ಬುಧವಾರ, ಸೆಪ್ಟೆಂಬರ್ 30, 2020
22 °C

ಸ್ವಂತ ಮನೆ ಕನಸಿಗೆ ವಿಭಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಂತ ಮನೆ ಕನಸಿಗೆ ವಿಭಿನ್ನ

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿಯಂತಹ ಮಹಾ ನಗರಗಳಲ್ಲಿ ಸ್ವಂತಕ್ಕೊಂದು ಮನೆ ಮಾಡಿಕೊಳ್ಳುವುದು, ನಿವೇಶನ ಖರೀದಿಸುವುದು ಎಂದರೆ ಸುಲಭವಲ್ಲ.ಅದರಲ್ಲೂ ಮಧ್ಯಮ ವರ್ಗದವರಿಗಂತೂ ಅದು ಬಹಳ ಕಷ್ಟದ ಮಾತು...

ಬಹಳ ಶ್ರಮವಹಿಸಿ ಉಳಿಸಿದ ಹಣದ ಜತೆಗೆ ಮನೆಯಲ್ಲಿರುವ ಬಂಗಾರ ಮಾರಿಯೋ, ಸಾಲ ಮಾಡಿಯೋ ನಿವೇಶನ ಖರೀದಿಸಿದರೂ ಅದರ ಮುಂದಿನ ಹೆಜ್ಜೆ, ಅಂದರೆ ಮನೆ ನಿರ್ಮಿಸುವುದು ಭಾರಿ ಕಷ್ಟದ್ದು.ಬೆಂಗಳೂರಿನಲ್ಲಂತೂ ನಗರದ ಹೃದಯಭಾಗದಲ್ಲಿ ನಿವೇಶನ ಖರೀದಿ ಸಾಮಾನ್ಯರಿಗೆ ಅಸಾಧ್ಯವೇ ಸರಿ. ಅಲ್ಲೆಲ್ಲ ಒಂದು ಅಡಿಗೇ ವಜ್ರದಷ್ಟು ಬೆಲೆ. ವಿಧಾನಸೌಧ, ಮೆಜೆಸ್ಟಿಕ್‌ನಿಂದ 15 ಕಿ.ಮೀ. ದೂರ ಸಾಗಿದರೂ ನಿವೇಶನ ಸಿಗುವುದು ಕಷ್ಟ. ಸಿಕ್ಕರೂ ಬೆಲೆ ರೂ. 40-50 ಲಕ್ಷ ಮೀರಿರುತ್ತದೆ.ಉದಾಹರಣೆಗೆ ಜೆಪಿ ನಗರ 7ನೇ ಬ್ಲಾಕ್‌ನಾಚೆಗಿನ ಆರ್‌ಬಿಐ ಬಡಾವಣೆ. ಇದು ವಿಧಾನಸೌಧ, ಮೆಜೆಸ್ಟಿಕ್‌ನಿಂದ 14 ಕಿ.ಮೀ. ದೂರದಲ್ಲಿದೆ. ಈ ಬಡಾವಣೆಯಲ್ಲಿ ಒಂದು ಅಡಿ ನಿವೇಶನದ ಬೆಲೆಯೇ 8 ಸಾವಿರ ರೂಪಾಯಿ ಇದೆ. ಅಂದರೆ 30-40 ಅಡಿ ನಿವೇಶನಕ್ಕೆ ರೂ. 96 ಲಕ್ಷ!ಈ ಬಡಾವಣೆಯ ಮಗ್ಗಲಲ್ಲಿಯೇ ಗೌರವ ನಗರ ಬಡಾವಣೆ. ಇಲ್ಲಿಯೂ ಹೆಚ್ಚೂ ಕಡಿಮೆ ಅಷ್ಟೇ ದರ. ಇಲ್ಲಿಂದ 1 ಕಿ.ಮೀ. ದೂರದ ಶ್ರೀನಿಧಿ ಬಡಾವಣೆ, ಓಲ್ಡ್ ಬ್ಯಾಂಕ್ ಕಾಲೋನಿ ಇವೆ(ವಿಧಾನಸೌಧದಿಂದ 15 ಕಿ.ಮೀ). ಇಲ್ಲಿಯೂ ನಿವೇಶನದ ಬೆಲೆ ಚದರಡಿಗೆ ರೂ. 3000ದಿಂದ 3500 ಇದೆ. ಅಂದರೆ 30-40 ಅಡಿ ನಿವೇಶನಕ್ಕೆ ರೂ. 36 ಲಕ್ಷದಿಂದ ರೂ. 42 ಲಕ್ಷದವರೆಗೂ ತೆರಬೇಕಾಗುತ್ತದೆ.ಹಾಗಾದರೆ ಈ ಮಹಾನಗರದಲ್ಲಿ ದಶಕಗಳಿಂದ ವಾಸವಿರುವ ಮಧ್ಯಮ ವರ್ಗದವರು ಸ್ವಂತಕ್ಕೊಂದು ಮನೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವೇ? ಇರುವ ಹಣ ನಿವೇಶನ ಖರೀದಿಗೆ ಸರಿಹೋದರೆ ಮನೆ ನಿರ್ಮಿಸುವುದು ಹೇಗೆ?ಅಪಾರ್ಟ್‌ಮೆಂಟ್‌ನಲ್ಲಿ ಎರಡು ಕೊಠಡಿಗಳ ಒಂದು ಪುಟ್ಟ ಫ್ಲಾಟ್ ಖರೀದಿಸೋಣ ಎಂದುಕೊಂಡರೂ ನಿಮ್ಮ ಬಜೆಟ್ ಮಿತಿಯಲ್ಲಿ ನೀವು ಬಯಸುವ ಎಲ್ಲ ಸವಲತ್ತು ಇರುವ ಮನೆ ಸಿಗದೇಹೋಗಬಹುದು.ಹಾಗಾದರೆ `ಸ್ವಂತ ಮನೆ~ ಕನಸು ನನಸಾಗುವುದಾದರೂ ಹೇಗೆ? ಅದಕ್ಕೂ ಕೆಲವು ಪರಿಹಾರ ಸೂತ್ರಗಳಿವೆ.ವೈದ್ಯ ಸುಜಯ್ ಕುಮಾರ್(ಹೆಸರು ಬದಲಿಸಿದೆ) ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ಇವರಿಗೆ ರಾಜ್ಯದ ರಾಜಧಾನಿಯಲ್ಲೊಂದು ಸ್ವಂತ ಮನೆ ಹೊಂದಬೇಕೆಂಬ ಆಸೆಯಾಯಿತು.ಉಳಿತಾಯದ ಹಣವಿದ್ದುದು ರೂ. 20 ಲಕ್ಷ. ಇಷ್ಟು ಕಡಿಮೆ ಮೊತ್ತಕ್ಕೆ ಬೆಂಗಳೂರಿನಲ್ಲಿ ನಿವೇಶನವೂ ಸಿಗದು. ನಿವೇಶನ ಖರೀದಿಗೆಂದರೆ ಬ್ಯಾಂಕ್ ಸಾಲ ಕೊಡುವುದಿಲ್ಲ. ಜತೆಗೆ 30ರಿಂದ 40 ಲಕ್ಷದಲ್ಲಿಯೇ ಮನೆ ಆಗಬೇಕು ಎಂಬ ಬಜೆಟ್ ಮಿತಿ. ನಗರದ ಹೃದಯ ಭಾಗದಿಂದ 15 ಕಿ.ಮೀ. ದೂರದ ಹೊಸ ಬಡಾವಣೆಗಳಲ್ಲಿಯೇ ನಿವೇಶನ ಬೆಲೆ ರೂ. 35-40 ಲಕ್ಷವಿರುವಾಗ ಇಷ್ಟು ಸಣ್ಣ ಬಜೆಟ್‌ನಲ್ಲಿ `ಸ್ವಂತ ಮನೆ~ ಹೇಗೆ ಸಾಧ್ಯ?ಆಗ ಮಾರ್ಗದರ್ಶನ ಮಾಡಿದ್ದು ಬಾಲ್ಯದ ಗೆಳೆಯರು. ಅವರು ವಾಸವಿದ್ದ ರಸ್ತೆಯಲ್ಲಿಯೇ 8 ಮನೆಗಳ ಅಪಾರ್ಟ್‌ಮೆಂಟ್‌ವೊಂದರಲ್ಲಿ 30 ಲಕ್ಷಕ್ಕೆ ಒಂದು ಫ್ಲಾಟ್ ಮಾರಾಟಕ್ಕಿರುವುದನ್ನು ಸುಜಯ್ ಕುಮಾರ್ ಗಮನಕ್ಕೆ ತಂದರು. ಮೂರು ಕೊಠಡಿ, ಒಂದರಲ್ಲಿ ಸ್ನಾನಗೃಹವೂ ಸೇರಿಕೊಂಡಂತಿದೆ, ಮತ್ತೆರಡು ಕೋಣೆಗಳಿಗೆ ಕಾಮನ್ ಬಾತ್ ರೂಂ, ದೊಡ್ಡ ಹಾಲ್, ವಿಶಾಲವಾದ ಅಡುಗೆ ಕೋಣೆ, ಪುಟ್ಟದಾದ ಪೂಜಾಗೃಹ, ತೇಗದ ಮರದ ಬಾಗಿಲು, ಎರಡು ರೂಂನಲ್ಲಿ ವಾಲ್ ಟು ವಾಲ್ ವಾರ್ಡ್‌ರೋಬ್ ಮತ್ತು ಎರಡು ದೊಡ್ಡ ಮಂಚಗಳು, ಹಾಲ್‌ನಲ್ಲಿ ಪ್ಲೈವುಡ್‌ನಿಂದ ನಿರ್ಮಿಸಿದ ದೊಡ್ಡ ಷೋಕೇಸ್...ಅಂದರೆ ಪೀಠೋಪಕರಣಗಳಿಂದ ಅಲಂಕೃತ ಮನೆ.... ರೂ. 30 ಲಕ್ಷಕ್ಕೆ ಇದಕ್ಕಿಂತಲೂ ಹೆಚ್ಚಿನದು ಬೇರೆಲ್ಲೂ ಸಿಗದು. ಅದರಲ್ಲೂ ಗೆಳೆಯರ ಜತೆಗೇ ಇರಬಹುದು ಎಂಬುದು ಸುಜಯ್ ಕುಮಾರ್ ಖುಷಿಗೂ ಕಾರಣವಾಯಿತು.ಮನೆ ಖರೀದಿಗಾದ್ದರಿಂದ ಬ್ಯಾಂಕ್ ಸಹ ರೂ. 10 ಲಕ್ಷ ಸಾಲ ನೀಡಿತು. ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಬಾಡಿಗೆದಾರರೂ ಬಂದರು. ಸ್ಥಿರಾಸ್ತಿ ಮೊದಲಿಗೇ ಮಾಸಿಕ ರೂ. 9000 ಬಾಡಿಗೆ ದುಡಿಯಲಾರಂಭಿಸಿತು. ಅಡ್ವಾನ್ಸ್ ರೂಪದಲ್ಲಿ ಬಂದ ರೂ. 90000 ತಕ್ಷಣವೇ ಬ್ಯಾಂಕ್ ಸಾಲಕ್ಕೆ ಜಮಾ ಆಯಿತು.ಸಾಲದ ಅಸಲೂ ಕಡಿಮೆ ಆಯಿತು. ಬಾಡಿಗೆ ಹಣ ಬ್ಯಾಂಕ್‌ಗೆ ಕಂತು ರೂಪದಲ್ಲಿ ಸೇರುವಂತಾಲಾಯಿತು. ಇನ್ನು 15 ವರ್ಷಗಳಲ್ಲಿ ಗೃಹಸಾಲ ತೀರಲಿದೆ. ಇನ್ನೇನು ಚಿಂತೆ. `ಸ್ವಂತ ಮನೆ~ ಚಿಂತೆಗೆ ಸುಲಭದಲ್ಲಿ ಸಿಕ್ಕ ಪರಿಹಾರಗಳಲ್ಲಿ ಇದೂ ಒಂದು ಬಗೆಯದು.

`ಯಾರದ್ದೋ ನಿವೇಶನ- ಇನ್ನಾರದೋ ಮನೆ~ಇದು ಇನ್ನೊಂದು ಬಗೆಯ ಪರಿಹಾರ!

ಶ್ರೀನಿವಾಸ(ಹೆಸರು ಬದಲಿಸಿದೆ) ಜಾಹೀರಾತು ಸಂಸ್ಥೆಯೊಂದರ ಉದ್ಯೋಗಿ. 25 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿಯೇ ವಾಸ. `ಸ್ವಂತ ಮನೆ~ ಹೊಂದಬೇಕು ಎಂಬ ಕನಸೂ ಅಷ್ಟೇ ಅವಧಿಯದು. ಈವರೆಗೆ ತೆತ್ತ ಬಾಡಿಗೆಯೇ ಅದೆಷ್ಟೋ ಲಕ್ಷ.ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಕಚೇರಿ ಓಡಾಟ, ಪ್ರವಾಸ, ಹಬ್ಬ-ಹರಿದಿನ ಎಲ್ಲ ಖರ್ಚುಗಳನ್ನೂ ಸರಿ ಹೋಗಿಸಿಕೊಂಡು ಉಳಿಸಲು ಸಾಧ್ಯವಾಗಿದ್ದು ಕೆಲವೇ ಲಕ್ಷ.

ಹಲವು ವರ್ಷಗಳ ಪ್ರಯತ್ನದ ನಂತರ ಬಿಡಿಎ ಮೂಲಕ ನಗರದಾಚೆ 12-13 ಕಿ.ಮೀ. ದೂರದ ಹೊಸ ಬಡಾವಣೆಯಲ್ಲಿ 40-60 ಅಡಿ ನಿವೇಶನ ಅಲಾಟ್ ಆಯಿತು. ಉಳಿತಾಯದ ಹಣ ನಿವೇಶನಕ್ಕಾಗಿ ಸ್ವಲ್ಪ ಉಳಿಯಿತು.

 

ಅಷ್ಟು ಕಡಿಮೆ ಹಣದಲ್ಲಿ ಮನೆ ಕಟ್ಟಿಸಲಾದೀತೆ? ಮಡದಿ ಸಂಬಳದಿಂದಾದ ಉಳಿತಾಯ ಮೊತ್ತ ಸೇರಿಸಿದರೂ ಅಷ್ಟು ದೊಡ್ಡ ನಿವೇಶನದಲ್ಲಿ 16 ಚದರ ವಿಸ್ತಾರದ ಮನೆ ಕಟ್ಟಲು ಸಾಲದು. ಅಲ್ಲದೆ 6-7 ವರ್ಷಗಳೇ ಕಳೆದಿದ್ದರೂ ಹೊಸ ಬಡಾವಣೆಯಲ್ಲಿ ನಿರ್ಮಾಣವಾದ ಮನೆಗಳು ಅಲ್ಲೊಂದು ಇಲ್ಲೊಂದು ಎನ್ನುವಂತಿವೆ.ಧೈರ್ಯ ಮಾಡಿ ಅಲ್ಲಿ ಮನೆ ಕಟ್ಟಿದರೂ ತನ್ನ ಕಚೇರಿಗೆ, ಮಡದಿಯ ಕಚೇರಿಗೆ, ಮಕ್ಕಳ ಶಾಲೆಗೆ ಬಹಳ ದೂರ. ಹಾಗೆಂದು ಇನ್ನೂ ಎಷ್ಟು ವರ್ಷ ಮನೆ ಬಾಡಿಗೆ ಎಂದು ಹಣ ವ್ಯಯಿಸುವುದು? ಇದೇ ಚಿಂತೆಯಲ್ಲಿದ್ದಾಗ ಪಕ್ಕದ ಮನೆಯ ಅಂಗಳದಲ್ಲಿಯೇ `ಸ್ವಂತ ಮನೆ~ಗೊಂದು ಪರಿಹಾರ ಕಂಡಿತು.ಪಕ್ಕದ 30-40 ಅಡಿ ಉದ್ದಗಲದ ನಿವೇಶನದಲ್ಲೊಂದು ಹಳೆ ಮನೆ. ಅದಕ್ಕೂ ಹಲವು ದಶಕಗಳಷ್ಟು ವಯಸ್ಸಾಗಿತ್ತು. ಮಾಲೀಕರಿಗೂ ಹಳೆ ಮನೆ ಕೆಡವಿ ಆಧುನಿಕ ಶೈಲಿಯ ಹೊಸ ಮನೆ ಕಟ್ಟಿಸಬೇಕೆಂಬ ತವಕ. ಅವರ ಕೈಯಲ್ಲಿ ಹೆಚ್ಚು ಹಣವೂ ಇಲ್ಲ. ಇಳಿವಯಸ್ಸಿನಲ್ಲಿ ಗೃಹಸಾಲದ ಹೊರೆ ಹೊರಲೂ ಇಷ್ಟವಿಲ್ಲ. `ಹೊಸ ಮನೆ~ಯ ಕನಸು ಅವರನ್ನೂ ವರ್ಷಗಳಿಂದ ಕಾಡುತ್ತಲೇ ಇದ್ದಿತು.ನೆರೆಹೊರೆಯ ಈ `ಸಮಾನ ಕನಸುಗಾರ~ರ ಮಿತ್ರರೊಬ್ಬರು ಬಹಳ ಸುಲಭದಲ್ಲಿ ಪರಿಹಾರ ಸೂಚಿಸಿದರು. ಹಳೆಮನೆ ಕೆಡವಿ ಹೊಸದಾಗಿ ಎರಡು ಅಂತಸ್ತಿನ ಮನೆ ನಿರ್ಮಿಸುವುದು. ಮನೆ ನಿರ್ಮಾಣಕ್ಕೆ ಹಳೆ ಮನೆಯ ಮಾಲೀಕರು ನಯಾಪೈಸೆ ಖರ್ಚು ಮಾಡಬೇಕಿಲ್ಲ. ಇಡೀ ಕಟ್ಟಡ ನಿರ್ಮಾಣಕ್ಕೆ ಶ್ರೀನಿವಾಸ ಹಣ ವಿನಿಯೋಗಿಸುವುದು. ಆದರೆ, ಅವರು ನಿವೇಶನಕ್ಕಾಗಿ ಹಣ ವಿನಿಯೋಜಿಸಬೇಕಿಲ್ಲ.ನೆಲ ಅಂತಸ್ತನ್ನು(ಸೆಲ್ಲಾರ್) ವಾಹನ ನಿಲುಗಡೆಗೆ ಮೀಸಲಿಡುವುದು. ಮೊದಲ ಅಂತಸ್ತಿನಲ್ಲಿ ಶ್ರೀನಿವಾಸ ಅವರಿಗೆ ಎರಡು ಕೊಠಡಿಗಳ ಮನೆ, ಎರಡನೇ ಅಂತಸ್ತಿನಲ್ಲಿನ ಮನೆ ನಿವೇಶನದ ಒಡೆಯರಿಗೆ. ತಾರಸಿಯ ಮೇಲಿನ ಭಾಗ ಇಬ್ಬರಿಗೂ ಸೇರಿದ್ದು. ಅದರ ಮೇಲೆ ಮತ್ತೆ ಮನೆ ನಿರ್ಮಿಸುವುದಾದರೆ ಇಬ್ಬರಿಗೂ ಸಮಪಾಲು-ಸಮಾನ ವೆಚ್ಚ.ಅದು ಸರಿ, ತಮ್ಮ ಬಿಡಿಎ ನಿವೇಶನದಲ್ಲಿ ಮನೆ ನಿರ್ಮಿಸಲು ಹಣ ಸಾಲದೆ ಸ್ವಂತ ಮನೆ ಕನಸು ಮುಂದೂಡುತ್ತಿದ್ದ ಶ್ರೀನಿವಾಸ ಎರಡಂತಸ್ತಿನ ಮನೆಗೆ ಹಣ ಹೊಂದಿಸುವುದಾದರೂ ಹೇಗೆ? ಅದಕ್ಕೂ ಅಲ್ಲಿ ಪರಿಹಾರವಿದ್ದಿತು. ನಗರದಾಚೆಯ ನಿವೇಶನ ಮಾರುವುದು. ಪಕ್ಕದ ಮನೆಯ ಹಳೆಯ ಕಟ್ಟಡ ಕೆಡವಿದ ಜಾಗದಲ್ಲಿ ಹೊಸ ಮನೆ ನಿರ್ಮಿಸಲು ಅದೇ ಹಣ ಬಳಸುವುದು!ನಿವೇಶನ ಮಾರಿದ್ದರಿಂದ ರೂ. 40 ಲಕ್ಷ ಶ್ರೀನಿವಾಸ ಅವರ ಕೈ ಸೇರಿತು. ನಗರದ ಹೃದಯ ಭಾಗದಲ್ಲಿ `ಸ್ವಂತ ಮನೆ~ ಕನಸು ನನಸಾಗುವ ಮುಹೂರ್ತವೂ ಬಂದಿತು.

`ಯಾರದ್ದೋ ನಿವೇಶನ-ಇನ್ನಾರದೋ ಹಣದಲ್ಲಿ ಮನೆ~... ಈ ಪರಿಹಾರ ಸೂತ್ರ ಅಕ್ಕಪಕ್ಕದ ಮನೆಯವರಿಬ್ಬರಿಗೂ ಒಪ್ಪಿಗೆಯಾಯಿತು. ವಕೀಲರ ಸಮಕ್ಷಮದಲ್ಲಿ ಕರಾರು ಪತ್ರವೂ ಆಯಿತು. ಹಳೆಯ ಕಟ್ಟಡದ ನಿವೇಶನ ಇಬ್ಬರ ಹೆಸರಿಗೂ ನೋಂದಣಿ ಆಯಿತು.

ಜಂಟಿ ಮಾಲೀಕತ್ವ ಸ್ಥಾಪನೆ ಆಯಿತು. ಈಗ ಹಳೆಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಅದಾಗಲೇ ತಳಪಾಯದ ಕೆಲಸವೂ ನಡೆಯುತ್ತಿದೆ.

ಕೈಯಲ್ಲಿ ಸ್ವಲ್ಪವೇ ಹಣವಿದೆ. ಸ್ವಂತ ಮನೆ ಕನಸು ನನಸಾಗಿಸುವುದು ಅಸಾಧ್ಯ ಎಂದುಕೊಂಡು ಸುಮ್ಮನೇ ಇದ್ದಿದ್ದರೆ ಈ ಎರಡೂ ಪ್ರಕರಣಗಳು ಜರುಗುತ್ತಲೇ ಇರಲಿಲ್ಲ.ಮನಸ್ಸಿದ್ದಲ್ಲಿ ಮಾರ್ಗ... ಅಲ್ಲ `ಸ್ವಂತ ಮನೆ~ ಸಾಧ್ಯ ಎಂಬುದಕ್ಕೆ ಇವೆರಡೂ ಒಳ್ಳೆಯ ಉದಾಹರಣೆ ಅಲ್ಲವೇ!ನೀವೂ ಬೆಂಗಳೂರಿನಲ್ಲಿಯೋ, ನೀವಿರುವ ನಗರದಲ್ಲಿಯೋ ಈ ಎರಡೂ ಸೂತ್ರಗಳು ಅಳವಡಿಸಿಕೊಳ್ಳಲು ಸಾಧ್ಯವೇ ಪರಿಶೀಲಿಸಿ, `ಸ್ವಂತಮನೆ~ ಕನಸು ನನಸಾಗಿಸಿಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.