ಗುರುವಾರ , ಮಾರ್ಚ್ 4, 2021
18 °C

ಸ್ವರಮಂಡಲದ ನಾದದನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವರಮಂಡಲದ ನಾದದನಾವರಣ

ಅಂದು ಬನಾರಸ್ ಘರಾಣೆಯಲ್ಲಿ ವಿಶ್ವವಿಖ್ಯಾತ ಕಲಾವಿದರಾದ ಪಂ. ರಾಜನ್-ಸಾಜನ್ ಮಿಶ್ರಾ ಸಹೋದರರ ಸಂಗೀತ ಕಛೇರಿ. ಆಲಾಪ ಆರಂಭಿಸುತ್ತಿದ್ದಂತೆ ಒಂದು ನೋಟದಲ್ಲಿ ಸಂತೂರ್‌ನಂತೆ ಕಾಣುವ ವಿಭಿನ್ನ ವಾದ್ಯದ ತಂತಿಗಳನ್ನು ಮೀಟಲಾರಂಭಿಸಿದರು ಪಂ. ರಾಜನ್ ಮಿಶ್ರಾ. ಮಂದ್ರ ಸ್ಥಾಯಿಯಿಂದ ಆರಂಭವಾದ ಆಲಾಪದೊಂದಿಗೆ ಈ ವಾದ್ಯದ ತಂತಿಯ ಮೀಟಿನಿಂದ ಹೊಮ್ಮಿದ ಸುನಾದ ಬಹಳ ಇಂಪಾಗಿತ್ತು. ಇದೇ `ಸ್ವರಮಂಡಲ~ ಎಂಬ ಸಾಥಿ ವಾದ್ಯ. ಗಾಯಕರೇ ತಂತಿ ಮೀಟುತ್ತಾ ಗಾಯನದೊಂದಿಗೆ ವಾದನವನ್ನೂ ಮಾಡುವ ವಿಶಿಷ್ಟ ವಾದ್ಯ ಪ್ರಕಾರವಿದು.ಹಿರಿಯ ಕಿರಿಯ ಗಾಯಕರು ಮಾತ್ರವೇ ಸಾಥಿ ವಾದ್ಯವಾಗಿ ಬಳಸುವುದು ಈ ವಾದ್ಯದ ಮತ್ತೊಂದು ವಿಶೇಷತೆ. ಸಾಮಾನ್ಯವಾಗಿ ಕೊಳಲು, ಜಲತರಂಗಗಳಂತಹ ವಾದ್ಯಗಳಿಗೆ ಸ್ವರಮಂಡಲ ಸಾಥಿಯಾಗುವುದಿದೆ. ಆದರೆ ಇಲ್ಲಿ ಮುಖ್ಯ ಕಲಾವಿದರ ಜತೆ ಬೇರೆ ಕಲಾವಿದರು ಸ್ವರಮಂಡಲ ಸಾಥಿ ಕೊಡುವರು.   ಹಾಗೆ ನೋಡಿದರೆ ಸ್ವರಮಂಡಲವನ್ನು ಭಾರತೀಯ ಸಂಗೀತದಲ್ಲಿ ಬಳಸುವುದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಸ್ವರ ಎಂದರೆ `ನೋಟ್ಸ್~; ಮಂಡಲ ಎಂದರೆ `ಗ್ರೂಪ್~ ಇವೆರಡೂ ಸೇರಿ ಸ್ವರಮಂಡಲ ಎಂಬ ಹೆಸರು ಈ ವಾದ್ಯಕ್ಕೆ ಬಂತು. ಇದನ್ನು `ಸುರ್‌ಮಂಡಲ್~ ಎಂದೂ ಕರೆಯುತ್ತಾರೆ. ಅಲ್ಲದೆ ಇದೇ ರೀತಿಯ ವಾದ್ಯವನ್ನು ಇರಾನೀಯರು ಮತ್ತು ಅದಕ್ಕಿಂತಲೂ ಮೊದಲು ಮೊಘಲರು ಬಳಸುತ್ತಿದ್ದರು ಎನ್ನುತ್ತದೆ ಇತಿಹಾಸ. ಈ ವಿಶಿಷ್ಟ ವಾದ್ಯ ಕೆಲವು ಘರಾಣೆಗಳಿಗೆ ಮಾತ್ರ ಸೀಮಿತವಾದದ್ದು. ಹೀಗಾಗಿ ಎಲ್ಲ ಹಿಂದೂಸ್ತಾನಿ ಗಾಯಕರು ಸ್ವರಮಂಡಲ ಬಳಸುವುದಿಲ್ಲ. ಉಸ್ತಾದ್ ಬಡೇ ಗುಲಾಮ್ ಅಲಿಖಾನ್(1902-1968), ಉಸ್ತಾದ್ ಸಲಾಮತ್ ಅಲಿ ಖಾನ್ (1934-2003) ಸ್ವರಮಂಡಲ ಬಳಸುತ್ತಿದ್ದರು. ಸದ್ಯ ಖ್ಯಾತ ನಾಮರಾದ ಕಿಶೋರಿ ಅಮೋನ್‌ಕರ್, ಪಂ.ರಾಜನ್ ಸಾಜನ್ ಮಿಶ್ರಾ, ಪಂ. ಜಸ್‌ರಾಜ್, ಪಂ. ಅಜಯ್ ಪೋಹನ್‌ಕರ್ ಸ್ವರಮಂಡಲ ಬಳಸುವ ಕಲಾವಿದರು.ಶ್ರುತಿ ಮಾಡುವ ಬಗೆ

ತಂಬೂರಿಯನ್ನು ಶ್ರುತಿ ಮಾಡಿದಂತೆ ಸ್ವರಮಂಡಲವನ್ನೂ ಶ್ರುತಿ ಮಾಡಲಾಗುತ್ತದೆ. ಸ್ವರಮಂಡಲದಲ್ಲಿ ಇರುವ ತಂತಿಗಳಲ್ಲಿ ಮಂದ್ರ, ಮಧ್ಯ ಮತ್ತು ತಾರ ಮೂರು ಸ್ಥಾಯಿಗಳನ್ನೂ ನುಡಿಸಬಹುದು. ಇದನ್ನು ಅವರೋಹಾತ್ಮಕದಲ್ಲಿ ನುಡಿಸಲಾಗುತ್ತದೆ. ಯಾವುದೇ ರಾಗದ ಅವರೋಹದಲ್ಲಿ ಬರುವ ಸ್ವರಗಳನ್ನು ಬಳಸಿ ಟ್ಯೂನ್ ಮಾಡಲಾಗುತ್ತದೆ.ಸ್ವರಮಂಡಲ ಬಳಸುವುದರಿಂದ ಗಾಯಕರಲ್ಲಿ ಸ್ವರಗಳ ಸ್ವಷ್ಟತೆ ಹೆಚ್ಚುವುದರ ಜತೆಗೆ ಅಪಶ್ರುತಿ ಬರದಂತೆ ತಡೆಯುವುದು ಇದರ ಮತ್ತೊಂದು ವಿಶಿಷ್ಟ್ಯ. ಗಾಯಕರಿಗೆ ಬೆಂಬಲ ಕೊಡುವ ವಾದ್ಯ ಇದು. ಅಲ್ಲದೆ ಗಾಯಕನ ಕಛೇರಿಗೆ ಮೆರುಗು ನೀಡುವಂಥ ವಾದ್ಯವೂ ಹೌದು.ಹಿಂದೂಸ್ತಾನಿ ಸಂಗೀತದಲ್ಲಿ ಮಾತ್ರವೇ ಸಾಥಿವಾದ್ಯವಾಗಿ ಬಳಸುವ ವಾದ್ಯವಿದು. ಇದನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಬಳಸುವರು. ಸಂಗೀತದ ಹೆಚ್ಚಿನ `ನೋಟ್ಸ್~ ಸ್ವರಮಂಡಲದ ನಾದದ ಮೂಲಕ ಅನಾವರಣಗೊಳ್ಳುತ್ತದೆ.  ಸ್ವರಮಂಡಲ ಸಾಮಾನ್ಯವಾಗಿ 24ರಿಂದ 30 ಇಂಚು ಉದ್ದ ಮತ್ತು 12-15 ಇಂಚು ಅಗಲವಿರುತ್ತದೆ. ಅಂದಾಜು 21ರಿಂದ 36 ತಂತಿಗಳಿರುತ್ತವೆ. ಒಂದು ಫ್ರೇಮ್‌ನೊಳಗೆ ಇರುವ ಈ ತಂತಿಗಳನ್ನು ವಿಶೇಷ ಕೀಗಳಿಂದ ಬಿಗಿಯಲಾಗುತ್ತದೆ. ಫ್ರೇಮನ್ನು ಮರ ಅಥವಾ ಲೋಹದಿಂದ ತಯಾರಿಸಲಾಗುತ್ತದೆ. ಸ್ವರಮಂಡಲದ ಸ್ವರೂಪ ಬೇರೆ ಬೇರೆ ಆಗಿರುವುದರಿಂದ ಎಲ್ಲ ಸ್ವರ ಮಂಡಲಗಳಲ್ಲಿ ಒಂದೇ ರೀತಿಯ ಮತ್ತು ಇಂತಿಷ್ಟೇ ತಂತಿಗಳಿವೆ ಎಂಬುದನ್ನು ನಿಖರವಾಗಿ ಹೇಳಲಾಗದು. ಗಾಯಕರ ಗಾಯನ ಶೈಲಿಗೆ ಅನುಗುಣವಾಗಿ `ಕೀ~ಗಳನ್ನು ನುಡಿಸುವ ಕಾರಣ ತಂತಿಗಳ ಸಂಖ್ಯೆಯಲ್ಲೂ ವ್ಯತ್ಯಾಸವಾಗುತ್ತದೆ.ಮುಂಬೈ, ದೆಹಲಿ, ಕೋಲ್ಕತ್ತಾಗಳಲ್ಲಿ ಉತ್ತಮ ಗುಣಮಟ್ಟದ ಸ್ವರಮಂಡಲ ಲಭ್ಯ. ತಂಬೂರದಲ್ಲಿ ಎಲೆಕ್ಟ್ರಾನಿಕ್ ವಾದ್ಯ ಇರುವ ಹಾಗೆ ಇದರಲ್ಲೂ ಎಲೆಕ್ಟ್ರಾನಿಕ್ ಸ್ವರಮಂಡಲ ಸಿಗುತ್ತದೆ.ಬೆಂಗಳೂರಿನಲ್ಲೂ ಎಲ್ಲ ಸಂಗೀತ ಪರಿಕರಗಳು ಸಿಗುವ ಮಳಿಗೆಗಳಲ್ಲಿ ಈ ವಾದ್ಯ ಲಭ್ಯ. ಬ್ರಿಗೇಡ್ ರಸ್ತೆ ಬಳಿಯ ಸೌಂಡ್‌ಗ್ಲಿಡ್ಜ್ ಮ್ಯೂಸಿಕ್ ಸ್ಟೋರ್ (080-66490858), ಆರ್‌ಟಿ ನಗರದಲ್ಲಿ ಶಿವ ಮ್ಯೂಸಿಕಲ್ಸ್ (080-66493293), ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ (080-66389263), ಅರುಣಾ ಮ್ಯೂಸಿಕಲ್ಸ್ ನ್ಯೂ (080-25502971) ಗಳಲ್ಲಿ ಎಲೆಕ್ಟ್ರಾನಿಕ್ ಸ್ವರಮಂಡಲ ಸಿಗುತ್ತದೆ. ಬೆಲೆ ಅಂದಾಜು 10 ಸಾವಿರ ರೂಪಾಯಿ.   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.