಂತಹವರನ್ನೂ ನಗೆಗಡಲಲ್ಲಿ ತೇಲಿಸುತ್ತದೆ.ಕುಂದಾಪುರ ಮೂಲದ ಸುಪ್ರೀತಾ ಹುಟ್ಟಿ ಬೆಳೆದಿದ್ದೆಲ್ಲವೂ ನಗರದಲ್ಲೇ. ತೀರಾ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಸುಪ್ರೀತಾ ತಂದೆ–ತಾಯಿಗೆ ನಟನೆ ಎನ್ನುವುದು ಹಿಡಿಸದ ಮಾತಾಗಿತ್ತು. ಮನೆಯವರ ತೀವ್ರ ವಿರೋಧದ ನಡುವೆಯೂ ನಟನಾರಂಗಕ್ಕೆ ಬಂದವರು ಇವರು. ಪಿಯುಸಿ ಓದುತ್ತಿರುವಾಗಲೇ ಇವರು ನಾಟಕಗಳಲ್ಲಿ ನಟಿಸುತ್ತಿದ್ದರು. ನಂತರ ‘ರಂಗಸೌರಭ’ ಎಂಬ ರಂಗತಂಡದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಸುಮಾರು 6 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ ಇವರು, 2006ರಲ್ಲಿ ಕಿರುತೆರೆಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೆ ಸುಮಾರು 60 ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.ಮೊದಲ ಬಾರಿಗೆ ಉದಯ ವಾಹಿನಿಯ ‘ಸೌಂದರ್ಯ’ ಧಾರಾವಾಹಿಯಲ್ಲಿ ಕಥಾನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿದ್ದ ಸುಪ್ರಿಯಾಗೆ ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಯಾವುದೇ ಅಳುಕಿರಲಿಲ್ಲವಂತೆ. ‘ರಂಗಭೂಮಿಯ ನಟನೆ ನನಗೆ ಧಾರಾವಾಹಿಗಳಲ್ಲಿ ಯಾವುದೇ ಅಳುಕಿಲ್ಲದೇ ನಟಿಸಲು ಪ್ರೇರೇಪಿಸಿತ್ತು. ಸೌಂದರ್ಯ ಧಾರಾವಾಹಿಯಿಂದ ಇಂದಿನವರೆಗೂ ಅನೇಕ ಭಿನ್ನ ಭಿನ್ನ ಪಾತ್ರಗಳಲ್ಲಿ ನಾನು ನಟಿಸಿದ್ದೇನೆ. ಅಲ್ಲದೇ ನನಗೆ ಯಾವ ಪಾತ್ರವೂ  ಪುನರಾರ್ವತನೆಯಾಗಿದೆ ಎಂದು ಅನ್ನಿಸಲಿಲ್ಲ’ ಎಂದು ತಮ್ಮ ಪಾತ್ರಗಳ ಕುರಿತು ತಿಳಿಸುತ್ತಾರೆ ಸುಪ್ರೀತಾ.‘ನಾನು ನಾಟಕದಲ್ಲಿ ನಟಿಸುತ್ತೇನೆ ಎಂದಾಗ ತಂದೆ ಖಡಾಖಂಡಿತವಾಗಿ ಬೇಡ ಎಂದಿದ್ದರು. ಸಿನಿಮಾ, ಧಾರಾವಾಹಿ, ನಾಟಕಗಳು ನಮ್ಮ ಜನರಿಗಲ್ಲ ಎಂಬ ಮನಸ್ಥಿತಿ ನಮ್ಮ ಮನೆಯಲ್ಲಿತ್ತು.  ನಾನು ಟ್ಯೂಷನ್‌, ಫ್ರೆಂಡ್ ಮನೆ ಎಂದು ಸುಳ್ಳು ಹೇಳಿ ನಾಟಕಗಳಲ್ಲಿ ಅಭಿನಯಿಸಿ, ಮನೆಗೆ ಹಿಂದಿರುವ ಮೊದಲು ಮುಖದಲ್ಲಿನ ಮೇಕಪ್‌ ನೀಟಾಗಿ ತೊಳೆಯುತ್ತಿದ್ದೆ’ ಎಂದು ತಮ್ಮ  ಅಂದಿನ ನಟನಾ ಸಾಹಸವನ್ನು ವಿವರಿಸುತ್ತಾರೆ ಸುಪ್ರೀತಾ.‘ಪ್ರತಿ ಪಾತ್ರವೂ ಒಂದಕ್ಕಿಂತ ಒಂದು ಭಿನ್ನವಾಗಿದ್ದ ಕಾರಣ ನನಗೆ ಯಾವ ಪಾತ್ರವೂ ಬೇಸರ ತರಿಸಲಿಲ್ಲ. ಆದರೆ, ಇಂದಿಗೂ ನಾನು ನಟಿಸಿದ ಪಾತ್ರಗಳಲ್ಲಿ ಹೆಚ್ಚು ಇಷ್ಟ ಪಡುವ ಪಾತ್ರ ಎಂದರೆ ಮಾಂಗಲ್ಯ ಧಾರವಾಹಿಯ ವಾಣಿ ಪಾತ್ರ. ಧಾರಾವಾಹಿ ಮುಗಿದು ವರ್ಷಗಳು ಕಳೆದರೂ ಜನ ಇಂದಿಗೂ ನನ್ನ ‘ಮಾಂಗಲ್ಯ ವಾಣಿ’ ಎಂದೇ ಗುರುತಿಸಿ ಕರೆಯುತ್ತಾರೆ. ಆ ಪಾತ್ರ ಅಷ್ಟೊಂದು ನನಗೆ ಹೆಸರು ತಂದು ಕೊಟ್ಟಿದೆ’ ಎನ್ನುತ್ತಾರೆ ಸುಪ್ರೀತಾ.‘ಕುಲವಧು ಧಾರಾವಾಹಿಯ ಕಾಂಚನಾ ಪಾತ್ರ ಸ್ವಲ್ಪ ಮಟ್ಟಿಗೆ ಚಾಲೆಂಜ್‌ ಅನ್ನಿಸಿತ್ತು. ಕಾರಣ ಅಲ್ಲಿ ತಪ್ಪು ತಪ್ಪು ಇಂಗ್ಲಿಷ್‌ ಮಾತನಾಡಬೇಕಿತ್ತು. ಆದರೆ ನಾನು ಆಂಗ್ಲಭಾಷೆಯಲ್ಲಿ ಓದಿದ್ದರಿಂದ ನನಗೆ ತಪ್ಪು ಇಂಗ್ಲಿಷ್ ಮಾತಾನಾಡಲು ಕಷ್ಟ ಎನ್ನಿಸುತ್ತಿತ್ತು. ಅಷ್ಟೇ ಅಲ್ಲದೆ ಶೂಟಿಂಗ್‌ ಮಾಡುವಾಗ ಲೈಟ್ ಬಾಯ್‌ , ಕ್ಯಾಮೆರಾಮನ್ ಎಲ್ಲರೂ ನಗುತ್ತಿದ್ದರು. ಆಗ ನಗು ನಿಯಂತ್ರಿಸಿಕೊಂಡು ಆ್ಯಕ್ಟ್‌ ಮಾಡುತ್ತಿದ್ದೆ’ ಎಂದು ನಟನಾ ಪರಿಯನ್ನು ವಿವರಿಸುತ್ತಾರೆ.‘ಹುಟ್ಟಿದ ಮನೆಯಲ್ಲಿ ಬೆಂಬಲವಿಲ್ಲದಿದ್ದರೂ ಮೆಟ್ಟಿದ ಮನೆ(ಗಂಡನ ಮನೆ)ಯಲ್ಲಿ ತುಂಬಾನೇ ಬೆಂಬಲವಿತ್ತು. ಪತಿ ಪ್ರಮೋದ್‌ ಶೆಟ್ಟಿ ಕೂಡ ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ  ನನಗೆ ಅಭಿನಯಿಸಲು ತುಂಬಾ ಸಹಕಾರ ನೀಡಿದ್ದರು. ನಾನು ಮದುವೆಯಾಗಿ 3ನೇ ದಿನಕ್ಕೆ ಶೂಟಿಂಗ್‌ ಬಂದಿದ್ದೆ’ ಎನ್ನುತ್ತಾರೆ ಸುಪ್ರೀತಾ. ಇವರಿಗೆ ಗಂಡ, ಅತ್ತೆ, ಮಾವ ಅಲ್ಲದೇ 3 ವರ್ಷದ ಮಗಳು ಕೂಡ ನಟನೆಗೆ ಬೆಂಬಲ ನೀಡುತ್ತಿದ್ದಾರಂತೆ. ‘ನನಗೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವುದಕ್ಕೆ ಸಂತೃಪ್ತಿ ಇದೆ.  ಸಿನಿಮಾಗಳಲ್ಲಿ ನಟಿಸುವ ಇರಾದೆ ಸದ್ಯಕ್ಕಿಲ್ಲ. ನನ್ನ ಆಪ್ತವಲಯದ ನಿರ್ದೇಶಕರೇ ಯಾರಾದರೂ ಸಿನಿಮಾದಲ್ಲಿ ನಟಿಸುವಂತೆ ಕೇಳಿದರೆ ನಟಿಸುತ್ತೇನಷ್ಟೆ’ ಎನ್ನುತ್ತಾರೆ ಸುಪ್ರೀತಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.