ಭಾನುವಾರ, ಜೂನ್ 20, 2021
20 °C

ಸುಲಿಗೆ ನಿಯಂತ್ರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಖಾಸಗಿ ಸಂಸ್ಥೆಗಳು ವಿಪರೀತ ಡೊನೇಷನ್ ಪಡೆಯುವುದು, ಪೋಷಕರನ್ನು ಸುಲಿಗೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಹಾಗೂ ಶಾಲಾ ದಾಖಲಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಒತ್ತಾಯಿಸಿದರು.ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಅರ್ಜಿ, ಮಾಹಿತಿ ಕೈಪಿಡಿಗಳನ್ನು ದುಬಾರಿ ಬೆಲೆಗೆ ಮಾರಲಾಗುತ್ತಿದೆ. ಅಲ್ಲದೇ ಅದೇ ಶಾಲೆಯಲ್ಲಿಯೇ ಸಮವಸ್ತ್ರ ನೀಡಲಾಗುತ್ತದೆ. ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ನಗರದ ಜನತೆಯನ್ನು ನಿರಂತರವಾಗಿ ಶೋಷಣೆ ನಡೆಸಲಾಗುತ್ತಿದೆ. ಹಾಗಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಅವರು ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ದೂರಿದರು.ನಗರದ ಹಿಂದುಳಿದ ಪ್ರದೇಶದ ಜನರಿಗೆ ಇಂಥ ಪ್ರತಿಷ್ಠಿತ ಖಾಸಗಿ ಶಾಲೆಗಳು ಗಗನಕುಸುಮವಾಗಿವೆ. ಆದ್ದರಿಂದ, ಈ ಖಾಸಗಿ ಶಾಲೆಗಳು ಅಲ್ಲಿನ ಮಕ್ಕಳನ್ನೂ ದಾಖಲು ಮಾಡಿಕೊಳ್ಳಬೇಕು. ಶಾಲೆಗೆ ತೆರಳಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.ಇಂಥ ಸುಲಿಗೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರವಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಇದರ ಸದಸ್ಯ ಕಾರ್ಯದರ್ಶಿಯೂ ಹೌದು. ಇದರ ನಿಯಮಾವಳಿ ಪ್ರಕಾರ ನಗರದ ದುರ್ಬಲರು, ಬಡವರು ವಾಸಿಸುವ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣಕ್ಕೆ ಖಾಸಗಿ ಪ್ರತಿಷ್ಠಿತ ಶಾಲೆಗಳು ಅವಕಾಶ ಕಲ್ಪಿಸಬೇಕು.

 

ಪ್ರತಿ ವಿದ್ಯಾರ್ಥಿಯಿಂದ ಪಡೆಯಬೇಕಾದ ಶುಲ್ಕಕ್ಕೂ ಗರಿಷ್ಠಮಿತಿಯಿದೆ. ಅಲ್ಲದೇ ಪ್ರವೇಶ ವೇಳಾಪಟ್ಟಿ ಪ್ರಕಾರ ಏ. 10 ಲಭ್ಯವಿರುವ ಸೀಟುಗಳ ಸಂಖ್ಯೆ ಪ್ರಕಟಿಸಬೇಕು. ಏ. 20ರಿಂದ 30ರವರೆಗೆ ಅರ್ಜಿ ವಿತರಿಸಬೇಕು. ಮೇ 3ಕ್ಕೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು.ಮೇ 15ಕ್ಕೆ ಪ್ರಥಮ ಪಟ್ಟಿಯಲ್ಲಿರುವವರು ಪ್ರವೇಶ ಪಡೆಯಲು ಕೊನೆಯ ದಿನ. 16ರಂದು ದ್ವಿತೀಯ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಮೇ 20ರಂದು ಪ್ರವೇಶ ಪಡೆಯಲು ಕೊನೆಯ ದಿನ ನಿಗದಿಪಡಿಸಬೇಕು ಎಂದು ಇದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಆರೋಪಿಸಿದರು.ಪಕ್ಷದ ಅಧ್ಯಕ್ಷ ಟಿ. ದಾಸಕರಿಯಪ್ಪ ಮಾತನಾಡಿ, ಶಿಕ್ಷಣದ ವಾಣಿಜ್ಯೀಕರಣ ಸಲ್ಲದು. ಈ ನಿಟ್ಟಿನಲ್ಲಿ ನಗರದ ಜಾತ್ರೆ ಕಳೆದ ಮೇಲೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಡಳಿತ ನಗರದ ಎಲ್ಲ ಖಾಸಗಿ ಶಾಲೆಗಳ ಆಡಳಿತಮಂಡಳಿ ಹಾಗೂ ಸಾರ್ವಜನಿಕರ ಸಭೆ ಕರೆದು ಈ ಸಮಸ್ಯೆ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಚ್.ಸಿ. ಗುಡ್ಡಪ್ಪ, ಬಿ. ದಾದಾಪೀರ್, ನರೇಂದ್ರ ಪವಾರ್, ಕೆ.ಎ. ಪಾಪಣ್ಣ, ಕುಂಚೂರು ರೆಹೆಮಾನ್ ಸಾಬ್, ಟಿ. ಅಸ್ಗರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.