ಗುರುವಾರ , ಮೇ 28, 2020
27 °C

ಸೋಲಿಗೆ ಒಳಸಂಚು ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಪಕ್ಷದಲ್ಲಿದ್ದು, ಪಕ್ಷಕ್ಕೆ ಮತ್ತು ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾದವರ ವಿರುದ್ಧ ವೀಕ್ಷಕರಿಂದ ವಿಚಾರಣೆ ನಡೆಸಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಮೂರ್ತಿ ಹೇಳಿದರು.ಪಟ್ಟಣದ ಕನಕ ಕಲಾ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ವಿಜೇತ ಸದಸ್ಯರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಸೋಲಿನಿಂದ ಈಗಾಗಲೆ ಪಕ್ಷಕ್ಕೆ ಭರಿಸ–ಲಾಗದ ನಷ್ಟವುಂಟಾಗಿದ್ದು, ಮತದಾರರ ನಾಡಿ ಮಿಡಿತ ಕಂಡು ಹಿಡಿಯುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.ಪಕ್ಷದ ಜಾತ್ಯತೀತವಾದ ಶಿಸ್ತು ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕಾಗಿ ದುಡಿಯುವವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ಸಿಗುತ್ತದೆ. ಪಕ್ಷವನ್ನು ಸಮರ್ಥವಾಗಿ ಕಟ್ಟುವ ನಿಷ್ಠಾವಂತ ಕಾರ್ಯಕರ್ತರಿಗೆ ಮುಂದಿನ ವಿಧಾನಸಭೆಯ ಟಿಕೆಟ್ ನೀಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎಂದರು.ಪಕ್ಷದ ತಾಲ್ಲೂಕು ವೀಕ್ಷಕ ಕೆಂಪನಹಳ್ಳಿ ಮಂಜುನಾಥ್ ಮಾತನಾಡಿ, ತರೀಕೆರೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಪಕ್ಷದ ನಾಯಕರ ಬಿನ್ನಾಭಿಪ್ರಾಯವೇ ಕಾರಣ. ಎಲ್ಲರೂ ಬಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಲು ಮುಂದಾಗಬೇಕು ಎಂದರು.ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ, ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸಿ ಸೋತ ಅಭ್ಯರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಅಭ್ಯಥಿಗಳೇ ಸಿಗದಂತಹ ಪರಿಸ್ಥಿತಿಯಲ್ಲಿ ಪಕ್ಷ ಪ್ರತಿನಿಧಿಸಿದವರಿಗೆ ಅಭಿನಂದನೆ ಸಲ್ಲಿಸಿದರು.ವಿಜೇತರ ಪರವಾಗಿ ಮಾತನಾಡಿದ ತಾಲ್ಲೂಕು ಕಾಂಗ್ರೆಸ್‌ನ ಲಕ್ಕವಳ್ಳಿ ಕ್ಷೇತ್ರದ ಏಕೈಕ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಕುಮಾರ್, ಪಕ್ಷದ ನಿಷ್ಠೆಯಿಂದ ಪಕ್ಷದ ಋಣವನ್ನು ತೀರಿಸುತ್ತೇನೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯರ ಪರವಾಗಿ ಮಾತನಾಡಿದ ಲಕ್ಕವಳ್ಳಿ ಕ್ಷೇತ್ರದ ಸದಸ್ಯ ಎ.ಅನ್ಬು ಮಾತನಾಡಿ ಲಕ್ಕವಳ್ಳಿ ಕ್ಷೇತ್ರದಲ್ಲಿ ಮೂರು ಸದಸ್ಯರನ್ನು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಚುನಾಯಿಸುವ ಮೂಲಕ ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಘನಿ ಅನ್ವರ್ ಪ್ರಾಸ್ತಾವಿವಾಗಿ ಮಾತನಾಡಿದರು.ಪರಾಜಿತ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಶಿವನಿ ಕ್ಷೇತ್ರದ ಅಭ್ಯರ್ಥಿ ಬಿ.ರಾಜಪ್ಪ, ಪಕ್ಷದ ನಾಯಕರ ಹೊಂದಾಣಿಕೆಯ ಕೊರತೆಯಿಂದಾಗಿ ಅನೇಕ ಅಭ್ಯರ್ಥಿಗಳ ಸೋಲಿಗೆ    ಕಾರಣವಾಯಿತು, ಪಕ್ಷದಲ್ಲಿದ್ದು ಅಭ್ಯರ್ಥಿಗಳ ಸೋಲಿಗೆ ಕಾರಣರಾದ ನಾಯಕರು ಪಕ್ಷ ಬಿಟ್ಟು ತೊಲಗಲಿ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ದ್ರುವ ುಮಾರ್, ತಿಪ್ಪೇರುದ್ರಪ್ಪ, ಎಚ್.ವಿಶ್ವನಾಥ್, ಕೆಪಿಸಿಸಿ ಸದಸ್ಯ ಮರಳುಸಿದ್ದಪ್ಪ, ನೂತನ ತಾ.ಪಂ.ಸದಸ್ಯರಾದ ವಿರೂಪಾಕ್ಷಪ್ಪ, ಶಾಂತಾ ಗುರುಮೂರ್ತಿ, ಶಕುಂತಲಾ ನಾಗರಾಜ್, ರತ್ನಮ್ಮ ವಜ್ರಪ್ಪ, ಲೀಲಾವತಿ, ಪಾರ್ವತಿ ಬಾಯಿ ಉಪಸ್ಥಿತರಿದ್ದು, ಮಾತನಾಡಿದರು. ಪುರಸಭಾಧ್ಯಕ್ಷೆ ಗಿರಿಜಮ್ಮ ನಾಗರಾಜ್, ಶೇಖರ್‌ನಾಯ್ಕ, ಖಾಲಿಕ್ ಅಹ್ಮದ್, ರಾಮಚಂದ್ರ ಮತ್ತು ರವಿ ಶ್ಯಾನುಬೋಗ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.