ಭಾನುವಾರ, ಏಪ್ರಿಲ್ 18, 2021
23 °C

ಸ್ವಯಂ ನಿಯಂತ್ರಣಕ್ಕೆ ಮಾಧ್ಯಮಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಯಂ ನಿಯಂತ್ರಣಕ್ಕೆ ಮಾಧ್ಯಮಗಳಿಗೆ ಸಲಹೆ

ಬೆಂಗಳೂರು: `ಪತ್ರಕರ್ತರು ನಿಷ್ಪಕ್ಷಪಾತದಿಂದ ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಿ ಸಮಾಜದ ಏಳಿಗೆಗೆ ಶ್ರಮಿಸಬೇಕು' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.

ನಗರದ ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸಂಘದ ಸಾಂಸ್ಕೃತಿಕ ಭವನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತರ ಇಂದು- ನಾಳಿನ ಸವಾಲುಗಳನ್ನು ಕುರಿತ `ಮಾಧ್ಯಮ ಕರ್ನಾಟಕ' ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಯಾವಾಗಲೂ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು. ಅಲ್ಲದೆ ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಬೇಕು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಾಧ್ಯಮಗಳು ತಮ್ಮ ಮೇಲೆ ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು' ಎಂದು ಅವರು ಕಿವಿಮಾತು ಹೇಳಿದರು.

`ನಗರದಲ್ಲಿ ಸುಂದರ ಕೆರೆಗಳು ಇದ್ದವು. ಈಗ ಆ ಕೆರೆಗಳೆಲ್ಲ ಮರೆಯಾಗಿವೆ. ಆ ಜಾಗದಲ್ಲಿ ಬಿಲ್ಡರ್‌ಗಳು ಕಟ್ಟಡ ನಿರ್ಮಿಸಿದ್ದಾರೆ' ಎಂದು ಅವರು ಕಿಡಿಕಾರಿದರು.

ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, `ಕೆಲವು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ಜನರು ನಂಬುತ್ತಿದ್ದರು. ಈಗ ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ಅನುಮಾನದಿಂದ ನೋಡುತ್ತಾರೆ. ಮಾಧ್ಯಮಗಳು ಒಂದು ಬಾರಿ ವಿಶ್ವಾಸಾರ್ಹತೆ ಕಳೆದುಕೊಂಡರೆ ಮರಳಿ ಪಡೆಯುವುದು ಅಸಾಧ್ಯ' ಎಂದು ಎಚ್ಚರಿಸಿದರು. 

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ, `ಮಾಧ್ಯಮ ಕರ್ನಾಟಕ' ಗ್ರಂಥ ಸಂಪಾದಕ ನಾಗೇಶ ಹೆಗಡೆ, ಪತ್ರಕರ್ತ ಸುಗತ ಶ್ರೀನಿವಾಸರಾಜು, ಉದಯಭಾನು ಕಲಾಸಂಘದ ಅಧ್ಯಕ್ಷ ಬಿ.ಕೃಷ್ಣ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಚ್.ಆರ್.ರಾಮಕೃಷ್ಣ ರಾವ್ ಮತ್ತಿತರರು ಹಾಜರಿದ್ದರು.

ಕೃತಿಯ ಬಗ್ಗೆ...

ಕೃತಿ: ಮಾಧ್ಯಮ ಕರ್ನಾಟಕ, ಬೆಲೆ-250 ರೂಪಾಯಿ

ಕೃತಿಯಲ್ಲಿ 31 ಲೇಖನಗಳು ಇವೆ.  ಕೃತಿಯಲ್ಲಿ ವರದಿಗಾರಿಕೆ, ಭಾಷಾ ಬಳಕೆ, ವಾಣಿಜ್ಯ, ಸಿನೆಮಾ, ಅಪರಾಧ, ಕೃಷಿ, ಅಭಿವೃದ್ಧಿ, ಸಂಪಾದಕೀಯ, ಆರ್‌ಟಿಐ, ನುಡಿಚಿತ್ರ, ಛಾಯಾಚಿತ್ರ ಇತ್ಯಾದಿ ವಿಷಯಗಳ ಕುರಿತು ಲೇಖನಗಳು ಇವೆ. ಪತ್ರಿಕೆಗಳು, ಟಿ.ವಿ, ರೇಡಿಯೊ, ಬ್ಲಾಗಿಂಗ್ ಸೇರಿದಂತೆ ವಿವಿಧ ರಂಗಗಳ ಬೀರಿದ ಒಳನೋಟ, ಸಮಗ್ರ ನೋಟಗಳ ಸಂಕಲನ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.