ಸೋಮವಾರ, ಮಾರ್ಚ್ 1, 2021
29 °C
ಕವಳಿಕುಪ್ಪಿ ಬಳಿಯ ತುಂಗಾ ಮೇಲ್ದಂಡೆ ಯೋಜನಾ ಕಚೇರಿ

ಸ್ವಚ್ಛತೆಯೇ ಇಲ್ಲ...ಅವ್ಯವಸ್ಥೆಯೇ ಎಲ್ಲ!!

ಪ್ರಜಾವಾಣಿ ವಾರ್ತೆ/ ವಿನಾಯಕ ಭೀಮಪ್ಪನವರ Updated:

ಅಕ್ಷರ ಗಾತ್ರ : | |

ಸ್ವಚ್ಛತೆಯೇ ಇಲ್ಲ...ಅವ್ಯವಸ್ಥೆಯೇ ಎಲ್ಲ!!

ರಟ್ಟೀಹಳ್ಳಿ: ಕಸದಿಂದ ಕೂಡಿದ ಆವರಣ, ಕೋಣೆಗಳಲ್ಲಿ ಎಲ್ಲೆಂದರಲ್ಲಿ ದೂಳು, ದೂಳಿನಲ್ಲಿ ಮಿಂದ ಕಡತಗಳು, ಫ್ಯಾನುಗಳು, ಕುರ್ಚಿ, ಮೇಜುಗಳು, ಉಗ್ರಾಣವಾಗಿರುವ ಕಂಪ್ಯೂಟರ್ ಕೊಠಡಿಗಳು, ನೀರು ಕಾಣದ ಶೌಚಾಲಯಗಳು, ಬಾಗಿಲುಗಳೇ ಇಲ್ಲದ ಉಗ್ರಾಣಗಳು, ಕಚೆೇರಿ ಎದುರು ಅನೇಕ ವರ್ಷಗಳಿಂದ ಕೆಟ್ಟು ನಿಂತಿರುವ ಇಲಾಖೆಗೆ ಸಂಬಂಧಿಸಿದ ಲಾರಿ...ಇವೆಲ್ಲ ಕೋಟಿಗಟ್ಟಲೆ ವೆಚ್ಚ ಮಾಡಿ ರೈತರ ಹೊಲಗಳಿಗೆ ನೀರು ಹಾಯಿಸುವ ಕಾಯಕದಲ್ಲಿ ತೊಡಗಿರುವ ರಟ್ಟೀಹಳ್ಳಿಯ ಹೊರವಲಯದ ಕವಳಿಕುಪ್ಪಿ ಬಳಿ ನಿರ್ಮಿಸಲಾದ ತುಂಗಾ ಮೇಲ್ದಂಡೆ ಕಚೆೇರಿಯ ಹಾಲಿ ಚಿತ್ರಣ.ಹೊರವಲಯದ ಕವಳಿಕುಪ್ಪಿ ಬಳಿಯ ಗುಡ್ಡದಲ್ಲಿ ಸುಮಾರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಲಾದ ಸುಸಜ್ಜಿತವಾದ ಕಟ್ಟಡಗಳು, ಸುಂದರವಾದ ಪರಿಸರದ ಹಿನ್ನಲೆಯಲ್ಲಿ ವಸತಿ ಗೃಹಗಳು, ಆಂಜನೇಯ ದೇವಸ್ಥಾನ, ಉಗ್ರಾಣಗಳು, ನೀರಿನ ಸೌಲಭ್ಯ ಹೀಗೆ ಏನೊಂದು ಕೊರತೆಯಿಲ್ಲದೆ ಕೆಲವೇ ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಅವ್ಯವಸ್ಥೆ ಆಗರವಾಗಿವೆ.ಮೊದ–ಮೊದಲು ಭರದಿಂದ ಕಾಮಗಾರಿ ನಡೆದಾಗ ಸಿಬ್ಬಂದಿಗಳಿಂದ, ರೈತರಿಂದ ತುಂಬಿ ತುಳುಕುತ್ತಿದ್ದ ಕಚೆೇರಿ ಆವರಣ, ಕಾಮಗಾರಿ ಮುಗಿಯುತ್ತ ಬಂದಂತೆ ಒಂದೊಂದೇ ಕಟ್ಟಡಗಳು ಖಾಲಿ ಉಳಿಯಲು ಪ್ರಾರಂಭಿಸಿದವು. ರಟ್ಟೀಹಳ್ಳಿ ಯಿಂದ ಮೂರು ಕಿ.ಮೀ. ದೂರವಿರುವ ಕಚೆೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಟ್ಟಣವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ಪ್ರತಿ ವಸ್ತುವಿಗೂ ಪಟ್ಟಣಕ್ಕೆ ಬರುವ ಪ್ರಮೇಯವಿರುವುದರಿಂದ ಒಂದೊಂದೇ ಕುಟುಂಬಗಳು ವಸತಿ ಗೃಹ ಖಾಲಿ ಮಾಡುತ್ತ ಪಟ್ಟಣ ಸೇರಿದರು. ಹೀಗೆ ವರ್ಷಗಳಿಂದ ವಸತಿ ಗೃಹಗಳು ಖಾಲಿ ಉಳಿದಿವೆ. ಪ್ರಸ್ತುತ ಮೆಕ್ಕೆಜೋಳವನ್ನು ವಸತಿ ಗೃಹಗಳಲ್ಲಿ ಸಂಗ್ರಹ ಮಾಡಿ ರುವುದರಿಂದ ಅಲ್ಲಿನ ಫ್ಯಾನುಗಳನ್ನು ಬಿಚ್ಚಿ ಕಚೆೇರಿಯಲ್ಲಿ ಇಡಲಾಗಿದೆ. ಅವು ದೂಳು ತಿನ್ನುತ್ತ ಬಿದ್ದಿವೆ.ಇನ್ನು ಶೌಚಾಲಯಗಳ ಬಗ್ಗೆ ಹೇಳುವುದೇ ಬೇಡ. ನೀರಿಲ್ಲದೆ ದುರ್ವಾಸನೆ ಹೊಡೆಯುತ್ತಿವೆ. ನೀರು ಕಾಣದೆ ಬಹಳಷ್ಟು  ವರ್ಷಗಳಾಗಿವೆ. ಸಿಬ್ಬಂದಿ ಕೊರತೆ ಹಿನ್ನಲೆಯಲ್ಲಿ ಸ್ವಚ್ಛತೆ ಹಿಂದೆ ಉಳಿದಿದೆ. ಸುಮಾರು ಐವತ್ತಕ್ಕೂ ಹೆಚ್ಚಿನ ಸಿಬ್ಬಂದಿ ಇರಬೇಕಾದ ಕಚೆೇರಿಯಲ್ಲಿ ಕೇವಲ ಹದಿನೈದು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಕಚೆೇರಿ ಆವರಣದಲ್ಲಿನ ಗಿಡಮರಗಳು ನೀರು ಕಾಣದೆ ಒಣಗಿ ನಿಂತಿವೆ.ಹಿರೇಕೆರೂರ ತಾಲ್ಲೂಕಿನ ಅನೇಕ ಹಳ್ಳಿಗಳ ಮೂಲಕ ಹಾದು ಹೋಗಿರುವ ತುಂಗಾ ಕಾಲುವೆಗಳ ಸ್ಥಿತಿ ಕೂಡಾ ಉತ್ತಮವಾಗಿಲ್ಲ. ಅಲ್ಲಲ್ಲಿ ಕಿತ್ತು ಹೋಗಿರುವ ಸಿಮೆಂಟು, ಹೂಳು ತುಂಬಿರುವ ಕಾಲುವೆ, ನಿರ್ಮಾಣವಾಗದ ಉಪ ಕಾಲುವೆಗಳು, ನೀರು ಬಿಟ್ಟಾಗ ಬಸಿಯುವಿಕೆಯಿಂದ ಬೆಳೆಹಾನಿ, ಕಾಲುವೆ ಕೊನೆಯಂಚಿನ ಹೊಲಗಳ ಸ್ಥಿತಿ ಶೋಚನೀಯ. ಹೀಗೆ ಕಾಲುವೆಗಳ ಸ್ಥಿತಿ ಒಂದಾದರೆ ರೈತರ ಸಮಸ್ಯೆ ಇನ್ನೊಂದು. ಇನ್ನೂ ಸಿಗದ ಪರಿಹಾರ. ರೈತರ ಪ್ರತಿಭಟನಾ ಕೇಂದ್ರವಾಗಿರುವ ಕಚೆೇರಿ  ಇಲ್ಲದಿದ್ದರೆ ಬಿಕೋ ಎನ್ನುತ್ತಿರುತ್ತದೆ.

ರೈತರು ಪ್ರತಿಭಟನೆ ಮಾಡಿದಾಗ ಹಿರಿಯ ಅಧಿಕಾರಿಗಳು ಕಚೆೇರಿಗೆ ಭೇಟಿ ನೀಡುತ್ತಾರೆ. ಉಳಿದಂತೆ ಅಧಿಕಾರಿಗಳು ಕಚೇರಿಗೆ ಬರುವುದು ವಾರಕ್ಕೆ ೩–೪ ದಿನ ಮಾತ್ರ. ಇಷ್ಟಾಗಿಯೂ ಕಚೇರಿ ಪರಿಸ್ಥಿತಿ ಸುಧಾರಿಸದೇ ಇರುವುದು ವಿಪರ್ಯಾಸ ಎಂದು ರೈತರು ದೂರುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.