ಶನಿವಾರ, ಜೂನ್ 19, 2021
28 °C

ಸೊಗಸುಗಾರ ಚಿತ್ತಚೋರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ: ಮಿಸ್ಟರ್ ನೂಕಯ್ಯ (ತೆಲುಗು)

`ಬಿಂ ದಾಸ್~ ಮೂಲಕ ತೆಲುಗು ಚಿತ್ರರಂಗದಾಚೆಗೂ ಸುದ್ದಿ ಮಾಡಿದ್ದ ಮಂಚು ಮನೋಜ್ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಇದು. `ಇಲ್ಲ ಕ್ಯಾಪ್ಷನ್, ಬರಿ ಆ್ಯಕ್ಷನ್~ ಎಂಬ ಅಡಿಬರಹ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ. ಅಬ್ಬರದ ಹೊಡೆದಾಟ, ಅದ್ದೂರಿ ಎಫೆಕ್ಟ್‌ಗಳು, ಅಡಿಗಡಿಗೂ ತಿರುವು ಪಡೆಯುವ ಕತೆ, ಅಂದದ ದೃಶ್ಯಗಳು ಚಿತ್ರಕ್ಕೆ ಸೊಗಸು ತಂದಿತ್ತಿವೆ.ಅಪ್ಪ ಇಟ್ಟ ಹೆಸರು ನೂಕಯ್ಯ. ಆದರೆ ಬದಲಾಗಿದ್ದು ನೋಕಿಯಾ ಆಗಿ. ಅದು ನಾಯಕನ ವರಸೆ. ಆತ ಚೋರ ಕುಮಾರ. ಮೊಬೈಲ್ ಕದಿಯುವುದು ಹವ್ಯಾಸ. ಜತೆಗೆ ಪರೋಪಕಾರದ ಮನಸ್ಸು. ಕಳ್ಳ ಮೊಬೈಲ್ ಮಾತ್ರ ಕದಿಯುವುದಿಲ್ಲ ಹುಡುಗಿಯ ಹೃದಯವನ್ನೂ ಸೂರೆ ಮಾಡುತ್ತಾನೆ. ಆಕೆ ಪಬ್ ಒಂದರಲ್ಲಿ ಕೆಲಸ ಮಾಡುವಾಕೆ. ಇಬ್ಬರೂ ಬದುಕಲು ಹಣ ಬೇಕು.ಇದರ ಮಗ್ಗುಲಿಗೆ ಇನ್ನೊಂದು ಕತೆ. ಅನು ಮತ್ತು ಕಿರಣ್ ಪರಸ್ಪರ ಪ್ರೀತಿಸಿ ವಿವಾಹವಾದವರು. ಆದರೆ ಕಿರಣ್ ಬೆಂಗಳೂರಿಗೆ ತೆರಳುವಾಗ ಅಪಹರಣಕ್ಕೊಳಗಾಗುತ್ತಾನೆ. ಎರಡು ಕೋಟಿ ರೂಪಾಯಿ ತರುವಂತೆ ಅನು ಮೇಲೆ ಒತ್ತಡ ಹೇರಲಾಗುತ್ತದೆ. ಒಂದು ಹಂತದಲ್ಲಿ ಎರಡೂ ಕತೆಗಳು ಒಂದೇ ಹಳಿಯ ಮೇಲೆ ಚಲಿಸಲು ತೊಡಗುತ್ತವೆ. ಆ ಎರಡು ಕೋಟಿ ಹಣ ಯಾರ‌್ಯಾರ ಜೀವನದಲ್ಲಿ ಏನೇನು ಆಟ ಆಡುತ್ತದೆ? ಕೊನೆಗೂ ಕಿರಣ್ ಅನುಗೆ ದೊರೆಯುವನೇ? ನೂಕಯ್ಯನ ಪ್ರೇಮ ಏನಾಗುತ್ತದೆ ಎಂಬುದು ಚಿತ್ರದ ಉತ್ತರಾರ್ಧ.ಸಾಹಸ ನಿರ್ದೇಶನ ಸ್ವತಃ ಮಂಚು ಮನೋಜ್ ಅವರದ್ದು. ಪ್ರೇಕ್ಷಕರು ಎವೆ ಮಿಟುಕಿಸದೆ ನೋಡಬಹುದಾದ ಹೊಡೆದಾಟದ ದೃಶ್ಯಗಳು ಚಿತ್ರದಲ್ಲಿವೆ. ಡ್ಯೂಪ್ ಬಳಸದೆ ಮೈ ನವಿರೇಳಿಸುವ ಸಾಹಸ ಪ್ರದರ್ಶಿಸಿರುವುದು ಮನೋಜ್ ಅವರ ಅಗ್ಗಳಿಕೆ. ತೆಲುಗಿನ ಮತ್ತೊಬ್ಬ ನಟ ರವಿತೇಜ ಅವರ ಹಾಸ್ಯಮಯ ನಾಯಕ ಪಾತ್ರಗಳನ್ನು ಮನೋಜ್ ಅಭಿನಯ ನೆನಪಿಗೆ ತರಬಲ್ಲದು. ಆದರೆ ಇವರ ವರಸೆ ಅವರಿಗಿಂತಲೂ ಭಿನ್ನ. ಅನು ಪಾತ್ರದಲ್ಲಿ  ಮುದ್ದು ಮುದ್ದಾಗಿ ಕಾಣುವ ಕೃತಿ ಕರಬಂಧ ಅಭಿನಯದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ನೂಕಯ್ಯನ ಪ್ರೇಯಸಿಯಾಗಿರುವ ಸಾನಾ ಖಾನ್ ಗ್ಲಾಮರ್‌ಗೆ ಮೀಸಲು. ಪೋಷಕ ಪಾತ್ರದಲ್ಲಿ ಆಹುತಿ ಪ್ರಸಾದ್, ಪರುಚೂರಿ ವೆಂಕಟೇಶ್ವರ ರಾವ್, ವೆನ್ನೆಲ ಕಿಶೋರ್ ಉತ್ತಮ ಸಾಥ್ ನೀಡಿದ್ದಾರೆ. ಖಳನಟನಾಗಿ ಮುರಳಿ ಶರ್ಮ ಗಮನ ಸೆಳೆಯುತ್ತಾರೆ. ಒಂದರೊಳಗೊಂದು ಕತೆಗಳನ್ನು ಬೆಸೆದಿರುವ ರೀತಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತದೆ. ರಾಜಶೇಖರ್ ಛಾಯಾಗ್ರಹಣ, ನವೀನ್ ಸಂಕಲನ ಉತ್ತಮ ಜುಗಲ್‌ಬಂದಿ. ಮನೋಜ್ ಅಭಿಮಾನಿಗಳಿಗೆ ಹಾಗೂ ಅಪ್ಪಟ ಮನರಂಜನೆ ಬಯಸುವವರಿಗೆ ಯಾವುದೇ ಮೋಸವಿಲ್ಲ.ಚಿತ್ರದಲ್ಲಿ ಆ್ಯಕ್ಷನ್‌ನಷ್ಟೇ ಹಾಸ್ಯಕ್ಕೂ ಪ್ರಾಮುಖ್ಯತೆ ಇದೆ. ಅನುಭವಿ ನಟ ಬ್ರಹ್ಮಾನಂದಂ ಹಾಗೆ ಬಂದು ಹೀಗೆ ಹೋದರೂ ಮನಸ್ಸಿನಲ್ಲಿ ಉಳಿಯುತ್ತಾರೆ. ಮತ್ತೆ ಅವರು ಕಾಣಿಸಿಕೊಳ್ಳಬಹುದು ಎಂಬ ಪ್ರೇಕ್ಷಕರ ಆಸೆಗೆ ನಿರ್ದೇಶಕ ಅನಿ ಕನ್ನೆಗಂಟಿ ತಣ್ಣೀರೆರಚಿದ್ದಾರೆ. ಯುವನ್ ಶಂಕರ್ ರಾಜಾ ಅವರ ಉತ್ತಮ ಸಂಗೀತವಿದ್ದರೂ ಹಾಡುಗಳ ಸಂಖ್ಯೆ ಅತಿಯಾಯಿತು. ಕೆಲವು ದೃಶ್ಯಗಳು ಕೂಡ ಮೇರೆ ಮೀರಿವೆ; ಕತೆಯ ಓಟಕ್ಕೆ ಅಡ್ಡಗಾಲಾಗಿವೆ. ದ್ವಿತೀಯಾರ್ಧವನ್ನು ಅನಗತ್ಯವಾಗಿ ಹಿಂಜಲಾಗಿದೆ. ಉಗುರಲ್ಲಿ ಮುಗಿಸಬಹುದಾದ ಕೆಲಸಕ್ಕೆ ಕೊಡಲಿ ಬಳಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.