ಭಾನುವಾರ, ಮೇ 16, 2021
27 °C

ಸ್ಪಷ್ಟ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಅಧಿಕಾರಿಗಳು ಖಚಿತ ಅಂಕಿ ಅಂಶಗಳಿಂದ ಒಳಗೊಂಡ ಮಾಹಿತಿಯನ್ನು ನೀಡಬೇಕೆ ಹೊರತು `ಬಹಳಷ್ಟು~, `ಬಹುತೇಕ~ ಎಂಬ ಪದಗಳು ಹೇಳುವುದನ್ನು ಕೈಬಿಡಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಅಂಕಿ ಅಂಶಗಳನ್ನು ಪಟಪಟನೇ ಹೇಳಬೇಕೆ ಹೊರತು ಅಸ್ಪಷ್ಟವಾದ ಮಾಹಿತಿ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಕೆಲಸ ಮಾಡದವರು ಬಹಳಷ್ಟು, ಬಹುತೇಕ ಎಂಬ ಪದಗಳನ್ನು ಬಳಸು ತ್ತಾರೆ. ಕೆಲಸ ಮಾಡುವ ಅಧಿಕಾರಿಗಳು ನಿಖರ ವಾದ ಮಾಹಿತಿ ನೀಡುತ್ತಾರೆ~ ಎಂದರು.ಸಭೆಯುದ್ದಕ್ಕೂ ಬೇರೆ ಬೇರೆ ಕಾರಣಗಳಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, `ಜಿಲ್ಲಾ ಪಂಚಾಯಿತಿಗೆ, ಜನಪ್ರತಿನಿಧಿ ಗಳಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ತಮಗೆ ಮನ ಬಂದಂತೆ ಕಾರ್ಯನಿರ್ವಹಿಸುವುದು ಅಪರಾಧ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎಂಬ ಸಂಗತಿ ನೆನಪಿರಲಿ~ ಎಂದರು.ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಇಲಾಖೆಯ ಜಂಟಿ ನಿರ್ದೇಶಕ ಎ.ಸಿ.ನಟರಾಜ್ ಅವರನ್ನು ಪದೇ ಪದೇ ಪ್ರಶ್ನಿಸಿದ ಸಚಿವರು, `ಸುವರ್ಣ ಭೂಮಿ ಯೋಜನೆಗೆ ಸಂಬಂಧಿಸಿದಂತೆ ಆಗಿರುವ ಕಾರ್ಯಗಳೇನು? ಯೋಜನೆಯ ಫಲಾನುಭವಿಗಳಿಗೆ ಹಣ ದೊರಕಿದೆಯೇ? ರೈತರನ್ನು ಖುದ್ದು ಭೇಟಿ ಮಾಡಿದ್ದೀರಾ? ತಿಂಗಳಿಗೆ ಎಷ್ಟು ಬಾರಿ ರೈತ ಸಭೆಗಳನ್ನು ನಡೆಸಿದ್ದೀರಾ~ ಎಂದು ಕೇಳಿದರು.ನಟರಾಜ್ ಅವರು ಉತ್ತರ ನೀಡಲು ತಡಬಡಾಯಿಸುತ್ತಿರುವುದು ಕಂಡು ಸಿಟ್ಟಿಗೆದ್ದ ಸಚಿವರು, `ಜಿಲ್ಲಾ ಮಟ್ಟದ ಅಧಿಕಾರಿಗಳಾದ ನಿಮ್ಮ ಬಳಿ ಸಮಗ್ರ ಮಾಹಿತಿ ಇರಬೇಕು. ನಿಮ್ಮ ಕಿರಿಯ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿ ಎಲ್ಲವನ್ನೂ ತಿಳಿದುಕೊಂಡಿರಬೇಕು. ಯಾವುದೇ ರೀತಿಯ ಸ್ಪಷ್ಟ ಮಾಹಿತಿಯಿಲ್ಲದೇ ಸಭೆಗೆ ಬಂದರೇನು ಪ್ರಯೋಜನ~ ಎಂದರು.ಕೃಷಿ ಇಲಾಖೆ ಕಾರ್ಯವೈಖರಿ ಬಗ್ಗೆ ದೂರಿದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, `ಮಳಿಗೆಗಳಲ್ಲಿ ರಾಸಾಯನಿಕ ಗೊಬ್ಬರದ ದರ ಮತ್ತು ದಾಸ್ತಾನು ಮಾಹಿತಿಯನ್ನು ಫಲಕದ ಮೇಲೆ ಪ್ರದರ್ಶಿಸಲಾಗುತ್ತಿಲ್ಲ. ರೈತರಿಗೆ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿ ವ್ಯಾಪರಸ್ಥರು ಲಾಭ ಗಳಿಸುತ್ತಿದ್ದಾರೆ. ಇನ್ನೂ ಕೆಲವರು ಕಾಳಸಂತೆಯಲ್ಲಿ ರಸಗೊಬ್ಬರ ಮಾರು ತ್ತಿದ್ದು, ರೈತರು ನಿತ್ಯವೂ ವಂಚನೆಗೆ ಒಳಗಾಗು ತ್ತಿದ್ದಾರೆ. ಇದರ ಕುರಿತು ಹಲವು ಬಾರಿ ದೂರಿ ದರೂ ಏನೂ ಪ್ರಯೋಜನವಾಗಿಲ್ಲ~ ಎಂದು ಆರೋಪಿಸಿದರು.`ರಸಗೊಬ್ಬರ ಪೂರೈಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ನಿಗಾ ವಹಿಸಬೇಕು. ರೈತರಿಗೆ ಯಾವುದೇ ರೀತಿಯಲ್ಲೂ ವಂಚನೆಯಾಗಬಾರದು. ರೈತರಿಗೆ ಮೋಸ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ರೈತರ ಸಭೆಗಳನ್ನು ಆಗಾಗ್ಗೆ ನಡೆಸುವುದರ ಮೂಲಕ ರೈತರ ಸಂಕಷ್ಟ ಗಳನ್ನು ಆಲಿಸಬೇಕು. ಸಮಸ್ಯೆಗಳನ್ನು ಪರಿಹರಿಸ ಬೇಕು~ ಎಂದು ಸಚಿವರು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಕುರಿತ ಮಾಹಿತಿಯನ್ನು ಆಲಿಸಿದ ಸಚಿವರು, `ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನೀರು ಪೂರೈಕೆಯಾಗಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆ ಹೊರತು ವ್ಯರ್ಥ ಮಾಡಬಾರದು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗಲಿಗೆ ಕಂಪೌಂಡ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳ ಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ಯೋಗದಲ್ಲಿ ಲೀಡ್ ಬ್ಯಾಂಕು ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು~ ಎಂದರು.ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿಸ್ವಾಮಿ, ಸದಸ್ಯ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಕೆ.ಪಿ.ಬಚ್ಚೇಗೌಡ, ವಿ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎನ್.ಮಂಜುಳಾ, ಅಮರಾವತಿ, ಎಸ್.ಎನ್.ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಸ್.ಶೇಖರಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.`ನಮ್ಮದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ~

ಚಿಕ್ಕಬಳ್ಳಾಪುರ: `ನಾವು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇದ್ದೇವೆ. ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ. ನಮಗೆ ಮತ್ತು ನಮ್ಮ ಮಾತಿಗೆ ಬೆಲೆ ಇಲ್ಲದಿರುವಾಗ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಯಾಕೆ ಬೇಕು? ನಾವು ಇದ್ದಾದರೂ ಏನೂ ಉಪಯೋಗ~ಹೀಗೆ ಆಕ್ರೋಶವನ್ನು ವ್ಯಕ್ತಪಡಿಸಿದವರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಮಂಜುಳಾ. ಪಶುಸಂಗೋಪಣೆ ಇಲಾಖೆಗೆ ಸಂಬಂಧಿಸಿದಂತೆ ವಸ್ತುಗಳ ಖರೀದಿ ಕುರಿತು ಇಲಾಖೆ ಅಧಿಕಾರಿಗಳು ವಿವರಣೆ ನೀಡುತ್ತಿದ್ದ ವೇಳೆ ಎದ್ದು ನಿಂತ ಮಂಜುಳಾ, `ಇಲಾಖೆಯವರು ಏನೂ ಖರೀದಿ ಮಾಡುತ್ತಾರೆ? ಇಲಾಖೆ ಹಣ ಎಲ್ಲಿ ಹೋಗುತ್ತೆ? ಮುಂತಾದವುಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ನಮಗೆ ಬೆಲೆಯೇ ನೀಡುವುದಿಲ್ಲ. ನಾವು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಇದ್ದೇವೆ~ ಎಂದರು.ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿಯವರು ಮಾತ್ರವಲ್ಲದೇ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಅವರು ಪ್ರಶ್ನಿಸುತ್ತಿದದ್ದು ವಿಶೇಷವಾಗಿತ್ತು. ಸಚಿವರ ಪ್ರಶ್ನೆಗಳ ಸುರಿಮಳೆಯಾದ ಕೂಡಲೇ ಸಾವಿತ್ರಮ್ಮ ಅವರು ಬಾಗೇಪಲ್ಲಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಳುತ್ತಿದ್ದರು.ಶಾಲೆಯು ಮುಚ್ಚಿರುವ, ಶಾಲೆಗೆ ಶೌಚಾಲಯ ಇಲ್ಲದಿರುವ ಮತ್ತು ಸೌಕರ್ಯಗಳ ಕೊರತೆ ಇರುವ ಹಲವು ಪ್ರಶ್ನೆಗಳನ್ನು ಕೇಳಿದ ಅವರು ಕೆಲ ಕಾಲ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.