ಭಾನುವಾರ, ಜೂಲೈ 5, 2020
23 °C

ಸೋಮ್‌ದೇವ್‌ಗೆ 73ನೇ ರ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮ್‌ದೇವ್‌ಗೆ 73ನೇ ರ್ಯಾಂಕ್

ನವದೆಹಲಿ (ಪಿಟಿಐ): ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ತೋರಿದ ಭಾರತದ ಸೋಮ್‌ದೇವ್ ದೇವವರ್ಮನ್ ಪುರುಷರ ವಿಭಾಗದ ಸಿಂಗಲ್ಸ್‌ನ  ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ  73ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಈ ಮೊದಲು ಅವರು 84ನೇ ಸ್ಥಾನದಲ್ಲಿದ್ದರು. ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಈ ಆಟಗಾರ ಅಗ್ರಶ್ರೇಯಾಂಕದ ರಫೆಲ್ ನಡಾಲ್ ವಿರುದ್ಧ ಭಾರಿ ಪೈಪೋಟಿಯನ್ನು ಒಡ್ಡಿದ್ದರು.ಆದ್ದರಿಂದ ಅವರು 11 ಸ್ಥಾನಗಳಲ್ಲಿ ಜಿಗಿತ ಕಂಡು 73ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸೋಮ್‌ದೇವ್ ಅವರ ಶ್ರೇಷ್ಠ ಸಾಧನೆಯು ಇದಾಗಿದೆ. ಇದೇ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ತೋರಿದ ರೋಹನ್ ಬೋಪಣ್ಣ ಹಾಗೂ ಐಸಾಮ್-ಉಲ್-ಹಕ್-ಖುರೇಷಿ ಕೂಡಾ ರ್ಯಾಂಕಿಂಗ್‌ನಲ್ಲಿ 15ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಈ ಜೋಡಿ ಎಟಿಪಿ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ  ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ ಹಾಗೂ ಎಕ್ಸವೇರ್ ಮಿಲಿಸ್ಸಿ ಜೋಡಿ ಎದುರು ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿತ್ತು. ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡಿರುವ ಭಾರತದ ಸಾನಿಯಾ ಮಿರ್ಜಾ ಎಂಟು ಸ್ಥಾನಗಳ ಜಿಗಿತ ಕಂಡು 99ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಹಾಗೂ ಸಾನಿಯಾ ಮಿರ್ಜಾ ಜೋಡಿ ಪ್ರಶಸ್ತಿ ಗೆದ್ದಿತ್ತು. ಆದ್ದರಿಂದ ಡಬಲ್ಸ್‌ನಲ್ಲಿಯೂ ಸಾನಿಯಾ 33ನೇ ಸ್ಥಾನದಿಂದ 21ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.