ಸೋಮವಾರ, ಮೇ 17, 2021
27 °C

ಸ್ನೇಹ ಅತಿ ಮಧುರ... ಅಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆ. ಪಿ. ನಗರ ಮೂರನೇ ಹಂತದಲ್ಲಿರುವ ಶ್ರೀ ರಮಣ ಮಹರ್ಷಿ ಅಂಧರ ಅಕಾಡೆಮಿಯಲ್ಲಿ ಅಂದು ಹಬ್ಬದ ವಾತಾವರಣ. ತಬಲಾ, ಹಾರ್ಮೋನಿಯಂ ಮೇಳಕ್ಕೆ ಕಾಲ್ಗೆಜ್ಜೆಗಳ ಸಾಥ್. ಕೆಲವರು ನೃತ್ಯಕೌಶಲ್ಯವನ್ನು ಮತ್ತೊಮ್ಮೆ ಜಾಹೀರುಪಡಿಸಿಕೊಳ್ಳುವ ತುಡಿತದಲ್ಲಿದ್ದರೆ, ಇನ್ನು ಕೆಲವರು ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನ ವಾದ್ಯಮೇಳದೊಂದಿಗೆ ಕಛೇರಿ ಕೊಡುತ್ತಿರುವ ಭ್ರಮೆಯಲ್ಲಿ ಕೈಕಾಲು ಕುಣಿಸಿಕೊಂಡು ರಿಯಾಜ್‌ನಲ್ಲಿ ತೊಡಗಿದ್ದರು. ಜಗದ ಜಂಜಡ ತಮ್ಮದಲ್ಲ ಎಂದು ಸದಾ ಕಂಪ್ಯೂಟರ್ ಸಹವಾಸಿಗಳಾಗಿ ಇಹವ ಮರೆಯುವ ಸಾಫ್ಟ್‌ವೇರ್ ಮಂದಿ ಕಾರ್ಯಕ್ರಮದ ಶ್ರೋತೃಗಳ ಸಾಲಿನಲ್ಲಿದ್ದರು. ಮುದ್ದಿನ ಮಗುವಿನ ಹುಟ್ಟುಹಬ್ಬವನ್ನು ಅವಕಾಶವಂಚಿತ ಮಕ್ಕಳೊಂದಿಗೆ ಆಚರಿಸುವ ಸಂಭ್ರಮದಲ್ಲಿದ್ದ ಹೆತ್ತವರೂ ಅಲ್ಲಿದ್ದರು.

ಗಜಾನನನಿಗೆ ದೀಪ ನೃತ್ಯಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಲೇ ಸಭಾಂಗಣದಲ್ಲಿ ದಿವ್ಯಮೌನ. ಕ್ಯಾಮೆರಾ ಕಣ್ಣುಗಳು ಬಿಡುವಿಲ್ಲದೆ ಮಿಟುಕಿಸತೊಡಗಿದವು. ಅನುಭವಿ ಕಲಾವಿದರ ಶಿಸ್ತಿನಲ್ಲಿ ನಾಲ್ಕಾರು ಹಾಡುಗಳಿಗೆ ನೃತ್ಯ ಪ್ರಸ್ತುತಪಡಿಸಿದ ವಿದ್ಯಾರ್ಥಿಗಳು ಪ್ರೇಕ್ಷಕರಿಂದ ಭೇಷ್ ಅನಿಸಿಕೊಂಡರು. ಮುಂದಿನ ಸರದಿ ಹಾಡುಗಾರರದ್ದು. ದೇವರನಾಮ, ವಚನಗಳ ನಂತರ ಭಾವಗೀತೆಗಳನ್ನೂ ಹಾಡುವ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. `ಸ್ನೇಹ ಅತಿ ಮಧುರ... ಸ್ನೇಹ ಅದು ಅಮರ~ ಎಂದು ತಾರಕದಲ್ಲಿ ಭಾವತುಂಬಿ ಹಾಡುತ್ತಿದ್ದಂತೆ ಪ್ರತಿಯೊಬ್ಬರ ಕಣ್ಣಂಚಲ್ಲೂ ನೀರು! ಅಂಧತ್ವ ತಮಗೆ ಒಂದು ಕೊರತೆಯೇ ಅಲ್ಲ ಎಂಬಂತೆ ಅದಮ್ಯ ಉತ್ಸಾಹದಿಂದ ಹಾಡಿ ಕುಣಿದ ಮಕ್ಕಳು ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನಸೂರೆಗೊಂಡರು.

`ಡೆಲ್~ ಸಾಫ್ಟ್‌ವೇರ್ ಸಂಸ್ಥೆಯ ಉದ್ಯೋಗಿಗಳು ಅಕಾಡೆಮಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಧನಸಹಾಯವನ್ನು ಇದೇ ಸಂದರ್ಭದಲ್ಲಿ ನೀಡಿದರು. ಅಕಾಡೆಮಿಯ ಸ್ಥಾಪಕಾಧ್ಯಕ್ಷ ಟಿ.ವಿ. ಶ್ರೀನಿವಾಸನ್, ನಿವೃತ್ತ ಪೊಲೀಸ್ ಸೂಪರಿಂಟೆಂಡೆಂಟ್ ಸಿ.ಎನ್. ಭಂಡಾರೆ, ಡಾ. ಪೂರ್ಣಚಂದ್ರ, ಪ್ರಥಮ್ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.