ಶನಿವಾರ, ಮೇ 8, 2021
26 °C

ಸ್ಥಿರಾಸ್ತಿ ಖರೀದಿ: ಟಿಡಿಎಸ್ ವ್ಯವಸ್ಥೆ ಜಾರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಪ್ರದೇಶದ ಕೃಷಿ ಜಮೀನು ಹೊರತುಪಡಿಸಿ ಸ್ಥಿರಾಸ್ತಿ ಖರೀದಿ ಸಂಬಂಧ ಮೂಲದಲ್ಲಿಯೇ ತೆರಿಗೆ ಕಳೆಯುವ ವ್ಯವಸ್ಥೆ (ಟಿಡಿಎಸ್) ಜೂನ್‌ರಿಂದ ಜಾರಿಗೆ ಬಂದಿದೆ.ಈ ವ್ಯವಸ್ಥೆಯ ಬಗ್ಗೆ ಉಪ ನೋಂದಣಾಧಿ ಕಾರಿಗಳಿಗೆ ಮಾಹಿತಿ ನೀಡಲು ಆದಾಯ ತೆರಿಗೆ ಇಲಾಖೆಯ ಆಶ್ರಯದಲ್ಲಿ ನಗರದಲ್ಲಿ ಮಂಗಳ ವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.ಈ ವ್ಯವಸ್ಥೆಯಡಿ ರೂ. 50 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯನ್ನು ಯಾವುದೇ ವ್ಯಕ್ತಿ ಖರೀದಿಸಿದರೆ ಮಾರಾಟಗಾರರಿಗೆ ಪಾವತಿಸುವ ಹಣದಿಂದ ಶೇ 1ರಂತೆ ತೆರಿಗೆ ಮುರಿದುಕೊಳ್ಳಬೇಕು. ಮಾರಾಟಗಾರರ ಕಾಯಂ ಖಾತೆ ಸಂಖ್ಯೆ (ಪಾನ್) ಪಡೆದುಕೊಂಡು ಅದನ್ನು ಮೂಲ ಪಾನ್ ಕಾರ್ಡ್ ಜತೆಗೆ ತಾಳೆ ಮಾಡಿ ಪರಿಶೀಲನೆ ಮಾಡಬೇಕು. ಇದು ಸ್ಥಿರಾಸ್ತಿ ಖರೀದಿದಾರರ ಜವಾಬ್ದಾರಿ' ಎಂದು ಮಾಹಿತಿ ನೀಡಲಾಯಿತು.`ಸ್ಥಿರಾಸ್ತಿ ಖರೀದಿದಾರರು ಎರಡನೇ ಹಂತದಲ್ಲಿ ಸ್ಟೇಟ್‌ವೆುಂಟ್ ಅನ್ನು www.tin.nsdl.com ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಆನ್‌ಲೈನ್ ಫಾರಂನಲ್ಲಿ (ಫಾರಂ ನಂ.26 ಕ್ಯೂಬಿ) ಮಾರಾಟ ವ್ಯವಹಾರದ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಮಾರಾಟಗಾರರ ಹಾಗೂ ಖರೀದಿದಾರರ ಪಾನ್ ಸಲ್ಲಿಸುವುದು ಕಡ್ಡಾಯ. ಮಾಹಿತಿ ಒದಗಿಸುವ ವೇಳೆ ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಬೇಕು' ಎಂದು ಬೆಳಕು ಚೆಲ್ಲಲಾಯಿತು.ಮುರಿದುಕೊಂಡಿರುವ ತೆರಿಗೆ ಸಂದಾಯ ಹೇಗೆ: ಫಾರಂ 26 ಕ್ಯೂಬಿ ಸಲ್ಲಿಸುವಾಗ ಅಥವಾ ಅದರ ನಂತರ ಮುರಿದುಕೊಂಡಿರುವ ತೆರಿಗೆಯನ್ನು ಇ-ಪಾವತಿ ಮೂಲಕ ಪಾವತಿಸಬೇಕು. ನೆಟ್ ಬ್ಯಾಂಕಿಂಗ್ ಸೌಲಭ್ಯ ಸೇರಿದಂತೆ ಬ್ಯಾಂಕ್‌ಗಳ ಎಲೆಕ್ಟ್ರಾನಿಕ್ ಪಾವತಿ ಸೌಲಭ್ಯ ಉಪಯೋಗಿಸಿ ಇ-ಪಾವತಿ ಮಾಡಬಹುದು. ಆನ್‌ಲೈನ್‌ನಲ್ಲಿ ಸ್ಟೇಟ್‌ವೆುಂಟ್ ಸಲ್ಲಿಸಿದ ಬಳಿಕ 7 ದಿನಗಳೊಳಗೆ ಎಲೆಕ್ಟ್ರಾನಿಕ್ ಪಾವತಿ ಸೌಲಭ್ಯ ಬಳಸಿ ತೆರಿಗೆಯನ್ನು ಪಾವತಿಸಬೇಕು. ವಿಳಂಬವಾದರೆ ಸ್ಟೇಟ್‌ಮೆಂಟ್ ಅನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಫಾರಂ 26 ಕ್ಯೂಬಿ ಅನ್ನು ಮತ್ತೆ ಸಲ್ಲಿಸಬೇಕು' ಎಂದು ವಿವರ ಒದಗಿಸ ಲಾಯಿತು.  `ಆದಾಯ ತೆರಿಗೆ ಇಲಾಖೆಗೆ ಟಿಡಿಎಸ್ ಬಗ್ಗೆ ಮಾಹಿತಿ ನೀಡಲು ಮಾರಾಟ ಗಾರರು ಖರೀದಿದಾರರಿಗೆ ಪಾನ್ ಒದಗಿಸಬೇಕು. ಖರೀದಿದಾರರು ಮುರಿದು ಕೊಂಡಿರುವ ತೆರಿಗೆಗಳನ್ನು ಸಂದಾಯ ಮಾಡಿರುವ ಬಗ್ಗೆ ಫಾರಂ 26 ಎಎಸ್ ವಾರ್ಷಿಕ ತೆರಿಗೆ ವಿವರದಲ್ಲಿ ಮಾರಾಟಗಾರರು ಪರಿಶೀಲಿಸಿಕೊಳ್ಳಬೇಕು. ಮುರಿದು ಕೊಂಡಿರುವ ತೆರಿಗೆ ಪಾವತಿ ಮತ್ತು ವರದಿ ಮಾಡುವ ಸಂದರ್ಭದಲ್ಲಿ ತೆರಿಗೆ ಮುರಿದುಕೊಳ್ಳು ವವರ ಟ್ಯಾನ್ ಸಲ್ಲಿಸುವ ಅಗತ್ಯ ಇಲ್ಲ' ಎಂದು ಕಾರ್ಯಾಗಾರದಲ್ಲಿ ತಿಳಿಸಲಾಯಿತು. ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ಆಯುಕ್ತ ಸಂಜಯ್ ಕುಮಾರ್ ವರ್ಮಾ ಮಾತನಾಡಿ, `2013ರ ಹಣಕಾಸು ಕಾಯ್ದೆಯು 194-1ಎ ಹೊಸ ಸೆಕ್ಷನ್ ಪರಿಚಯಿಸಿದೆ. ಕೃಷಿ ಭೂಮಿ ಹೊರತುಪಡಿಸಿ ಇತರ ಯಾವುದೇ ಸ್ಥಿರಾಸ್ತಿಗಳನ್ನು ವರ್ಗಾವಣೆ ಮಾಡುವಾಗ ಮೂಲದಲ್ಲಿಯೇ ತೆರಿಗೆ ಕಡಿತ ಮಾಡಬೇಕಿದೆ. ಆದಾಯ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ತೆರಿಗೆ ಕಟ್ಟದಿರುವ ಪ್ರವೃತ್ತಿಗೆ ತಡೆ ಒಡ್ಡುವುದು ಇದರ ಹಿಂದಿರುವ ಉದ್ದೇಶ' ಎಂದರು. ಈ ವ್ಯವಸ್ಥೆ ಜೂನ್ 1ರ ಬಳಿಕ ವ್ಯವಹಾರಗಳಿಗೆ ಅನ್ವಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.