ಭಾನುವಾರ, ಮೇ 9, 2021
33 °C
ಖಾಸಗಿ ವಾಹನ

ಸುರಕ್ಷತೆ ಜಿಜ್ಞಾಸೆ

-ರಮೇಶ ಕೆ. Updated:

ಅಕ್ಷರ ಗಾತ್ರ : | |

ಸೂರ್ಯೋದಯಕ್ಕೂ ಮುನ್ನ ಎದ್ದು, ಉಪಾಹಾರ ಸಿದ್ಧಪಡಿಸುವುದರಿಂದ ಆರಂಭವಾಗಿ ನೀರು ಕಾಯಿಸಿ, ಮಗುವಿಗೆ ಸ್ನಾನ ಮಾಡಿಸಿ, ನೀಟಾಗಿ ಸಮವಸ್ತ್ರ ಹಾಕಿಸುವವರೆಗೂ ಆ ತಾಯಿಗೆ ಪುರುಸೊತ್ತಿಲ್ಲ. ಗಂಟೆ ಏಳಾಗುತ್ತಿದ್ದಂತೆ ವಾಹನದ ಹಾರನ್ ಕಿವಿಗಪ್ಪಳಿಸುತ್ತದೋ ಎಂಬ ಧಾವಂತದಲ್ಲಿಯೇ ಶಾಲೆಗೆ ಕಳುಹಿಸಲು ಅಣಿಯಾಗುತ್ತಾಳೆ.

ವಾಹನ ಬಂದ ಕೂಡಲೇ ಕೈ ಹಿಡಿದು ಹತ್ತಿಸುತ್ತಾಳೆ. ಆದರೆ ಏಳು ಮಂದಿ ಸಾಮರ್ಥ್ಯದ ವಾಹನದಲ್ಲಿ 15 ಮಕ್ಕಳನ್ನು ಕುರಿಗಳಂತೆ ತುಂಬಿರುವುದನ್ನು ಕಂಡು ಆಕೆಯ ಮನಸ್ಸಿನಲ್ಲಿ ಅಸಮಾಧಾನ ಮನೆ ಮಾಡುತ್ತದೆ. ಆದರೂ ಪ್ರತಿನಿತ್ಯ ಅದೇ ಅಸಮಾಧಾನದೊಂದಿಗೆ ಮಗುವನ್ನು ಶಾಲೆಗೆ ಕಳುಹಿಸುತ್ತಾಳೆ.ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ವಾಹನ ಶುಲ್ಕ ಮಧ್ಯಮ ವರ್ಗದ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ. ಮೇ ತಿಂಗಳು ಬಂತೆಂದರೆ  ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ ತಲೆಬಿಸಿಯಾಗುತ್ತದೆ. ಶಾಲೆಗಳು ಆರಂಭವಾಗುತ್ತಿದ್ದಂತೆ ಪ್ರವೇಶ ಶುಲ್ಕದಿಂದ ಆರಂಭವಾಗುವ ಖರ್ಚು ವಾರ್ಷಿಕ ಪರೀಕ್ಷೆ ಮುಗಿಯುವವರೆಗೂ ಮುಂದುವರಿಯುತ್ತದೆ.ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರತ್ತ ಹೆಚ್ಚು ಗಮನ ನೀಡುವ ನಗರದ ಪೋಷಕರಿಗೆ ಆ ಶಾಲೆ ಮನೆಯಿಂದ ಎಷ್ಟು ದೂರ ಇದೆ ಎಂಬುದು ಪ್ರಮುಖ ವಿಷಯವಾಗುತ್ತದೆ. ಯಾಕೆಂದರೆ ಸಂಚಾರ ದಟ್ಟಣೆ ವಿಪರೀತವಿರುವ ಈ ನಗರದಲ್ಲಿ ಸರಿಯಾದ ಸಮಯಕ್ಕೆ, ಸುರಕ್ಷಿತವಾಗಿ ಮಕ್ಕಳು ಶಾಲೆಗೆ ತಲುಪಬೇಕೆಂಬುದೇ ಅವರ ಕಾಳಜಿ. ಆದ್ದರಿಂದ ಎಷ್ಟೇ ಕಷ್ಟವಾದರೂ ಶಾಲಾ ಮಾಲೀಕತ್ವದ ವಾಹನಗಳಿಗೋ ಅಥವಾ ಪೋಷಕರೇ ಓಮ್ನಿ, ಟೆಂಪೊ ಟ್ರಾವೆಲರ್, ಆಟೊಗಳಲ್ಲಿ ಮಕ್ಕಳನ್ನು ಕಳುಹಿಸುವ ವ್ಯವಸ್ಥೆ ಮುಂದುವರಿಸಿದ್ದಾರೆ.ಕುರಿಗಳಂತೆ ಮಕ್ಕಳನ್ನು ಹಾಗೂ ಅವರ ಕೈಚೀಲಗಳ ಹೊರೆಯನ್ನು ಹಾಕಿಕೊಂಡು ಹೋಗುವ ಆಟೊ ಅಥವಾ ಓಮ್ನಿಯಂಥ ವಾಹನಗಳು ಅಪಘಾತವಾಗಿ ಅಮಾಯಕ ಮಕ್ಕಳು ಅಂಗವಿಕಲರಾದ, ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮೆದುರಿಗಿವೆ. ನಿತ್ಯವೂ ಒಂದಿಲ್ಲೊಂದು ಊರುಗಳಲ್ಲಿ ಇಂಥ ಸುದ್ದಿಗಳು ವರದಿಯಾಗುತ್ತಲೇ ಇವೆ. ಆದರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ದುಬಾರಿ ವಾಹನ ಶುಲ್ಕದಿಂದ ಕೆಳ ಹಾಗೂ ಮಧ್ಯಮ ವರ್ಗದ ಮಂದಿ ಮಾತ್ರ ಇಂದಿಗೂ ಇಂಥ ಅಸುರಕ್ಷಿತ ಆಟೊ, ವ್ಯಾನ್, ಓಮ್ನಿಗಳನ್ನೇ ಅವಲಂಬಿಸುವಂತಾಗಿದೆ.

10ಕ್ಕಿಂತ ಹೆಚ್ಚು ಕಿಲೋ ಮೀಟರ್ ದೂರವಿರುವ ಶಾಲೆಗಳಲ್ಲಿ ವಾಹನಗಳ ಸೌಲಭ್ಯ ಇಲ್ಲದಿರುವುದರಿಂದಲೂ ಖಾಸಗಿ ವಾಹನಗಳ ಮೊರೆಹೋಗುತ್ತಿದ್ದಾರೆ. ಇಂದಿಗೂ ಸುರಕ್ಷಿತವಾಗಿ ಮನೆಯಿಂದ ಶಾಲೆಗೆ, ಅಲ್ಲಿಂದ ಮನೆಗೆ ಮಕ್ಕಳನ್ನು ತಲುಪಿಸುವ ಖಾಸಗಿ ವಾಹನ ಚಾಲಕರಿದ್ದಾರೆ. ಆದರೆ ಅವರಲ್ಲೂ ಕೆಲವರು ಹಣದ ಆಮಿಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ.

ಪೋಷಕರು ಹೀಗಂತಾರೆ...`ಶಾಲಾ ವಾಹನಗಳಿಗಿಂತ ಖಾಸಗಿ ವಾಹನಗಳೇ ಲೇಸು. ಶಾಲೆಗಳಿಗೆ ಇಡೀ ವರ್ಷದ ಹಣವನ್ನು ಒಂದೇ ಬಾರಿ ಪಾವತಿಸಬೇಕು. ಶಾಲಾ ವಾಹನ ಶುಲ್ಕ 18 ಸಾವಿರ. ರಿಚ್ಮಂಡ್ ವೃತ್ತದಲ್ಲಿರುವ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ನನ್ನ ಮಗ ನಾಲ್ಕನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ. ನಮ್ಮ ಮನೆ ಚೌಡೇಶ್ವರಿ ಬಡಾವಣೆಯಲ್ಲಿದೆ. ಶಾಲೆಯ ಬಸ್ ಯಶವಂತಪುರಕ್ಕೆ ಬರುತ್ತದೆ.

ದಿನಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿಬರಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ವಾಹನವನ್ನೇ (ಟೆಂಪೊ ಟ್ರಾವೆಲರ್) ಅವಲಂಬಿಸಿದ್ದೇವೆ. ಈ ವಾಹನಕ್ಕೆ ತಿಂಗಳಿಗೆ 1200 ಶುಲ್ಕ ನೀಡುತ್ತೇವೆ. ಅಲ್ಲದೆಮನೆಯ ಗೇಟ್ ಹತ್ತಿರವೇ ಮಗುವನ್ನು ಬಿಟ್ಟು ಹೋಗುತ್ತಾರೆ. ತಡವಾದರೆ ಖಾಸಗಿ ವಾಹನಗಳ ಚಾಲಕರಿಗೆ ಪ್ರಶ್ನೆ ಮಾಡಬಹುದು. ಆದರೆ ಶಾಲಾ ವಾಹನಗಳ ಚಾಲಕರು ಮಾತೇ ಕೇಳೋದಿಲ್ಲ. ಆದ್ದರಿಂದ ಸುರಕ್ಷತೆ ಹಾಗೂ ಹಣದ ದೃಷ್ಟಿಯಿಂದ ಖಾಸಗಿ ವಾಹನಗಳೇ ಲೇಸು' ಎಂಬುದು ಮತ್ತಿಕೆರೆಯ ಉದಯ್ ಅವರ ಅಭಿಪ್ರಾಯ.

ಒಂದೇ ವಾರದಲ್ಲಿ 264 ಪ್ರಕರಣ

ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂಚಿಯಂತೆ ಈಗಾಗಲೇ ನಗರದ ಎಲ್ಲಾ ಶಾಲೆಗಳಿಗೂ ಒಂದು ತಿಂಗಳ ಹಿಂದೆಯೇ ಪತ್ರ ಬರೆದಿದ್ದೇವೆ. ಆಟೊದಲ್ಲಿ 6, 1 2 ಸೀಟಿನ ವಾಹನವಾದರೆ 24 ಮಕ್ಕಳಂತೆ ಆಯಾ ವಾಹನದ ಸಾಮರ್ಥ್ಯಕ್ಕಿಂತ ಎರಡರಷ್ಟು ಮಕ್ಕಳನ್ನು ಹಾಕಬೇಕು. ಅದಕ್ಕಿಂತ ಹೆಚ್ಚು ಮಕ್ಕಳನ್ನು ಹಾಕುತ್ತಿದ್ದಾರೆ.

ಒಂದು ವಾರದಲ್ಲಿ 264 ಪ್ರಕರಣಗಳನ್ನು ದಾಖಲಿಸಲಾಗಿದೆ. ವಾಹನದ ಸಾಮಾರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಹಾಕಿದ, ಹಳದಿ ಬಣ್ಣ ಇಲ್ಲದ ಖಾಸಗಿ ವಾಹನಗಳ ಮೇಲೆಯೇ ಹೆಚ್ಚು ಕೇಸುಗಳನ್ನು ದಾಖಲಿಸಲಾಗಿದೆ. ಶಾಲಾ ವಾಹನಗಳು ಪ್ರತ್ಯೇಕ ಅನುಮತಿ ಪಡೆಯಬೇಕು. ಆದರೆ ಬಹುತೇಕ ವಾಹನಗಳನ್ನು ಹಾಗೆಯೇ ಓಡಿಸುತ್ತಿದ್ದಾರೆ. ಹೆಚ್ಚಾಗಿ ಓಮ್ನಿಗಳು ಬಳಕೆಯಾಗುತ್ತಿವೆ. ಅಂಥ ವಾಹನಗಳು ಕಂಡುಬಂದರೆ ಕ್ರಮ ಕೈಗೊಳ್ಳಲಿದ್ದೇವೆ.

-ಎಂ.ಎ. ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ ವಿಭಾಗ)

**************************************************************

ನಿಯಮ ಉಲ್ಲಂಘಿಸಿಲ್ಲ...

ನಮ್ಮ ಸಂಘಟನೆ ಅಡಿಯಲ್ಲಿ 16 ಸಾವಿರ ವಾಹನಗಳಿವೆ. ಶಾಲಾ ಮಾಲಿಕತ್ವದ ವಾಹನಗಳ ಶುಲ್ಕಕ್ಕೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಇದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಶುಲ್ಕ ವಿಧಿಸಲು ಕಾರಣ ಬೆಲೆ ಏರಿಕೆ. ದಿನಬಳಕೆ ವಸ್ತುಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯೂ ಗಗನಕ್ಕೇರಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ 16 ಷರತ್ತುಗಳನ್ನು ಹಾಕಿದೆ. ಅದರಲ್ಲಿ 15 ವಿಷಯಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಅನುಮತಿ ನಿರಾಕರಿಸಿದ್ದಾರೆ. ಸರ್ಕಾರದ ವಾಹನಗಳಿಗೆ ಸಾಮರ್ಥ್ಯ ದೃಢೀಕರಣ ಪತ್ರದ (ಎಫ್‌ಸಿ) ಆಧಾರದ ಮೇಲೆ ಅನುಮತಿ ನೀಡುತ್ತಿದ್ದಾರೆ. 

ಅದೇ ರೀತಿ ಖಾಸಗಿ ಶಾಲಾ ವಾಹನಗಳಿಗೂ ನೀಡಬೇಕು. ಶಿಕ್ಷಣ ಸಂಸ್ಥೆಗಳ ವಾಹನಗಳಿಗೆ ಹಾಕುವ ತೆರಿಗೆ ಪ್ರಮಾಣವನ್ನೇ ನಮ್ಮ ವಾಹನಗಳಿಗೂ ನಿಗದಿಪಡಿಸಬೇಕು. 7 ಸೀಟಿನ ವಾಹನದಲ್ಲಿ 12, ಆಟೊದಲ್ಲಿ ಆರು ಮಕ್ಕಳನ್ನು ಹಾಕಬೇಕು ಎಂಬ ನಿಯಮವಿದೆ. ಆದರೆ ಕೆಲವು ಚಾಲಕರು ಹೆಚ್ಚು ಮಕ್ಕಳನ್ನು ಹಾಕುತ್ತಿರುವ ಬಗ್ಗೆ ಆರೋಪಗಳಿವೆ. ಸಂಘಟನೆ ಇದನ್ನು ಸರಿಪಡಿಸುತ್ತದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಯಾವುದೇ ಹೊಸ ನಿಯಮ ಜಾರಿಗೆ ತಂದರೂ ಅದನ್ನು ಪಾಲಿಸಲು ಸಿದ್ಧ.  

-ಪಿ.ಎಸ್. ಷಣ್ಮುಗಂ

ಅಧ್ಯಕ್ಷರು, ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.