ಶುಕ್ರವಾರ, ಮೇ 14, 2021
32 °C

ಸುಭಾಷ್‌ಗೆ ಮಂಜೂರಾಗಿದ್ದ ಜಮೀನು ರದ್ದು:ದೇಶಮುಖ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಲಿವುಡ್ ನಿರ್ಮಾಪಕ ಸುಭಾಷ್ ಘಾಯ್ ಅವರ ಸಂಸ್ಥೆಗೆ ಕಾನೂನು ಬಾಹಿರವಾಗಿ ಭೂಮಿ ನೀಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಛೀಮಾರಿ ಹಾಕಿದೆ.ಉನ್ನತ ಹುದ್ದೆಯಲ್ಲಿದ್ದಾಗ `ಯಾರನ್ನೂ ಅಚ್ಚುಮೆಚ್ಚಿನವರೆಂದು ಪರಿಗಣಿಸಬಾರದು~ ಮತ್ತು `ಯಾವುದಕ್ಕೂ ಮಣಿಯಬಾರದು ಮತ್ತು ಕಾನೂನು ಉಲ್ಲಂಘಿಸಬಾರದು~ ಎಂದು ಹೇಳಿದೆ.`ಮುಖ್ಯಮಂತ್ರಿಯಾಗಿದ್ದವರು ರಾಜ್ಯದ ಭೂಮಿ ನೀಡುವಾಗ ಒಬ್ಬ ವ್ಯಕ್ತಿಯನ್ನು ಆಪ್ತರೆಂದು ಪರಿಗಣಿಸಬಾರದು ಅಥವಾ ಅವರ ಒತ್ತಡಕ್ಕೆ ಮಣಿದು ಕಾನೂನಿನ ಚೌಕಟ್ಟು ಮೀರಬಾರದು~ಎಂದಿರುವ ಪೀಠವು ಅಲ್ಪ ಮೊತ್ತಕ್ಕೆ ಭೂಮಿ ನೀಡಿದ್ದನ್ನು ಉಲ್ಲೇಖಿಸಿದೆ.ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಫಿಲಂ ಸಿಟಿಯಲ್ಲಿ ಘಾಯ್ ಅವರಿಗೆ ಕಾನೂನು ಬಾಹಿರವಾಗಿ 20 ಎಕರೆ ಭೂಮಿ ನೀಡಿದ್ದನ್ನು ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಎಚ್. ಎಲ್. ದತ್ತು ಮತ್ತು ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ಪೀಠ ಎತ್ತಿ ಹಿಡಿದಿದೆ. ಇದರಿಂದ ಘಾಯ್ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ. ಈಗ ಕೇಂದ್ರ ಸಚಿವರಾಗಿರುವ ದೇಶಮುಖ್ ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.`ನೀವೊಬ್ಬ ಮಹಾನ್ ಚಿತ್ರ ನಿರ್ಮಾಪಕ, ಸರಿ. ಆದರೆ ನಿಮಗಿಂತಲೂ ಮಹಾನ್ ನಿರ್ಮಾಪಕರಿದ್ದರೂ ನಿಮ್ಮನ್ನೇ ಏಕೆ ಆಯ್ಕೆ ಮಾಡಲಾಗಿದೆ~ ಎಂದು ಪೀಠ ಘಾಯ್ ಅವರನ್ನು ಪ್ರಶ್ನಿಸಿದೆ.`ಹಿಂದೆ ಅಧಿಕಾರ ನಡೆಸಿದ ಮೂವರು ಮುಖ್ಯಮಂತ್ರಿಗಳು ಈ ಪ್ರಸ್ತಾವದ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಮುಖ್ಯಮಂತ್ರಿ (ದೇಶಮುಖ್) ಅಧಿಕಾರ ಸ್ವೀಕರಿಸಿದ  ಮಾರನೇ ದಿನವೇ ಪ್ರಕ್ರಿಯೆ ಆರಂಭಿಸಿದರು. ಆದರೆ ಪಾರದರ್ಶಕತೆಯನ್ನು ಪಾಲಿಸಿಲ್ಲ~ ಎಂದು ಕೋರ್ಟ್ ಹೇಳಿದೆ.ಫಿಲಂಸಿಟಿಯಲ್ಲಿ  ಘಾಯ್ ಈಗಾಗಲೇ 50 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ದರಿಂದ ಭೂಮಿಯನ್ನು ಗುತ್ತಿಗೆಗಾದರೂ ನೀಡುವಂತೆ ಘಾಯ್ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ಕೋರಿಕೆ ತಳ್ಳಿಹಾಕಿದ ಪೀಠ, ಭೂಮಿಗಾಗಿ ನಡೆಯುವ ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ.ಮುಂಬೈ ಹೊರ ವಲಯದ ಗುಡಗಾಂವ್‌ನಲ್ಲಿ ಘಾಯ್ ಅವರಿಗೆ ನೀಡಲಾಗಿರುವ 20 ಎಕರೆ ಭೂಮಿಯಲ್ಲಿ ಈಗ ಖಾಲಿ ಇರುವ 14.5 ಎಕರೆಯನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು. ಈಗಾಗಲೇ ಈ ಅಕಾಡೆಮಿಯಲ್ಲಿ  ಪ್ರವೇಶ ಪಡೆದ ವಿದ್ಯಾರ್ಥಿಗಳ ಕೋರ್ಸ್ ಮುಗಿದ ಬಳಿಕ ಉಳಿದ ಉಳಿದ 5.5 ಎಕರೆಯನ್ನು 2014ರಲ್ಲಿ ವಾಪಸ್ ನೀಡಬೇಕು ಎಂಬ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಇದಕ್ಕಾಗಿ 2000ನೇ ಸಾಲಿನಿಂದ ಪ್ರತಿ ವರ್ಷ ಇದಕ್ಕೆ 5 ಕೋಟಿ ರೂ.ಬಾಡಿಗೆ ನೀಡುವಂತೆ ಹೈಕೋರ್ಟ್ ಘಾಯ್ ಅವರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಮೊರೆ ಹೋಗಿದ್ದರು.31.20 ಕೋಟಿ ಮೌಲ್ಯದ ಈ ಭೂಮಿಯನ್ನು ಕೇವಲ 3 ಕೋಟಿಗೆ ಮಾರಾಟ ಮಾಡಿದ ಸರ್ಕಾರದ ಕ್ರಮವನ್ನು ರಾಜ್ಯದ ಲೆಕ್ಕ ಪರಿಶೋಧಕರು ವಿರೋಧಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.