ಶುಕ್ರವಾರ, ಜೂಲೈ 10, 2020
28 °C

ಸ್ವಯಂಚಾಲಿತ ಹವಾಮಾನ ಕೇಂದ್ರ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ಸಂಭಾಪೂರ ರಸ್ತೆಯಲ್ಲಿ ಇರುವ ಹವಾಮಾನ ಇಲಾಖೆ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಸ್ವಯಂಚಾಲಿತ ಹವಾಮಾನ ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿತು.ಈ ಸ್ವಯಂ ಚಾಲಿತ ಕೇಂದ್ರವು ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಹೊಂದಿದೆ. ಗಾಳಿಯ ತಾಪಮಾನ, ತೇವಾಂಶ, ವಾಯು ಒತ್ತಡ, ಮಳೆಯ ಪ್ರಮಾಣ, ಗಾಳಿಯ ವೇಗ, ಗಾಳಿ ಬೀಸುವ ದಿಕ್ಕು, ಮಣ್ಣಿನ ತೇವಾಂಶ, ಭೂಮಿಯ ತಾಪಮಾನ, ನೀರಿನ ಆವಿಯ ಮಟ್ಟ, ಸಸ್ಯದೆಲೆಗಳ ತಾಪಮಾನ, ಇಬ್ಬನಿಯ ಪ್ರಮಾಣ ಮೊದಲಾದವುಗಳನ್ನು ದಾಖಲಿಸುವ ತಾಂತ್ರಿಕ ಸಾಧನಗಳನ್ನು ಒಳಗೊಂಡಿರುವ ವ್ಯವಸ್ಥೆಯಾಗಿದೆ.30 ಅಡಿ ಗೋಪುರದ ಈ ತಾಂತ್ರಿಕ ವ್ಯವಸ್ಥೆಯು ವಾಯು ಸಂವೇದಿ ಉಪಗ್ರಹ ‘ಇನ್‌ಸ್ಯಾಟ್ 3ಎ’ ದೊಂದಿಗೆ ಸಂಪರ್ಕ ಹೊಂದಿದೆ. ಈ ಕೇಂದ್ರವು ಗಂಟೆಗೆ ಒಂದು ಬಾರಿ ಸ್ವಯಂ ಚಾಲಿತವಾಗಿಯೇ ದತ್ತಾಂಶಗಳನ್ನು ಪುಣೆಯ ಹವಾಮಾನ ವಿಜ್ಞಾನ ವಿಶ್ಲೇಷಣಾ ಕೇಂದ್ರಕ್ಕೆ ರವಾನಿಸುತ್ತದೆ. ಎಲ್ಲೆಡೆಗಳಿಂದ ಬರುವ ವಿವರಗಳನ್ನು ಪರಿಶೀಲಿಸಿ ಹವಾ ಮುನ್ಸೂಚನೆಯ ದತ್ತಾಂಶಗಳನ್ನು ಈ ಕೇಂದ್ರವು ಪುನಃ ಉಪಗ್ರಹಕ್ಕೆ ರವಾನಿಸುತ್ತದೆ. ತದನಂತರ ಈ ಎಲ್ಲ ಮಾಹಿತಿಗಳನ್ನು ಹವಾಮಾನ ಇಲಾಖೆಯ ಆಂತರ್ಜಾಲಕ್ಕೆ ರವಾನಿಸಲಾಗುತ್ತದೆ.ಸ್ವಯಂ ಚಾಲಿತ ಹವಾಮಾನ ಕೇಂದ್ರವು ಈ ಭಾಗದ ರೈತರು ಹಾಗೂ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಈ ಕೇಂದ್ರವನ್ನು ಉದ್ಘಾಟಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎಸ್.ಬಿ. ಪಲ್ಲೇದ ಹೇಳಿದರು.ಹವಾಮಾನ ಇಲಾಖೆಯ ಅಧಿಕಾರಿ ನಟರಾಜ ಸವಡಿ ಅಧ್ಯಕ್ಷತೆ ವಹಿಸಿದ್ದರು. ಹವಾಮಾನ ಇಲಾಖೆಯ ಹಿರಿಯ ತಜ್ಞ ಜಿ.ಆರ್.ನದಾಫ, ರವೀಂದ್ರ ಕೊಪ್ಪರ       ಜೆ.ಟಿ.ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣಸ್ವಾಮಿ, ಹಾಜರಿದ್ದರು. ರಾಜೀವ ರೋಖಡೆ ಸ್ವಾಗತಿಸಿದರು. ಅಂದಾನಯ್ಯ ಹಿರೇಮಠ ನಿರೂಪಿಸಿದರು. ರಾಮಚಂದ್ರಯ್ಯ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.