ಭಾನುವಾರ, ಮಾರ್ಚ್ 7, 2021
22 °C

ಸೇನಾ ಶಕ್ತಿ, ಸಾಂಸ್ಕೃತಿಕ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಶಕ್ತಿ, ಸಾಂಸ್ಕೃತಿಕ ವೈಭವ

ನವದೆಹಲಿ (ಪಿಟಿಐ): ದೇಶದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈಭವ ಮತ್ತು  ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳು  ದೆಹಲಿಯ ರಾಜಪಥದಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅನಾವರಣಗೊಂಡವು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ 90 ನಿಮಿಷ ನಡೆದ ಕಾರ್ಯಕ್ರಮದ ಸೊಬಗನ್ನು ಕಣ್ತುಂಬಿಕೊಂಡರು. ಸಮಾರಂಭಕ್ಕೆ ಸಾಕ್ಷಿಯಾಗಲು  ರಾಜಪಥದ ಇಕ್ಕೆಲಗಳಲ್ಲಿ ಸಹಸ್ರಾರು ಜನ  ಸೇರಿದ್ದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಕುಳಿತಿದ್ದ ಒಲಾಂಡ್‌ ಕಾರ್ಯಕ್ರಮವನ್ನು ಕುತೂಹಲದಿಂದ ವೀಕ್ಷಿಸಿದರು.  ಪ್ರಧಾನಿ ಅವರು ಹಲವು ಸಂದರ್ಭಗಳಲ್ಲಿ  ಫ್ರಾನ್ಸ್‌ ಅಧ್ಯಕ್ಷರಿಗೆ ಕಾರ್ಯಕ್ರಮದ ಬಗ್ಗೆ ವಿವರಿಸುತ್ತಿದ್ದುದು ಕಂಡುಬಂತು.ಮೋದಿ ಅವರು ಕಂದು ಬಣ್ಣದ ಬಂದ್‌ಗಲಾ ಕೋಟು ಮತ್ತು ಗುಜರಾತಿನ ಸಾಂಪ್ರದಾಯಿಕ ರುಮಾಲು ತೊಟ್ಟು ಗಮನ ಸೆಳೆದರೆ, ಒಲಾಂಡ್‌ ಬಿಳಿ ಶರ್ಟ್‌ ಮತ್ತು ಕಪ್ಪು ಕೋಟು ಧರಿಸಿದ್ದರು.ರಾಜಪಥದಲ್ಲಿ ಹೆಜ್ಜೆಯಿಟ್ಟ ಫ್ರಾನ್ಸ್‌ ಸೇನೆಯ ತಂಡ ಇತಿಹಾಸ ನಿರ್ಮಿಸಿತು. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಿದೇಶಿ ಸೇನಾ ತಂಡ ಭಾಗವಹಿಸಿದ್ದು ಇದೇ ಮೊದಲು. ಲೆಫ್ಟಿನೆಂಟ್‌ ಕರ್ನಲ್‌ ಪಾಲ್‌ ಬರಿ ನೇತೃತ್ವದಲ್ಲಿ ಫ್ರಾನ್ಸ್‌ ಸೇನೆಯ 35ನೇ ಪದಾತಿದಳದ 76 ಸಿಬ್ಬಂದಿ ತಮ್ಮ ದೇಶದ ಸೇನೆಯ ಶಿಸ್ತಿನ ಪರಿಚಯ ಮಾಡಿಕೊಟ್ಟರು.

ಲೆಫ್ಟಿನೆಂಟ್‌ ಜನರಲ್‌ ರಾಜನ್‌ ರವೀಂದ್ರನ್‌ ನೇತೃತ್ವದಲ್ಲಿ ಭಾರತೀಯ ಸೇನೆಯ ಹಲವು ತುಕಡಿಗಳು ಮತ್ತು ಪೊಲೀಸ್‌ ತಂಡಗಳು ಒಂದರ ಹಿಂದೆ ಒಂದರಂತೆ ಹಾದು ಹೋದವು.26 ವರ್ಷಗಳ ಬಿಡುವಿನ ಬಳಿಕ ಭಾರತೀಯ ಸೇನೆಯ ಶ್ವಾನದಳ ಕೂಡಾ ಶಿಸ್ತಿನ ಹೆಜ್ಜೆಯಿಟ್ಟಿತು. ಸೇನಾ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳು ಆಗಸದಲ್ಲಿ ಚಮತ್ಕಾರ ತೋರಿದವು. ಇದಕ್ಕೂ ಮುನ್ನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಜತೆ ರಾಜಪಥಕ್ಕೆ ಬಂದ ಒಲಾಂಡ್‌ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು. ಹೋದ ವರ್ಷ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಮುಖ್ಯ ಅತಿಥಿಯಾಗಿದ್ದರು.ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅಲ್ಲದೆ ಇತರ ರಾಜಕೀಯ ನಾಯಕರು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡರು. ಸ್ಮಾರಕಕ್ಕೆ ಗೌರವ: ಪಥಸಂಚಲನದ ಆರಂಭಕ್ಕೆ ಮುನ್ನ ಪ್ರಧಾನಿ ಮೋದಿ, ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮತ್ತು ಸೇನಾ ಪಡೆಯ ಮುಖ್ಯಸ್ಥರು ಇಂಡಿಯಾ ಗೇಟ್‌  ಬಳಿ ‘ಅಮರ್‌ ಜವಾನ್‌ ಜ್ಯೋತಿ’ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

 

ಬಿಗಿ ಭದ್ರತೆ:  ಉಗ್ರರ ದಾಳಿ ಒಳಗೊಂಡಂತೆ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಕಾರ್ಯಕ್ರಮಕ್ಕೆ ಭಾರಿ ಭದ್ರತೆ ಒದಗಿಸಲಾಗಿತ್ತು.  ಪೊಲೀಸರು ಮತ್ತು ಸೇನೆಯ ಭದ್ರ ಕೋಟೆಯಾಗಿ ರಾಜಧಾನಿ ದೆಹಲಿ ಬದಲಾಗಿತ್ತು. ಗಣರಾಜ್ಯೋತ್ಸವ ದಿನ ರಾಜಧಾನಿಯ ಪ್ರಮುಖ ತಾಣಗಳ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿತ್ತು.

ವಿಶ್ವದ ಮುಂದೆ ಸೇನಾ ಬಲ

ದೇಶವು ಎಂದಿನಂತೆ ಈಬಾರಿಯೂ ಪಥಸಂಚಲದಲ್ಲಿ  ತನ್ನ ಸೇನಾ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಟ್ಟಿತು. ಬ್ರಹ್ಮೋಸ್‌ ಕ್ಷಿಪಣಿ, ಆಕಾಶ್‌ ಶಸ್ತ್ರಾಸ್ತ ವ್ಯವಸ್ಥೆ,ಟಿ–90 ಭೀಷ್ಮಾ ಟ್ಯಾಂಕ್‌, ರಾಕೆಟ್‌ ಉಡಾವಣಾ ವಾಹನಗಳನ್ನು ಪ್ರದರ್ಶಿಸಲಾಯಿತು. ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಜತೆಗೆ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಸ್ವಚ್ಛ ಭಾರತ, ಡಿಜಿಟಲ್‌ ಇಂಡಿಯಾ ಮತ್ತು ಹಸಿರು ಇಂಧನಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರಗಳೂ ಇದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.