ಭಾನುವಾರ, ಮೇ 16, 2021
24 °C
ತಾಲ್ಲೂಕಿನಾದ್ಯಂತ ಡೆಂಗೆ ಭೀತಿ, ಪಟ್ಟಣದಲ್ಲಿ ಕೊಳಕು ಸ್ಥಿತಿ

ಸ್ವಚ್ಛತೆಗೂ ಮಧುಗಿರಿಗೂ ಬಲು ದೂರ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ / ಪಿ.ಎಂ.ಉಮೇಶ್ Updated:

ಅಕ್ಷರ ಗಾತ್ರ : | |

ಸ್ವಚ್ಛತೆಗೂ ಮಧುಗಿರಿಗೂ ಬಲು ದೂರ

ಮಧುಗಿರಿ: ಶಂಕಿತ ಡೆಂಗೆ ಪ್ರಕರಣದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪುವುದರೊಂದಿಗೆ ಪಟ್ಟಣದಲ್ಲಿ ಕಂಡು ಬರುತ್ತಿರುವ ಕೊಳಕು ವಾತಾವರಣದ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಪುರಸಭೆಯು ಪಟ್ಟಣದ ಸ್ವಚ್ಛತೆಗಾಗಿ ಒಟ್ಟು 39 ಪೌರ ಕಾರ್ಮಿರಿದ್ದಾರೆ. ಅವರಲ್ಲಿ 19 ಮಂದಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು. ಖಾಯಂ ನೌಕರರಿಗೆ ವಯಸ್ಸಾಗಿರುವ ಕಾರಣ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ 19 ಮಂದಿ ಕಳೆದ 2 ತಿಂಗಳಿನಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವುದರಿಂದ ಸ್ವಚ್ಛತಾ ಕಾರ್ಯ ನೆನೆಗುದಿಗೆ ಬಿದ್ದಿದೆ.ನಗರದ ಎಲ್ಲ ಖಾಲಿ ನಿವೇಶನಗಳಲ್ಲಿ ಕಸದ ಚೆಲ್ಲಾಡುತ್ತಿದ್ದು, ಹಂದಿ, ಸೊಳ್ಳೆ, ಇಲಿಗಳ ಆವಾಸಸ್ಥಾನವಾಗಿದೆ. ಕಸ ಸಂಗ್ರಹ ವ್ಯವಸ್ಥೆ ಹಳಿ ತಪ್ಪಿರುವ ಕಾರಣ ಸಾರ್ವಜನಿಕರು ಚರಂಡಿಗೆ ಕಸ ಸುರಿಯುತ್ತಿದ್ದಾರೆ.ಹೀಗಾಗಿ ಚರಂಡಿಗಳಲ್ಲಿ ನೀರು ಹರಿಯುತ್ತಿಲ್ಲ. ನಿಂತ ಕೊಳಚೆ ನೀರು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಹಂದಿಗಳ ಸಂಖ್ಯಾಸ್ಫೋಟವು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ವಾಹನಗಳಿಗೆ ಅಡ್ಡಬರುವ ಹಂದಿಗಳನ್ನು ಚಾಲಕರು ಹಿಡಿ ಶಾಪ ಹಾಕಿ ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಹಂದಿ ಮತ್ತು ನಾಯಿಗಳನ್ನು ಹಿಡಿಯಲು ಪುರಸಭೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಪಟ್ಟಣದ ಬಹುತೇಕ ಹೊಟೆಲ್‌ಗಳಲ್ಲಿ ಸ್ವಚ್ಛತೆ ಮರೀಚಿಕೆ. ಸ್ವಚ್ಛತೆ ಕಾಪಾಡದ ಹೊಟೆಲ್‌ಗಳ ವಿರುದ್ಧ ಪುರಸಭೆ ಅಧಿಕಾರಿಗಳು ದಾಳಿ ನಡೆಸಿದ ಉದಾಹರಣೆಯೇ ಇಲ್ಲಿಲ್ಲ. ಏಕಶಿಲಾ ಬೆಟ್ಟ ನೋಡಲು ಬರುವ ಪ್ರವಾಸಿಗರು ಹೊಟೆಲ್‌ಗಳಲ್ಲಿ ಊಟ ಮಾಡಲು ಹೆದರಬೇಕಾದ ವಾತಾವರಣ ಇಲ್ಲಿದೆ.ಕುಡಿಯುವ ನೀರಿನ ಪೈಪ್ ಹಾಕಲೆಂದು ಹಲವು ರಸ್ತೆಗಳನ್ನು ಅಗೆಯಲಾಗಿದೆ. ಅವುಗಳಲ್ಲಿ ಗುಂಡಿ ಬಿದ್ದಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ. ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನ ಬೆಳೆಯುತ್ತಿದೆ.ವಾರ್ಡ್‌ವಾರು ಸ್ವಚ್ಛತೆ

ಮುಖ್ಯಮಂತ್ರಿಗಳ ನಗರೋತ್ಥಾನ ನಿಧಿಯಡಿ ಮಧುಗಿರಿಗೆ ರೂ 5 ಕೋಟಿ ಮುಂಜೂರಾಗಿದೆ. ಹಲವು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರ ಸಿಗದ ಕಾರಣ ಡಾಂಬರೀಕರಣ ನಡೆದಿಲ್ಲ.ಪೌರ ಕಾರ್ಮಿಕರ ಸಮಸ್ಯೆಯನ್ನು ರಾಜೀ ಮೂಲಕ ಪರಿಹರಿಸಲಾಗಿದೆ ಕಳೆದ ಒಂದು ವಾರದಿಂದ ವಾರ್ಡವಾರು ಸ್ವಚ್ಛತೆ ಪ್ರಗತಿಯಲ್ಲಿದೆ. ಸೊಳ್ಳೆ ನಿಯಂತ್ರಣಕ್ಕಾಗಿ ಪ್ರತಿದಿನ ಪಟ್ಟಣದಲ್ಲಿ ಫಾಗಿಂಗ್ (ಹೊಗೆ) ಕಡ್ಡಾಯಗೊಳಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಮಾರುತಿಶಂಕರ್ ತಿಳಿಸಿದರು.

ಫುಟ್‌ಪಾತ್ ಒತ್ತುವರಿ

ಫುಟ್‌ಪಾತ್‌ಗಳನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಹೀಗಾಗಿ ಚರಂಡಿಗಳು ಕಟ್ಟಿಕೊಳ್ಳುತ್ತಿವೆ. ಅಧಿಕಾರಿಗಳು ಅವರದ್ದೇ ಸಮಸ್ಯೆಗಳಲ್ಲಿ ಮುಳುಗಿದ್ದಾರೆ. ಪುರಸಭೆಯಲ್ಲಿ ಹೇಳುವವರು- ಕೇಳುವವರು ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

- ಮಂಜುನಾಥ್, ಮಾಜಿ ಪುರಸಭೆ ಸದಸ್ಯ, ಮಧುಗಿರಿಮಧುಗಿರಿ ಸ್ಥಿತಿ ಅಧ್ವಾನ


ಜಿಲ್ಲೆಯ ಇತರ ತಾಲ್ಲೂಕು ಕೇಂದ್ರಗಳಿಗೆ ಹೋಲಿಸಿ ನೋಡಿದರೂ ಮಧುಗಿರಿಯ ಸ್ಥಿತಿ ಬೇಸರ ಹುಟ್ಟಿಸುತ್ತದೆ. ಸ್ವಚ್ಛತೆ, ರಸ್ತೆ, ಬೀದಿದೀಪದ ನಿರ್ವಹಣೆ ಸರಿಯಿಲ್ಲ, ಇಂಥ ಪಟ್ಟಣದಲ್ಲಿ ಯಾಕಾದರೂ ವಾಸವಿದ್ದೇವೆ ಎಂದು ಬೇಸರ ಬರುತ್ತದೆ.

- ಖಲೀಂ, ಮೆಕ್ಯಾನಿಕ್, ಮಧುಗಿರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.