ಬುಧವಾರ, ಜೂನ್ 23, 2021
29 °C
ಚುನಾವಣಾ ಹಿನ್ನೋಟ

ಸ್ಪೀಕರ್‌ ಅನಂತಶಯನಂ ಅಯ್ಯಂಗಾರ್

-–ಜಿ.ಬಿ.ಹರೀಶ್ Updated:

ಅಕ್ಷರ ಗಾತ್ರ : | |

ಭಾರತದ ಸಂಸತ್ತು ಅನೇಕ ಉತ್ತಮ ಸಂಸದರನ್ನು ಕಂಡಿದೆ. ಅದಲ್ಲಿ ಕೆಲವರು ಸಂಸತ್ತಿನ ಆರಂಭದ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಿದವರು. ಅಂಥವರಲ್ಲಿ ಒಬ್ಬರು ಎಂ.­ಅನಂತ­ಶಯನಂ ಅಯ್ಯಂಗಾರ್(1891–1978).­ ಮೊದಲೆರಡು ಲೋಕಸಭೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.ಗಾಂಧೀಜಿಯವರ ಅನುಯಾಯಿಯಾಗಿದ್ದ ಸಮಾಜವಾದಿ ಸಿದ್ಧಾಂತದ ಅನಂತಶಯನಂ, ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದರು. ಮುಂದೆ ದೇಶ ಸ್ವತಂತ್ರವಾದ ಮೇಲೆ 1952 ರಲ್ಲಿ ಸಂಸತ್‌ನ ಮೊದಲ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಆಗ ಗಣೇಶ ವಾಸುದೇವ್ ಮಾವಳಂಕರ್ ಸ್ಪೀಕರ್ ಆಗಿದ್ದರು.ಮುಂದೆ 1956ರಲ್ಲಿ ಅನಂತಶಯನಂ ಅವರು ಲೋಕಸಭೆಯ  ಸ್ಪೀಕರ್ ಆದರು.  ಅವರು ಮೊದಲೆರಡು ಲೋಕಸಭೆಗಳಿಗೆ ಕ್ರಮವಾಗಿ ತಿರುಪತಿ ಮತ್ತು ಚಿತ್ತೂರ್ ನಿಂದ ಆಯ್ಕೆಯಾಗಿದ್ದರು.ಡೆಪ್ಯುಟಿ ಸ್ಪೀಕರ್ ಸ್ಥಾನದಲ್ಲಿ ದ್ವಿಪಾತ್ರಾಭಿನಯ ಮಾಡಬೇಕಾಗುತ್ತದೆ. ಕೆಲವು ಸಲ ತಮ್ಮ ಪಕ್ಷದ ಪರ ಮಾತನಾಡಿ ನಂತರ ಸ್ಪೀಕರ್  ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ಅನೇಕ ಉತ್ತಮ ನಡವಳಿಕೆಗಳನ್ನು ಜಾರಿಗೆ ತಂದರು. ಈ ಹುದ್ದೆಗೆ ಬಂದ ನಂತರ ಮಾಡಿದ ಮೊದಲ ಭಾಷಣದಲ್ಲಿ ಅವರು ‘ಎಲ್ಲ ಪಕ್ಷಗಳ ನಡುವೆ ಸಹಕಾರ ಭಾವನೆ ಇರಬೇಕು ಮತ್ತು ಅವು ಜಗಳ ಆಡಬೇಕಾಗಿ ಬಂದಾಗ ದ್ವೇಷ,  ವೈಷಮ್ಯದ ಸೋಂಕು ಇರಬಾರದು.

ಮನಸ್ಸಿಗೆ ತುಂಬಾ ಹಚ್ಚಿಕೊಳ್ಳದೆ, ನಿರಾಶೆಯನ್ನು ಸಹಿಸಿಕೊಳ್ಳುವ ಉದಾರ ಭಾವನೆ ಇರಬೇಕು. ಈ ಬಗೆಯ ಸ್ವಭಾವ ಜನತಂತ್ರದ ಬೆಳವಣಿಗೆಗೆ ಸದಾ ಅನುಕೂಲಕರ’ ಎಂದಿದ್ದರು.ಅವರು ಆರಂಭಿಸಿದ ಒಂದು ಮುಖ್ಯ ಸಂಪ್ರದಾಯವೆಂದರೆ, ಪ್ರಶ್ನೆಗಳಿಗೆ ಸಂಬಂಧಿಸಿದ್ದು. ಸದನದಲ್ಲಿ ಅವರು ಕೆಲವು ಸದಸ್ಯರನ್ನು ಪ್ರಶ್ನೆ ಕೇಳಲು ಕರೆಯಬೇಕಿತ್ತು. ಪ್ರಶ್ನೆ ಕೇಳಬೇಕಾದ ಆ ಸದಸ್ಯರು ಅಧಿವೇಶನಕ್ಕೆ ಬರಲಾಗುವುದಿಲ್ಲವೆಂದು ಅನುಮತಿ ಕೇಳಿದ್ದರೂ ಅಥವಾ ವಿದೇಶ ಪ್ರವಾಸದಲ್ಲಿದ್ದರೂ ಅಂಥವರ ಹೆಸರು ಕಡ್ಡಾಯವಾಗಿ ಕರೆಯಬೇಕಿತ್ತು. ಪ್ರಶ್ನೆ ಕೇಳಿದವರೇ ಇಲ್ಲವೆಂದ ಮೇಲೆ ಆ ಪ್ರಶ್ನೆ ಎತ್ತಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಅನಂತಶಯನಂ ಭಾವಿಸಿದರು. ಅಂಥ ಸದಸ್ಯರ ಪ್ರಶ್ನೆಗಳನ್ನು ಲಿಖಿತವಾಗಿ ಉತ್ತರಿಸುವ ಪ್ರಶ್ನೆಗಳ ಪಟ್ಟಿಗೆ ಸೇರಿಸುವಂತೆ ಮಾಡಿದರು.ರಾಷ್ಟ್ರಪತಿಯವರ ಸಂದೇಶವನ್ನು ಸದಸ್ಯರಿಗೆ ಓದಿ ಹೇಳುವಾಗ, ಸದನದಲ್ಲಿರುವ ಸದಸ್ಯರು ತಮ್ಮ ತಮ್ಮ ಸ್ಥಳದಲ್ಲೇ ಎದ್ದು ನಿಂತು ಗೌರವ ಸೂಚಿಸುವ ಹೊಸ ಸಂಪ್ರದಾಯ ವನ್ನು ಅನಂತಶಯನಂ ಆರಂಭಿಸಿದರು.  1957ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.