ಶನಿವಾರ, ಏಪ್ರಿಲ್ 10, 2021
30 °C

ಸ್ಥಳೀಯ ಅಭಿವೃದ್ಧಿಗೆ ಚಿಂತನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಥಳೀಯ ಅಭಿವೃದ್ಧಿಗೆ ಚಿಂತನೆ ಅಗತ್ಯ

ಬಸವಕಲ್ಯಾಣ: ತಾವು ವಾಸಿಸುವ ಪರಿಸರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ದೂರ ದೂರಕ್ಕೆ ನೋಡದೆ ನಮ್ಮಲ್ಲಿನ ಸಮಸ್ಯೆ -ಸವಾಲುಗಳನ್ನು ಬಿಡಿಸಲು, ನಮ್ಮ ಭಾಗದ ಸಾಹಿತ್ಯದ ಸಂರಕ್ಷಣೆಗೆ ಯತ್ನಿಸಬೇಕಾಗಿದೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕಿನ ನಾರಾಯಣಪುರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ವಲಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಲ್ಯಾಣವೆಂದರೆ ವಚನ ಸಾಹಿತ್ಯದ ನೆಲೆ. ವಚನ ಸಾಹಿತ್ಯವನ್ನು ತೆಗೆದರೆ ಕನ್ನಡದಲ್ಲಿ ಏನೂ ಉಳಿಯುವುದಿಲ್ಲ. ಇಂಥ ಸಮ್ಮೇಳನಗಳು ಈ ರೀತಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯಕ್ಕೆ ಸಹಕಾರಿಯಾಗುತ್ತವೆ ಎಂದರು. ಗಡಿಭಾಗದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.ಸಮ್ಮೇಳನಾಧ್ಯಕ್ಷರಾದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ ನಾರಾಯಣಪುರದ ಐತಿಹಾಸಿಕ ಹಿನ್ನೆಲೆ ಹೇಳಿದರು. ಈ ಗ್ರಾಮದ ಸುತ್ತಲಿನ ರಸ್ತೆಗಳ ಸುಧಾರಣಾ ಕಾರ್ಯ ನಡೆಯಬೇಕಾಗಿದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗ ಹಿಂದುಳಿದಿದೆ ಎಂದರು.ನಂಜುಂಡಪ್ಪ ವರದಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಇನ್ನಷ್ಟು ವಿಸ್ತರಣೆಗೊಳ್ಳಬೇಕು. ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.ಉದ್ಘಾಟನೆ ನೆರವೇರಿಸಿದ ಹಾರಕೂಡ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಆಡುವ ಭಾಷೆ ಅಷ್ಟೇ ಅಲ್ಲ, ಆಡಳಿತ ಭಾಷೆ ಕನ್ನಡವಾಗಬೇಕು. ಎಲ್ಲರ ಹೃದಯದಲ್ಲಿ ಈ ಭಾಷೆ ನಲಿನಲಿದಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ ಜಿಲ್ಲೆಯ ಸಾಹಿತಿಗಳು ದೇಶಿ ಭಾಷೆ ಬಳಸಿ ಬರೆಯುತ್ತಿರುವುದು ಸಂತಸಕರ ಸಂಗತಿ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.