ಮಂಗಳವಾರ, ಮೇ 11, 2021
21 °C

ಸ್ನಾತಕೋತ್ತರ ಪದವಿ: ಖಾಸಗಿಗೆ ಮಣೆ

ಪ್ರಜಾವಾಣಿ ವಾರ್ತೆ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ಸ್ನಾತಕೋತ್ತರ ಪದವಿ: ಖಾಸಗಿಗೆ ಮಣೆ

ತುಮಕೂರು: ಸ್ನಾತಕೋತ್ತರ ಕೋರ್ಸ್‌ಗಳ ಸಂಯೋಜನೆ ನೀಡುವಲ್ಲಿ ತುಮಕೂರು ವಿಶ್ವ ವಿದ್ಯಾಲಯ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ವಾಗಿ ಮಣಿದಿದ್ದು, ಕನಿಷ್ಠ ಮೂಲಸೌಲಭ್ಯಗಳಿಲ್ಲದ ಶಿಕ್ಷಣ ಸಂಸ್ಥೆಗಳಿಗೆ ಸಂಯೋಜನೆ ನೀಡಿದೆ.ನ್ಯಾಯಾಲಯದ ಆದೇಶದಿಂದಾಗಿ ವಿಶ್ವ ವಿದ್ಯಾಲಯವು ಸ್ನಾತಕೋತ್ತರ ಪದವಿಯ ಎಲ್ಲ ವಿಭಾಗದಲ್ಲೂ ಪ್ರವೇಶ ಸಂಖ್ಯೆಯನ್ನು ಕೇವಲ 20ಕ್ಕೆ ಸೀಮಿತಗೊಳಿಸಿದೆ. ಇದರಿಂದ ಹೆಚ್ಚಿನ ಜನರನ್ನು ಉನ್ನತ ಶಿಕ್ಷಣ ಸೇರ್ಪಡೆಗೊಳಿಸುವ (ಇನ್‌ಕ್ಲೂಸಿವ್) ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಶಿಕ್ಷಣ ನೀತಿ ಜಾರಿಯಾಗುತ್ತಿಲ್ಲ ಎಂಬುದು ಶಿಕ್ಷಣ ಪ್ರೇಮಿಗಳ ಆರೋಪ.ಇಡೀ ದೇಶದಲ್ಲೇ ವಿಶ್ವವಿದ್ಯಾಲಯವೊಂದು ಪ್ರತಿ ವಿಭಾಗದಲ್ಲಿ 20 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡುತ್ತಿರುವುದು ತುಮಕೂರು ವಿಶ್ವ ವಿದ್ಯಾಲಯ ಮಾತ್ರ. ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾದ ಐಎಎಂ, ಐಐಟಿಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಆದರೆ ತುಮಕೂರು ವಿ.ವಿ.ಯಲ್ಲಿ ಮೂಲಭೂತ ಸೌಕರ್ಯ ಕೊರತೆ ಕಾರಣ ನೀಡಿ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.ಮೂಲಭೂತ ಸೌಕರ್ಯಗಳ ಕೊರತೆ ನಿಯಮ ವಿಶ್ವವಿದ್ಯಾಲಯಕ್ಕಷ್ಟೆ ಅನ್ವಯವಾಗಿದೆ. ಏನೇನು ಮೂಲ ಸೌಕರ್ಯಗಳಿಲ್ಲದ ಖಾಸಗಿ ಕಾಲೇಜುಗಳಿಗೂ ಸ್ನಾತಕೋತ್ತರ ಪದವಿ ಸಂಯೋಜನೆ ನೀಡಲಾಗಿದೆ. `ಖಾಸಗಿ ಲಾಬಿ~ ಹಿಂದೆ ಸಿಂಡಿಕೇಟ್‌ನ ಕೆಲ ಸದಸ್ಯರಿದ್ದಾರೆ ಎಂದು ಹೆಸರು ಹೇಳದ ವಿ.ವಿ ಪ್ರಾಧ್ಯಾಪಕರೊಬ್ಬರು ದೂರುತ್ತಾರೆ.ವೃತ್ತಿ ಶಿಕ್ಷಣ ಹೊರತುಪಡಿಸಿ ವಿಶ್ವವಿದ್ಯಾಲಯ 11 ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶಿಕ್ಷಣ ನೀಡುತ್ತಿದೆ. ತುಮಕೂರು ನಗರ, ಪಾವಗಡ, ಗುಬ್ಬಿ, ಕುಣಿಗಲ್, ತಿಪಟೂರು, ಶಿರಾ, ಕೊರಟಗೆರೆ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಒಟ್ಟು 21 ಶಿಕ್ಷಣ ಸಂಸ್ಥೆಗಳಿಗೆ ಸ್ನಾತಕೋತ್ತರ ಪದವಿಗೆ ಸಂಯೋಜನೆ ನೀಡಲಾಗಿದೆ. ಇದರಲ್ಲಿ ವಿಶ್ವವಿದ್ಯಾಲಯದ 2 ಕಾಲೇಜುಗಳು ಸೇರಿದಂತೆ 7 ಕಾಲೇಜುಗಳು ಮಾತ್ರ ಸರ್ಕಾರಿ ಕಾಲೇಜುಗಳಾಗಿವೆ. ಉಳಿದಂತೆ 14 ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ನಾತಕೋತ್ತರ ಪದವಿಗೆ ಸಂಯೋಜನೆ ಪಡೆಯುವ ಮೂಲಕ ಸಿಂಹಪಾಲು ಗಿಟ್ಟಿಸಿಕೊಂಡಿವೆ. ಇವುಗಳಲ್ಲಿ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿದ್ದರೂ ಸಂಯೋಜನೆ ನೀಡಲು ಹೇಗೆ ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.ಸ್ನಾತಕೋತ್ತರ ಪದವಿ ಮಹತ್ವವನ್ನೇ ಅರಿಯದ ಕಾಲೇಜುಗಳು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ನಡೆಸುವಂತೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರ ಕೊರತೆಯಿಂದಾಗಿ ಬೆಳಿಗ್ಗೆ ಮೊದಲ ವರ್ಷದ ಸ್ನಾತಕೋತ್ತರ ತರಗತಿ ನಡೆಸಿದರೆ, ಎರಡನೇ ಸ್ನಾತಕೋತ್ತರ ತರಗತಿಗಳನ್ನು ಮಧ್ಯಾಹ್ನದ ನಂತರ ನಡೆಸುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮನೆಗೆ ತೆರಳಲು ಕೂಡ ಕಷ್ಟವಾಗುತ್ತಿದೆ. ಅಲ್ಲದೇ ಹಿರಿ-ಕಿರಿ ವಿದ್ಯಾರ್ಥಿಗಳ ಸಂಪರ್ಕವೇ ತಪ್ಪುವಂಥಾಗಿದೆ ಎಂದು ದೂರುತ್ತಾರೆ.ಕೆಲ ಕಾಲೇಜುಗಳಲ್ಲಿ ಕಳಪೆ ಗುಣಮಟ್ಟದ ಸ್ನಾತಕೋತ್ತರ ಶಿಕ್ಷಣದ ಕಂಡು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. `ಸ್ನಾತಕೋತ್ತರ ಪದವಿಯ ಕನಸೆ ನುಚ್ಚು ನೂರಾಗಿದೆ~ ಎಂದು ಖಾಸಗಿ ಕಾಲೇಜಿನ ವಿದ್ಯಾರ್ಥಿ `ಪ್ರಜಾವಾಣಿ~ಗೆ ಅಳಲು ತೋಡಿಕೊಂಡರು.ವಿಶ್ವವಿದ್ಯಾಲಯದಲ್ಲೆ ಪ್ರವೇಶ ಮಿತಿ 20 ಸೀಟುಗಳಿದ್ದರೆ, ಏನೇನು ಸೌಲಭ್ಯಗಳಿಲ್ಲದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮಿತಿ 40ರಿಂದ 60 ಸೀಟುಗಳಿಗೆ ನೀಡಲಾಗಿದೆ. ಮೂಲಭೂತ ಸೌಕರ್ಯದ ನಿಯಮ ಈ ಖಾಸಗಿ ಕಾಲೇಜುಗಳಿಗೆ ಯಾಕೆ ಅನ್ವಯಿಸುವುದಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಕೆಲವುಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಪ್ರಾಧ್ಯಾಪಕರು ಕೂಡ ಇಲ್ಲ. ಸರಿಯಾದ ಗ್ರಂಥಾಲಯ ಸೌಲಭ್ಯವನ್ನು ಕಾಲೇಜುಗಳು ಹೊಂದಿಲ್ಲ ಎಂದು ದೂರುತ್ತಾರೆ.ಶೇ 50:50 ರ ಅನುಪಾತದಲ್ಲಿ ಸೀಟುಗಳನ್ನು ನೀಡಲಾಗಿದ್ದು, ಖಾಸಗಿ ಆಡಳಿತ ಮಂಡಳಿಗಳಿಗೆ ಶೇ 50ರಷ್ಟು ಸೀಟುಗಳನ್ನು ನೀಡಲಾಗಿದೆ. ಅಲ್ಲದೆ ವಿಶ್ವವಿದ್ಯಾಲಯವೇ ಸೀಟು ಹಂಚಿಕೆ ಮಾಡಿದ ವಿದ್ಯಾರ್ಥಿಗಳಿಂದಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಲೇಜು ಅಭಿವೃದ್ಧಿ ಶುಲ್ಕ ಮತ್ತಿತರ ಕಾರಣ ನೀಡಿ ವಂತಿಗೆ ವಸೂಲು ಮಾಡುತ್ತಿದ್ದು, ಇದಕ್ಕೂ ವಿ.ವಿ. ಕಡಿವಾಣ ಹಾಕಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.`ಸಂಯೋಜನಾ ಸಮಿತಿ ಇದ್ದು, ಅದರ ಶಿಫಾರಸಿನಂತೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಅವಕಾಶ ನೀಡಲಾಗಿದೆ. ಸಮಿತಿ ನೀಡಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅಲ್ಲಿಂದ ಅನುಮೋದನೆ ಪಡೆಯಲಾಗಿದೆ~ ಎಂದು ವಿಶ್ವವಿದ್ಯಾನಿಲಯದ ಉಪ ಕುಲಸಚಿವ ಶ್ರೀನಿವಾಸ್ (ಶೈಕ್ಷಣಿಕ)  `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.`ಕೇಂದ್ರ ಸರ್ಕಾರದ ನೀತಿ ಭಾಗವಾಗಿ ವಿ.ವಿ. ಮುಖ್ಯ ಉದ್ದೇಶ ಸಾಕಷ್ಟು ಮಟ್ಟಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು  ಸೇರ್ಪಡೆಗೊಳಿಸಬೇಕು. ಸರ್ಕಾರದ ಭಾಗವಾಗಿ ಕೆಲಸ ಮಾಡುವ ವಿಶ್ವವಿದ್ಯಾಲಯವು ಸೀಟುಗಳನ್ನು ಕಡಿತಗೊಳಿಸಿರುವುದು ಸಂವಿಧಾನದ ಆಶಯಕ್ಕೆ ವಿರೋಧ. ವಿ.ವಿ. ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಜಾರಿಕೊಂಡಿದೆ~ ಎಂದು ಸಿಂಡಿಕೇಟ್ ಮಾಜಿ ಸದಸ್ಯ ಎಸ್.ರಮೇಶ್ ಹೇಳಿದರು.`ವಿ.ವಿ.ಯಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದು ಸೀಟುಗಳನ್ನು ಕಡಿತ ಮಾಡಿರುವಾಗ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯ ಪ್ರಶ್ನೆ ಏಕೆ ಉದ್ಭವಿಸುತ್ತಿಲ್ಲ. ಸೌಲಭ್ಯ ಇಲ್ಲದಿದ್ದರೂ ಸಂಯೋಜನೆ ನೀಡಿ, ಹೆಚ್ಚಿನ ಸೀಟುಗಳಿಗೆ ಅವಕಾಶ ನೀಡಲು ಹೇಗೆ ಸಾಧ್ಯವಾಯಿತು. ಈ ಸಂಬಂಧ ಜನತೆಗೆ ಕುಲಪತಿ, ಸಿಂಡಿಕೇಟ್ ಉತ್ತರ ನೀಡಬೇಕು~ ಎನ್ನುತ್ತಾರೆ ಚಿಂತಕ ಕೆ.ದೊರೈರಾಜ್.

ಕಾಳಜಿ ಇಲ್ಲದ ಜನಪ್ರತಿನಿಧಿಗಳು

ಜಿಲ್ಲೆಯ ಜನಪ್ರತಿನಿಧಿಗಳು ವಿ.ವಿ ಬೆಳವಣಿಗೆ ಯತ್ತ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ವಿ.ವಿ.ಗೆ ಸ್ವಂತ ಭೂಮಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಡೆಗೆ ಜನಪ್ರತಿನಿಧಿಗಳು ಗಮನವನ್ನೇ ನೀಡುತ್ತಿಲ್ಲ. ಜಿಲ್ಲೆಯ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಕಾಳಜಿ ಕೂಡ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಆಗಿರುವುದರಿಂದ ಹೊರ ವಿಶ್ವವಿದ್ಯಾಲಯಗಳಲ್ಲಿ ಜಿಲ್ಲೆಯ ಮಕ್ಕಳಿಗೆ ಪ್ರಾತಿನಿಧ್ಯ ಸಿಗುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿ ಗಳು ಕೂಡ ಗುಣಮಟ್ಟದ ಶಿಕ್ಷಣದಿಂದ ವಂಚಿತ ರಾಗತೊಡಗಿದ್ದು, ಭವಿಷ್ಯದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬರಲಿದೆ ಎಂದು ನಿವೃತ್ತ ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.