ಬುಧವಾರ, ಏಪ್ರಿಲ್ 21, 2021
23 °C

ಸುವರ್ಣಾ ಜಾಧವರನ್ನು ಬೆಂಬಲಿಸಲು ಬಿಜೆಪಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾನಗರಪಾಲಿಕೆಯ 47ನೇ ವಾರ್ಡಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದು, ಬಿಜೆಪಿಯಿಂದ ಸುವರ್ಣಾ ಜಾಧವ, ಕಾಂಗ್ರೆಸ್‌ನಿಂದ ಲಾಯ್ಡ ಡೊಮೆನಿಕ್ ಆಂಟೊನಿಯಾ ಹಾಗೂ ಜೆಡಿಎಸ್‌ನಿಂದ ಫತೇಶ್ ಯರಗಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಸಹಕರಿಸುವಂತೆ ಕೋರಿ ಪಕ್ಷದ ಮುಖಂಡರು ಉಳಿದ ಪಕ್ಷಗಳಿಗೆ ಮನವಿ ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಆಯ್ಕೆ: 47ನೇ ವಾರ್ಡಿನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಯರಗಟ್ಟಿ ಸ್ಪರ್ಧಿಸಲಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಫತೇಶ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಹಿಂದೆ ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ದುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲು ಸಭೆ ತೀರ್ಮಾನಿಸಿತು. ಪಕ್ಷದ ಮುಖಂಡರಾದ ಬಸವರಾಜ ಹೊರಟ್ಟಿ, ಆಲ್ಕೋಡು ಹನುಮಂತಪ್ಪ ಇತರರು ಈ ಸಂದರ್ಭ ಹಾಜರಿದ್ದರು.

ಫತೇಶ್ ಜೊತೆಗೆ ದಿವಂಗತ ಫಿರ್ದೋಸ್ ಕೊಣ್ಣೂರ ಅವರ ಪತ್ನಿ ಹಾಗೂ ಫಿರ್ದೋಸ್ ಸಹೋದರ  ಪರ್ವೇಜ್ ಹೆಸರುಗಳು ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ಕೇಳಿಬಂದಿದ್ದವು.

ಬಿಜೆಪಿಯಿಂದ ಮತ್ತೊಮ್ಮೆ ಮನವಿ: ಉಪ ಚುನಾವಣೆಯಲ್ಲಿ ಸುವರ್ಣಾ ಜಾಧವ ಅವರನ್ನು ಬೆಂಬಲಿಸುವಂತೆ ಕೋರಿ ಬಿಜೆಪಿ ಜಿಲ್ಲಾ (ಮಹಾನಗರ) ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಮುಖಂಡರಲ್ಲಿ ಮನವಿ ಮಾಡಿದರು.

`ಕಳೆದ ವರ್ಷ ಅಂಚಟಗೇರಿ ಉಪಚುನಾವಣೆ ಸಂದರ್ಭ ಬಿಜೆಪಿ ಮಾನವೀಯ ದೃಷ್ಟಿಯಿಂದ ಕಾಂಗ್ರೆಸ್‌ಗೆ ಅವಕಾಶ ಬಿಟ್ಟುಕೊಟ್ಟಿತ್ತು. ಜಾಧವ ಅವರ ಪ್ರಕರಣ ಕೂಡ ಅದೇ ರೀತಿಯದ್ದಾಗಿದ್ದು, ಇಲ್ಲಿ ಪಕ್ಷ ಭೇದ ಮರೆತು ಮಾನವೀಯ ದೃಷ್ಟಿಯಿಂದ ವರ್ತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಮುಖಂಡರಿಗೂ ಮತ್ತೊಮ್ಮೆ ಮನವಿ ಮಾಡಿದ್ದು, ಬೆಂಬಲ ಸಿಗುವ ಭರವಸೆ ಇದೆ~ ಎಂದು ಟೆಂಗಿನಕಾಯಿ ತಿಳಿಸಿದರು.

ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದರೆ ಬೆಂಬಲ: ಜೆಡಿಎಸ್

`ಸುವರ್ಣಾ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಮಾತ್ರ ಈ ಕುರಿತು ಪರಿಶೀಲಿಸಲಾಗುವುದು~ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಜಿಲ್ಲಾ (ನಗರ) ಘಟಕದ ಅಧ್ಯಕ್ಷ ರಾಜಣ್ಣ ಕೊರವಿ `ಸುವರ್ಣಾ ಅವರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದರಿಂದ ನಾವು ಪಕ್ಷದ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುತ್ತಿದ್ದೇವೆ. ಒಂದು ವೇಳೆ ಸುವರ್ಣಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಅವರನ್ನು ಬೆಂಬಲಿಸಲು ಪರಿಶೀಲಿಸಲಾಗುವುದು~ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.