ಭಾನುವಾರ, ಮೇ 9, 2021
25 °C
ಇಂಗ್ಲೆಂಡ್-ಶ್ರೀಲಂಕಾ ನಡುವಿನ ಪಂದ್ಯ ಇಂದು

ಸೆಮಿಫೈನಲ್‌ನತ್ತ ಆತಿಥೇಯರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮೊದಲ ಪಂದ್ಯದಲ್ಲಿ ಗೆಲುವು ಪಡೆದು ವಿಶ್ವಾಸ ಹೆಚ್ಚಿಸಿಕೊಂಡಿರುವ ಆತಿಥೇಯ ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸುವ ಗುರಿ ಹೊಂದಿದೆ.ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ `ಎ' ಗುಂಪಿನ ಈ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 48 ರನ್‌ಗಳಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿ ಎರಡು ಅಂಕಗಳನ್ನು ಹೊಂದಿದೆ. ಆದರೆ, ಲಂಕಾ ತಂಡ ನ್ಯೂಜಿಲೆಂಡ್ ಎದುರು ಸೋಲು ಕಂಡಿತ್ತು. ಇನ್ನು ಪಾಯಿಂಟ್ ಖಾತೆ ತೆರೆಯದ ಏಂಜಲೊ ಮ್ಯಾಥ್ಯುಸ್ ಸಾರಥ್ಯದ ಲಂಕಾ ಈ ಸಲದ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುವ ಕಾತರದಲ್ಲಿದೆ.ಆಸೀಸ್ ಎದುರಿನ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಇಯಾನ್ ಬೆಲ್, ಜೋನಾಥನ್ ಟ್ರಾಟ್ ಮತ್ತು ರವಿ ರಾಂಪಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ದರು. ಪ್ರಮುಖ ಬೌಲರ್‌ಗಳಾದ ಜೇಮ್ಸ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಟಿಮ್ ಬ್ರೆಸ್ನಿನ್ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಆದ್ದರಿಂದ ಲಂಕಾ ಎದುರಿನ ಪಂದ್ಯದ್ಲ್ಲಲೂ ಆತಿಥೇಯ ತಂಡ ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿದೆ.ಲಂಕಾ ಬ್ಯಾಟಿಂಗ್ ವೈಫಲ್ಯದಿಂದ ಪರದಾಡುತ್ತಿದೆ. ಕಿವೀಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಲಂಕಾದ ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ಮುಟ್ಟದೇ ಪೆವಿಲಿಯನ್ ಸೇರಿದ್ದು ಇದಕ್ಕೆ ಸಾಕ್ಷಿ. ಮಾಜಿ ನಾಯಕ ಕುಮಾರ ಸಂಗಕ್ಕಾರ ಮಾತ್ರ ಅರ್ಧಶತಕ ಗಳಿಸಿದ್ದರು. ಆದ್ದರಿಂದ ನಾಲ್ಕರ ಘಟ್ಟದ ಪ್ರವೇಶದ ಆಸೆ ಜೀವಂತವಾಗಿ ಉಳಿಯಬೇಕಾದರೆ, ಲಂಕಾ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿಸಿಕೊಂಡು ಇಂಗ್ಲೆಂಡ್ ಎದುರು ಉತ್ತಮ ಪ್ರದರ್ಶನ ತೋರುವುದು ಅನಿವಾರ್ಯ.ಲಂಕಾ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ವೇಗಿ ಲಸಿತ್ ಮಾಲಿಂಗ ಹಿಂದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದರೆ, ಶಮಿಂದಾ ಎರಂಗಾ ಎರಡು ವಿಕೆಟ್ ಕಬಳಿಸಿದ್ದರು. ಈ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜೂನ್ 17ರಂದು ಆಸ್ಟ್ರೇಲಿಯಾ ಎದುರು ಆಡಲಿದೆ. ಇಂಗ್ಲೆಂಡ್ ಎದುರು ಜಯ ಪಡೆದರೆ ಸೆಮಿಫೈನಲ್ ಕನಸು ಕಾಣಬಹುದು. ಆದ್ದರಿಂದ ಈ ಪಂದ್ಯ ಲಂಕಾ ಪಾಲಿಗೆ `ಮಾಡು ಇಲ್ಲವೇ ಮಡಿ' ಎನ್ನುವಂತಾಗಿದೆ.ತಂಡಗಳು ಇಂತಿವೆ:

ಶ್ರೀಲಂಕಾ:
ಏಂಜಲೊ ಮ್ಯಾಥ್ಯುಸ್, ದಿನೇಶ್ ಚಾಂಡಿಮಾಲ್, ತಿಲಕರತ್ನೆ ದಿಲ್ಯಾನ್, ಶಮಿಂದಾ ಎರಂಗಾ, ರಂಗನಾ ಹೆರಾತ್, ಮಾಹೇಲ ಜಯವರ್ಧನೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಜೀವನ್ ಮೆಂಡಿಸ್, ಕುಶಾಲ್ ಪೆರೆರಾ, ಕುಮಾರ ಸಂಗಕ್ಕಾರ, ಸಚಿತ್ರಾ ಸೇನಾನಾಯಕೆ ಹಾಗೂ ಲಾಹಿರು ತಿರುಮನ್ನೆ.ಇಂಗ್ಲೆಂಡ್: ಅಲಸ್ಟರ್ ಕುಕ್ (ನಾಯಕ), ರವಿ ಬೋಪಾರ, ಸ್ಟುವರ್ಟ್ ಬ್ರಾಡ್, ಸ್ಟೀವನ್ ಫಿನ್, ಜೊಯ್ ರೂಟ್, ಜೇಮ್ಸ ಟ್ರೆಡ್‌ವೆಲ್, ಕ್ರಿಸ್ ವೊಕಸ್, ಜೇಮ್ಸ ಆ್ಯಂಡರ್ಸನ್, ಇಯಾನ್ ಬೆಲ್, ಟಿಮ್ ಬ್ರೆಸ್ನಿನ್, ಜೊಸ್ ಬಟ್ಲರ್, ಎಯೊನ್ ಮಾರ್ಗನ್, ಗ್ರೇಮ್ ಸ್ವಾನ್ ಮತ್ತು ಜೋನಾಥನ್ ಟ್ರಾಟ್.

ಪಂದ್ಯದ ಆರಂಭ: ಸಂಜೆ: 5.30

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.