ಶುಕ್ರವಾರ, ಮೇ 7, 2021
20 °C

ಸ್ನೇಹಿತರಿಂದಲೇ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಿರಿನಗರ ಬಳಿಯ ಮುನೇಶ್ವರ ಬ್ಲಾಕ್‌ನಲ್ಲಿ ಭಾನುವಾರ ರಾತ್ರಿ ವಿನಯ್ (22) ಎಂಬ ಯುವಕನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹನುಮಂತನಗರ ಸಮೀಪದ ಗುಟ್ಟಹಳ್ಳಿಯ ವಿನಯ್, ರಸ್ತೆಗೆ ಡಾಂಬರು ಹಾಕುವ ಕೆಲಸ ಮಾಡುತ್ತಿದ್ದ.ವಿನಯ್, ಪ್ರದೀಪ್ ಮತ್ತು ಗಣೇಶ್ ಎಂಬ ಸ್ನೇಹಿತರೊಂದಿಗೆ ಶ್ರೀನಗರದ ಬಾರ್ ಒಂದರಲ್ಲಿ ಮಧ್ಯಾಹ್ನ ಮದ್ಯಪಾನ ಮಾಡಿದ್ದ. ನಂತರ ಪ್ರದೀಪ್‌ನ ಬೈಕ್ ತೆಗೆದುಕೊಂಡು ಹೋಗಿದ್ದ ವಿನಯ್ ಸಂಜೆವರೆಗೂ ವಾಪಸ್ ಬಂದಿರಲಿಲ್ಲ. ಈ ವಿಷಯವಾಗಿ ಅವರ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಪ್ರದೀಪ್, ಸಹಚರರ ಜತೆ ಸೇರಿಕೊಂಡು ಆತನನ್ನು ಆಟೊಗಳಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಸಂಬಂಧ ಪ್ರದೀಪ್, ಆತನ ಸಹಚರರಾದ ದೀಪು, ಶಿವ, ಅಜಯ್, ಗಣೇಶ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಯುವಕ ಆತ್ಮಹತ್ಯೆ

ಹೆಣ್ಣೂರು ಸಮೀಪದ ವಡ್ಡರಪಾಳ್ಯದಲ್ಲಿ ನಾಗರಾಜ್ (22) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಡ್ಡರಪಾಳ್ಯ ನಿವಾಸಿ ಮುನಿಯಪ್ಪ ಎಂಬುವರ ಮಗನಾದ ನಾಗರಾಜ್, ಟೈಲರ್ ಆಗಿದ್ದರು. ಮನೆಯ ಸಮೀಪವೇ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಅವರು ಅಂಗಡಿಯಲ್ಲೇ ರಾತ್ರಿ ನೇಣು ಹಾಕಿಕೊಂಡಿದ್ದಾರೆ.`ಚೀಟಿ ವ್ಯವಹಾರ ಮಾಡುತ್ತಿದ್ದ ತಮ್ಮ, ನೇತ್ರಾವತಿ ಎಂಬುವರಿಗೆ ್ಙ 10 ಸಾವಿರ ಹಣ ಕೊಡಬೇಕಿತ್ತು. ಈ ವಿಷಯವಾಗಿ ನೇತ್ರಾವತಿ ಮತ್ತು ಅವರ ಸಂಬಂಧಿಕ ಕೇಶವ ಅವರು ರಾತ್ರಿ ಮನೆಯ ಬಳಿ ಬಂದು ತಮ್ಮನ ಜತೆ ಜಗಳವಾಡಿದರು. ಆಗ ಜಗಳ ವಿಕೋಪಕ್ಕೆ ತಿರುಗಿ ನೇತ್ರಾವತಿ ಅವರು ತಮ್ಮನಿಗೆ ಚಪ್ಪಲಿಯಿಂದ ಹೊಡೆದಿದ್ದರು.

ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ನಾಗರಾಜ್ ಅವರ ಅಣ್ಣ ಆಂಜನಪ್ಪ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೆಣ್ಣೂರು ಪೊಲೀಸರು ನೇತ್ರಾವತಿ ಮತ್ತು ಕೇಶವ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.