ಗುರುವಾರ , ಮೇ 13, 2021
24 °C

ಸೋಲಿಗರಿಗೆ ಕುಡುಗೋಲು ಶಾಪ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ವಿಶ್ವದ ವಿವಿಧೆಡೆ ವಾಸಿಸುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದಲ್ಲಿ ಇಂದಿಗೂ ಸಾಂಪ್ರದಾಯಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಿದೆ. ಪ್ರಕೃತಿಯಲ್ಲಿ ದೊರೆಯುವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಪರಂಪರಾಗತ ಜ್ಞಾನ ಅವರಿಗಿದೆ. ಇಂಥ ಜ್ಞಾನದ ಬಲದಿಂದಲೇ ಗಿರಿಜನರ ಆರೋಗ್ಯವೂ ಸದೃಢವಾಗಿದೆ.ರೋಗ ಬಂದಾಗ ಗಿರಿಜನರು ಆಸ್ಪತ್ರೆಗೆ ಹೋಗುವುದು ಅಪರೂಪ. ಔಷಧೀಯ ಗಿಡಮೂಲಿಕೆ ಬಳಸಿ ರೋಗದ ವಾಸಿಗೆ ಪ್ರಯತ್ನಿಸುತ್ತಾರೆ. ಕಾಯಿಲೆ ಬರುವುದಕ್ಕೆ ಹಾಗೂ ಅದು ಗುಣವಾಗುವುದಕ್ಕೆ ದೈವಗಳ ಪ್ರಭಾವ ಇದೆಯೆಂದು ಅವರು ಬಲವಾಗಿ ನಂಬುತ್ತಾರೆ. ಹೀಗಾಗಿ, ವಂಶವಾಹಿ ಅಸಮತೋಲನದಿಂದ ಕಾಡುವ ರೋಗಗಳ ಬಗ್ಗೆ ಅವರಲ್ಲಿ ಅರಿವು ಅತ್ಯಲ್ಪ.ಸೋಲಿಗರು ಸೇರಿದಂತೆ ಭಾರತದ ಹಲವು ಬುಡಕಟ್ಟು ಜನರು ರಕ್ತಹೀನತೆಯಿಂದ ಬಳಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಹಾರದಲ್ಲಿ ಪೋಷಕಾಂಶದ ಕೊರತೆ ಇದ್ದರೆ ರಕ್ತಹೀನತೆ ಕಾಡುವುದು ಸಹಜ. ವಿಶೇಷವಾಗಿ ಮಹಿಳೆಯರು ರಕ್ತಹೀನತೆಗೆ ತುತ್ತಾಗುವುದು ಹೆಚ್ಚು.ನೀವು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಪೋಡುಗಳಿಗೆ(ಸೋಲಿಗರ ವಾಸಸ್ಥಳ) ಭೇಟಿ ನೀಡಿದರೆ ಸದಾ ಸುಸ್ತಾಗಿದ್ದಂತೆ ಕಾಣುವ ಸೋಲಿಗರು ಕಾಣಸಿಗುತ್ತಾರೆ. ಅವರೊಂದಿಗೆ ಸಂಭಾಷಣೆ ನಡೆಸಿದರೆ ಆಯಾಸ, ಉಸಿರಾಟದ ತೊಂದರೆ, ಕೈಕಾಲು ಊತ, ಬೆನ್ನುನೋವು, ಕೀಲುನೋವಿನ ಸಂಕಟ ಬಿಚ್ಚಿಡುತ್ತಾರೆ. ಪೋಷಕಾಂಶದ ಕೊರತೆಯಿಂದಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಅವರ ನೋವಿನ ಕಥೆ ಕೇಳಿದರೆ ಮರುಕು ಹುಟ್ಟುತ್ತದೆ. ಕುಡುಗೋಲು ಕಣ ರಕ್ತಹೀನತೆಯ (sickle cell anaemia)  ಕುಲುಮೆಯಲ್ಲಿ ಅವರ ಬದುಕು ಬೆಂದು ಹೋಗುತ್ತಿದೆ.ಕೆಂಪು ರಕ್ತಕಣಗಳೇ ಈ ಕಾಯಿಲೆಗೆ ಮೂಲ ಕಾರಣ. ಮೂಲತಃ ವೃತ್ತಾಕಾರದಲ್ಲಿರುವ ಇವುಗಳು ಆಮ್ಲಜನಕದ ಕೊರತೆಯಿಂದಾಗಿ ಕುಡುಗೋಲಿನ ಆಕಾರ ತಳೆಯುತ್ತವೆ. ಈ ರೋಗ ಕಾಣಿಸಿಕೊಂಡ ವ್ಯಕ್ತಿ ದೀರ್ಘಕಾಲದವರೆಗೆ ಬದುಕುವುದಿಲ್ಲ. ಆತನ ಆಯಸ್ಸು ಸರಾಸರಿ 20ರಿಂದ 25 ವರ್ಷದೊಳಗೆ ಕೊನೆಗೊಳ್ಳುತ್ತದೆ.ಆಫ್ರಿಕಾದ ಬುಡಕಟ್ಟು ಜನರಲ್ಲಿ ಈ ಕುಡುಗೋಲು ಕಣ ರಕ್ತಹೀನತೆ ಕಾಯಿಲೆ ಇರುವುದನ್ನು ಮೊದಲ ಬಾರಿಗೆ ಪತ್ತೆಹಚ್ಚಲಾಯಿತು. ನೂರಾರು ವರ್ಷಗಳ ವಲಸೆ ಪರಿಣಾಮ ವಿಶ್ವದ ವಿವಿಧ ದೇಶದಲ್ಲಿರುವ ಬುಡಕಟ್ಟು ಜನರಿಗೆ ಈ ಕಾಯಿಲೆ ಹರಡಿರುವುದು ಸಂಶೋಧನೆಗಳಿಂದ ಬಯಲಾಗಿದೆ. ಅರಬ್, ಗ್ರೀಸ್, ಇಟಲಿ, ಲ್ಯಾಟಿನ್ ಅಮೆರಿಕ, ಮೆಡಟರೇನಿಯನ್ ಪ್ರದೇಶ ಸೇರಿದಂತೆ ಭಾರತದ ಬುಡಕಟ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿರುವುದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗಿದೆ. ಅರಿವಿಗೆ ಬಾರದಂತೆಯೇ ಹರಡುವ ಈ ವಂಶವಾಹಿ ಕಾಯಿಲೆ ಸೋಲಿಗರಿಗೂ ಬಾಧಿಸುತ್ತಿದೆ.ಚಾಮರಾಜನಗರ ಜಿಲ್ಲೆಯಲ್ಲಿರುವ ಪೋಡುಗಳ ಸಂಖ್ಯೆ 148. ಸುಮಾರು 40 ಸಾವಿರದಷ್ಟು ಸೋಲಿಗರು ಇದ್ದಾರೆ. ನಾಲ್ಕು ತಾಲ್ಲೂಕಿನಲ್ಲಿಯೂ ಹಂಚಿಹೋಗಿದ್ದಾರೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ 22 ಪೋಡುಗಳಲ್ಲಿ 7,500 ಮಂದಿ ಇದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ 8,500ಕ್ಕೂ ಹೆಚ್ಚು ಸೋಲಿಗರು ಇದ್ದಾರೆ.ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ(ವಿಜಿಕೆಕೆ)ದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಸೋಲಿಗರಿಗೆ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಇಲ್ಲಿಯವರೆಗೆ ಈ ಕೇಂದ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಸೋಲಿಗರ ತಪಾಸಣೆ ನಡೆಸಲಾಗಿದೆ. ಇದರಲ್ಲಿ 211 ಮಂದಿ ಕುಡುಗೋಲು ಕಣ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಕೇಂದ್ರದ ಅಂಕಿ-ಅಂಶದ ಪ್ರಕಾರ ಪ್ರತಿ ಒಂದು ಸಾವಿರ ಸೋಲಿಗರಲ್ಲಿ 20 ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.`ಬುಡಕಟ್ಟು ಜನರಲ್ಲಿ ಕುಡುಗೋಲು ಕಣ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ರೋಗಿಗಳು ಅಪಾಯಕ್ಕೆ ತುತ್ತಾಗುತ್ತಾರೆ. ಕಬ್ಬಿಣಾಂಶ ಇರುವ ಆಹಾರ ಸೇವಿಸಿದರೆ ರಕ್ತಹೀನತೆ ಕಾಡುವುದಿಲ್ಲ. ಕಾಯಿಲೆಯಿಂದ ಬಳಲುತ್ತಿರುವ ಸೋಲಿಗರ ತಪಾಸಣೆ ನಡೆಸಿ ಕೇಂದ್ರದಿಂದಲೇ ಫೋಲಿಕ್ ಆಮ್ಲಯುಕ್ತ ಮಾತ್ರೆ ಪೂರೈಸಲಾಗುತ್ತಿದೆ~ ಎನ್ನುತ್ತಾರೆ ವಿಜಿಕೆಕೆಯ ಸಂಸ್ಥಾಪಕ ಡಾ.ಸುದರ್ಶನ್.`ಕುಡುಗೋಲು ಕಣ ರಕ್ತಹೀನತೆಯು ವಂಶವಾಹಿ ಕಾಯಿಲೆ. ಈ ರೋಗದಿಂದ ಬಳಲುತ್ತಿರುವ ಗಂಡು ಮತ್ತು ಹೆಣ್ಣಿನ ನಡುವೆ ಮದುವೆಗೆ ಅವಕಾಶ ನೀಡಬಾರದು. ಆದರೆ, ಸೋಲಿಗರ ಮದುವೆ ಪದ್ಧತಿಯೇ ವಿಭಿನ್ನವಾಗಿದೆ. ವಿವಾಹಪೂರ್ವ ತಪಾಸಣೆ ನಡೆಸುವುದು ಕಷ್ಟಕರ. ಹೀಗಾಗಿ, ಮಕ್ಕಳಿಗೂ ಈ ಕಾಯಿಲೆ ವಂಶವಾಹಿಯಾಗಿ ಕಾಡುತ್ತಿದೆ~ ಎನ್ನುತ್ತಾರೆ ಅವರು.ಕಳೆದ ಎರಡು ವರ್ಷದ ಹಿಂದೆ ಸೂಕ್ತ ಚಿಕಿತ್ಸೆ ಲಭಿಸದೆ ಕನ್ನೇರಿ ಕಾಲೊನಿಯಲ್ಲಿ ಆನಂದ್ ಹಾಗೂ ಮಾದೇಶ ಎಂಬ ಚಿಣ್ಣರು ಈ ಕಾಯಿಲೆಗೆ ತುತ್ತಾಗಿ ಜೀವ ಕಳೆದುಕೊಂಡಿರುವ ನಿದರ್ಶನವಿದೆ. ಆದರೆ, ಇಂದಿಗೂ ಸರ್ಕಾರ ಗಿರಿಜನರಿಗೆ ಪೌಷ್ಟಿಕ ಆಹಾರ ಪೂರೈಸುವಂತಹ ವಿಶೇಷ ಯೋಜನೆ ರೂಪಿಸಿಲ್ಲ.ಪ್ರಸ್ತುತ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಕೂಡ ಅನುಷ್ಠಾನಗೊಂಡಿದೆ. ಇದರನ್ವಯ ಗಿರಿಜನರು ಕಿರುಅರಣ್ಯ ಉತ್ಪನ್ನ ಸಂಗ್ರಹಿಸಲು ಅವಕಾಶವಿದೆ. ಪೌಷ್ಟಿಕಾಂಶ ಹೆಚ್ಚಿಸುವ ಕಾಡಿನ ಸೊಪ್ಪುಗಳು ಹಾಗೂ ಹಣ್ಣುಗಳನ್ನು ಸಂಗ್ರಹಿಸಬಹುದು. ಇದಕ್ಕೆ ಜಿಲ್ಲಾಮಟ್ಟದ ಸಮಿತಿಯಿಂದ `ಸಮುದಾಯದ ಹಕ್ಕುಪತ್ರ~ ನೀಡಬೇಕು. ಆದರೆ, ಇಂದಿಗೂ 100 ಪೋಡಿನ ಸೋಲಿಗರಿಗೆ ಸಮುದಾಯ ಹಕ್ಕುಪತ್ರವೇ ಸಿಕ್ಕಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.